Communal Case In Karnataka: 12 ದಿನಕ್ಕೊಮ್ಮೆ ರಾಜ್ಯದಲ್ಲಿ 1 ಕೋಮು ಸಂಬಂಧಿ ಕೇಸ್ ಬೆಳಕಿಗೆ: ಗೃಹ ಇಲಾಖೆ
ಕರ್ನಾಟಕದಲ್ಲಿ ಧರ್ಮಕ್ಕೆ ಸಂಬಂಧಿಸಿದಂತಹ ಘಟನೆಗಳ ಸಂಖ್ಯೆಯು ಹೆಚ್ಚಾಗಿತ್ತಿದೆ. 2019ರ ಜನವರಿಯಿಂದ 2023ರ ಫೆಬ್ರವರಿ 15 ರವರೆಗಿನ ಅಂಕಿ ಅಂಶಗಳ ಬಗ್ಗೆ ಗೃಹ ಇಲಾಖೆಯ ವರದಿ ಮಾಹಿತಿ ನೀಡಿದೆ.
ಬೆಂಗಳೂರು, ಮಾರ್ಚ್ 09: ಕರ್ನಾಟಕದಲ್ಲಿ ಕೋಮು ಗಲಭೆ ಹೆಚ್ಚಾಗುತ್ತಿರುವ ಬಗ್ಗೆ ಗೃಹ ಇಲಾಖೆ ವರದಿಯೊಂದನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಅಂಕಿ ಅಂಶಗಳನ್ನು ನೋಡಿದರೆ ಸಮಾಜ, ನಾಗರಿಕರು ಎತ್ತ ಸಾಗುತ್ತಿದ್ದಾರೆ ಎಂಬ ಕಳವಳ ವ್ಯಕ್ತವಾಗುವುದು ಸಹಜ.
ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕದಲ್ಲಿ ಧರ್ಮಕ್ಕೆ ಸಂಬಂಧಿಸಿದಂತಹ ಘಟನೆಗಳ ಸಂಖ್ಯೆಯು ಹೆಚ್ಚಾಗಿತ್ತಿದೆ ಎಂಬ ಪ್ರಶ್ನೆಗೆ ಹೌದು ಎಂಬ ಉತ್ತರ ಲಭ್ಯವಾಗಿದೆ. ಕಾರಣ 2019ರ ಜನವರಿಯಿಂದ 2023ರ ಫೆಬ್ರವರಿ 15 ರವರೆಗಿನ ಸರಾಸರಿ ಅಂಕಿ ಅಂಶಗಳನ್ನು ಈ ವರದಿ ತಿಳಿಸಿದೆ.

ಗೃಹ ಇಲಾಖೆಯ ಅಂಕಿಅಂಶಗಳ ಪ್ರಕಾರ, ಪ್ರತಿ 12 ದಿನಗಳಿಗೊಮ್ಮೆ ರಾಜ್ಯದ ಒಂದಲ್ಲಾ ಒಂದು ಮೂಲೆಯಲ್ಲಿ ಕೋಮು ಗಲಾಟೆ ಪ್ರಕರಣಗಳು ವರದಿಯಾಗುತ್ತಿವೆ. 2021 ಮತ್ತು 2020 ರಲ್ಲಿ ಎಲ್ಲೆಡೆ ಕೋವಿಡ್ ಆರ್ಭಟಿಸಿತ್ತು. ಈ ಅವಧಿಯಲ್ಲಿ ಧರ್ಮಾಕ್ಕೆ ಸಂಬಂಧಿಸಿದಂತ ಗಲಾಟೆ, ನಿಂದನೆ ಮುಂತಾದ ಪ್ರಕರಣಗಳು ಏರಿಕೆ ಆಗುತ್ತಾ ಬಂದಿದೆ. 2019ರ ಈ ಸಂಖ್ಯೆ ತೀರಾ ಕಡಿಮೆ ಇತ್ತು. ನಂತರ ದ್ವಿಗುಣಗೊಳ್ಳುತ್ತಾ ಸಾಗಿದೆ. ಈ ವರ್ಷ ಫೆಬ್ರವರಿ ಮಧ್ಯದವರೆಗೆ ಕೋಲಾರದಲ್ಲಿ ಒಂದು ಪ್ರಕರಣ ವರದಿಯಾಗಿದೆ.
2019ರಿಂದ 2023ರವರೆಗೆ ರಾಜ್ಯದಲ್ಲಿ ಒಟ್ಟಾರೆ 122 ಪ್ರಕರಣಗಳು ಕೋಮು ಸಂಬಂಧಿಸಿದ ದಾಖಲಾದ ಪ್ರಕರಣಗಳಾಗಿವೆ. ಒಟ್ಟು ಪ್ರಕರಣಗಳಲ್ಲಿ ಸುಮಾರು ಶೇಕಡಾ 50ರಷ್ಟು 2022 ರಲ್ಲಿ ಜರುಗಿವೆ. ಇನ್ನೂ ಜಿಲ್ಲಾವಾರು ಯಾವ ಜಿಲ್ಲೆಗಳಲ್ಲಿ ಹೆಚ್ಚು ಪ್ರಕರಣಗಳು ಬೆಳಕಿಗೆ ಬಂದಿವೆ ಎಂಬ ಮಾಹಿತಿಯು ಇದೆ.

ಜಿಲ್ಲಾವಾರು ಮಾಹಿತಿ ಹೀಗಿದೆ
ಗೃಹ ಇಲಾಖೆ ಪ್ರಕಾರ, ಮಲೆನಾಡಿನ ಶಿವಮೊಗ್ಗ (24), ಕರಾವಳಿ ಭಾಗದ ದಕ್ಷಿಣ ಕನ್ನಡ (ಮಂಗಳೂರು ನಗರದಲ್ಲಿ ಎರಡು ಸೇರಿದಂತೆ) 19), ದಾವಣಗೆರೆ (18) ಮತ್ತು ಹಾವೇರಿ (10) ಜಿಲ್ಲೆಗಳಲ್ಲಿ ಅತೀ ಹೆಚ್ಚು ಪ್ರಕರಣ ದಾಖಲಾಗಿವೆ. ಶಿವಮೊಗ್ಗ ಸೂಕ್ಷ್ಮ ಜಿಲ್ಲೆಯಾಗಿ ಮುಂದುವರೆದಿದೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿ ಐಜಿಪಿ) ಪ್ರವೀಣ್ ಸೂದ್ ಹೇಳಿದ್ದಾರೆ.
ಕೇಂದ್ರ ಸರ್ಕಾರ ಸೂಕ್ತ ಸಾಕ್ಷಾಧಾರಗಳ ಸಮೇತ ಕಾನೂನುಬಾಹೀರ್ ಸಂಘ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಅನ್ನು ನಿಷೇಧಿಸಿರುವುದು ಕೋಮು ಘಟನೆ ಹೆಚ್ಚಳಕ್ಕೆ ಕಾರಣವಾಗಿದೆ. ಐದು ವರ್ಷಗಳ ಕಾಲ ಪಿಎಫ್ಐ ನಿಷೇಧಗೊಂಡಿದೆ.
ಗೃಹ ಇಲಾಖೆಯು ಈಗಾಗಲೇ ರಾಜ್ಯದಲ್ಲಿ ಸೂಕ್ಷ್ಮ ಪ್ರದೇಶ (ಜಿಲ್ಲೆ) ಗುರುತಿಸಿ ಸೂಕ್ತ ಬಿಗ ಭದ್ರತೆ ವ್ಯವಸ್ಥೆ ಮಾಡುವ ಜವಾಬ್ದಾರಿಯನ್ನು ಪೊಲೀಸರಿಗೆ ವಹಿಸಿದೆ. ಕೋಮು ಘಟನೆಗಳಿಗೆ ಕಾರಣವಾಗುವ ಬಾಕಿ ಇರುವ ಸಮಸ್ಯೆಗಳನ್ನು ಗುರುತಿಸಿ ತ್ವರಿತವಾಗಿ ಪರಿಹರಿಸಲು ಜಿಲ್ಲಾಡಳಿತಗಳಿಗೂ ನಿರ್ದೇಶಿಸಿದೆ.
ಇನ್ನೂ ನಿರ್ದಿಷ್ಟ ಸಮುದಾಯದ ಭಾವನೆಗಳಿಗೆ ನೋವು ಉಂಟುಮಾಡುವ ಯಾವುದೇ ಕೃತ್ಯ ಅಥವಾ ಹೇಳಿಕೆಯನ್ನು ತಡೆಗಟ್ಟಲು ಸೂಕ್ಷ್ಮ ಪ್ರದೇಶಗಳಲ್ಲಿ ಕ್ರಮಗಳನ್ನು ಕೈಗೊಳ್ಳಬೇಕು. ಅದರಲ್ಲೂ ಧಾರ್ಮಿಕ ಕಾರ್ಯಕ್ರಮ, ಬೃಹತ್ ಮೆರವಣಿಗೆಗಳಲ್ಲಿ ಹೆಚ್ಚು ನಿಗಾ ವಹಿಸುವಂತೆ ತಾಕೀತು ಮಾಡಲಾಗಿದೆ.
ಈ ಸಂಬಂಧ ಪೊಲೀಸರು ಆಗಾಗ ಠಾಣೆ ಮಟ್ಟದಲ್ಲಿ ಶಾಂತಿ ಸಭೆ ನಡೆಸುವ ಅಗತ್ಯವಿದೆ. ಸಮುದಾಯಗಳ ಮಧ್ಯೆ ಬಿರುಕು, ಗಲಭೆ ಏಳುವಂತಹ ಸಂಭಾವ್ಯ ಸಾಮಾಜಿಕ ಜಾಲತಾನ ಪೋಸ್ಟ್ ಪತ್ತೆಗೆ ವಿಶೇಷ ಗಮನ ಹರಿಸುತ್ತಿದೆ ಎಂದು ತಿಳಿದು ಬಂದಿದೆ.












Click it and Unblock the Notifications