ಕಂದಾಯ ಆಯುಕ್ತಾಲಯ; ವಿಲೀನಗೊಳ್ಳುವ ಕಚೇರಿ, ಹುದ್ದೆಗಳ ಮಾಹಿತಿ
ಬೆಂಗಳೂರು, ಆಗಸ್ಟ್ 08; ಕರ್ನಾಟಕ ಸರ್ಕಾರ ಕಂದಾಯ ಆಯುಕ್ತಾಲಯವನ್ನು ಸ್ಥಾಪನೆ ಮಾಡುವ ಬಗ್ಗೆ ರಾಜ್ಯ ಪತ್ರದ ಮೂಲಕ ಅಧಿಕೃತ ಆದೇಶ ಹೊರಡಿಸಿದೆ. ಅಲ್ಲದೇ ಆಯುಕ್ತಾಲಯಕ್ಕೆ ವಿಲೀನಗೊಳ್ಳುತ್ತಿರುವ ಕಛೇರಿಗಳು, ನಿಯೋಜನೆ ಮಾಡಲಾಗುವ ಹುದ್ದೆಗಳ ವಿವರಗಳನ್ನು ನೀಡಿದೆ.
ಕಂದಾಯ ಆಯುಕ್ತಾಲಯ ಸ್ಥಾಪನೆ ಮಾಡುವ ಕುರಿತು ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, ರಾಜೇಂದರ್ ಕುಮಾರ್ ಕಟಾರಿಯಾ, ಸರ್ಕಾರದ ಪ್ರಧಾನ ಕಾರ್ಯದರ್ಶಿ, ಕಂದಾಯ ಇಲಾಖೆ ಆದೇಶ ಹೊರಡಿಸಿದ್ದರು. ಈಗ ರಾಜ್ಯಪತ್ರದಲ್ಲಿ ಇದನ್ನು ಪ್ರಕಟಿಸಲಾಗಿದೆ.

ಆಡಳಿತದ ಹಿತದೃಷ್ಟಿಯಿಂದ ಕೆಲಸದ ಪ್ರಕ್ರಿಯೆಗಳನ್ನು ಸರಳೀಕರಣಗೊಳಿಸುವ ಮತ್ತು ದಕ್ಷತೆಯನ್ನು ಹೆಚ್ಚಿಸುವ ಹಾಗೂ ಅಧಿಕಾರ ವಿಕೇಂದ್ರಿಕರಣ ಮಾಡುವ ಉದ್ದೇಶದಿಂದ ನಾಗರೀಕ ಸ್ನೇಹಿಯಾಗಿ ಕಾರ್ಯನಿರ್ವಹಿಸಲು ರಾಜ್ಯ ಮಟ್ಟದಲ್ಲಿ ಕಂದಾಯ ಆಯುಕ್ತಾಲಯವನ್ನು ಹಾಗೂ ಭಾ. ಆ. ವೃಂದದ ಸೂಪರ್ ಟೈಂ ಸೇಲ್/ ಆಯ್ಕೆ ಶ್ರೇಣಿಗಿಂತ ಕಡಿಮೆ ಇಲ್ಲದ ಭಾ. ಆ. ಸೇ., ದರ್ಜೆಯ (IAS Cadre) ಕಂದಾಯ ಆಯುಕ್ತರು (ಕಂದಾಯ, ಭೂಸ್ವಾಧೀನ, ಪುನರ್ ವಸತಿ ಮತ್ತು ಪುನರ್ ನಿರ್ಮಾಣ ಮತ್ತು ಸಾಮಾಜಿಕ ಭದ್ರತೆ) ಹುದ್ದೆಯನ್ನು ಸೃಜಿಸಿ ಆದೇಶ ಹೊರಡಿಸಲಾಗಿದೆ.
2019-20ನೇ ಸಾಲಿನ ರಾಜ್ಯ ಸರ್ಕಾರದ ಆಯವ್ಯಯ ಭಾಷಣದಲ್ಲಿ ಕಂದಾಯ ಇಲಾಖೆಯಲ್ಲಿ ಕೆಲಸ ಕಾರ್ಯಗಳನ್ನು ಸುಗಮವಾಗಿ ನಿರ್ವಹಿಸಲು ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ಕೆಲಸಗಳ ಪ್ರಕ್ರಿಯೆಗಳನ್ನು ಸರಳೀಕರಣಗೊಳಿಸುವುದು ಅವಶ್ಯಕವೆಂದು ಮನಗಂಡು ಕಂದಾಯ ಇಲಾಖೆಯಲ್ಲಿ ಒಂದು ಆಯುಕ್ತಾಲಯವನ್ನು ರಚಿಸುವ ಸಾಧ್ಯತೆಯ ಬಗ್ಗೆ ಪರಿಶೀಲಿಸಲಾಗುವುದೆಂದು ಘೋಷಿಸಲಾಗಿತ್ತು.
ಬಳಿಕ ಕಂದಾಯ ಆಯುಕ್ತಾಲಯದ ವಿನ್ಯಾಸ, ಕಾರ್ಯವೈಖರಿ, ಸಿಬ್ಬಂದಿ ರಚನೆ ಮತ್ತು ಕೇಂದ್ರ ಸ್ಥಳ ಇವುಗಳಿಗೆ ಸಂಬಂಧಿಸಿದಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯಿಂದ ರೂಪುರೇಷೆಗಳನ್ನು ಸಿದ್ಧಪಡಿಸಲು ಅನುಮೋದನೆ ಪಡೆದುಕೊಂಡು, ನಂತರ ರಾಜ್ಯಾದ್ಯಂತ ಕಾರ್ಯನಿರ್ವಹಿಸಲು ಅವಶ್ಯವಿರುವ ಸಂಪನ್ಮೂಲ ಸಂಗ್ರಹ, ಸಿಬ್ಬಂದಿ ವ್ಯವಸ್ಥೆ ಮತ್ತು ಯೋಜನೆಗಳ ಅನುಷ್ಠಾನದ ಮೂಲಕ ಗ್ರಾಮೀಣ ಜನರ ಜೀವನ ಮಟ್ಟವನ್ನು ಸುಧಾರಿಸಲು ಅವಶ್ಯವಿರುವ ಬೆಂಬಲ ಮತ್ತು ಪರಿವೀಕ್ಷಣೆ ಮಾಡಲು ಒಟ್ಟಾರೆ ಕಂದಾಯ ಕಾಯ್ದೆಯ ಆಷಯಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಪ್ರತ್ಯೇಕ ಆಯುಕ್ತಾಲಯ ಸ್ಥಾಪನೆಯಿಂದ ಅನುಕೂಲವಾಗಲಿದೆ ಎಂಬುದನ್ನು ಮನಗಂಡು ಆಯುಕ್ತಾಲಯವನ್ನು ಸ್ಥಾಪಿಸಿ ಆದೇಶ ಹೊರಡಿಸಲಾಗಿದೆ.
ವಿಲೀನಗೊಳ್ಳುವ ಕಛೇರಿ, ಹುದ್ದೆಗಳು; ರಾಜ್ಯಪತ್ರದಲ್ಲಿ ಕಂದಾಯ ಆಯುಕ್ತಾಲಯದ ರಚನೆ, ಕಾರ್ಯಹಂಚಿಕೆ, ಹುದ್ದೆಗಳ ನೇಮಕಾತಿ, ವಿಲೀನಗೊಳಿಸಲಾಗುತ್ತಿರುವ ಕಛೇರಿಗಳು, ಕಂದಾಯ ಆಯುಕ್ತಾಲಯಕ್ಕೆ ಸ್ಥಳಾಂತರಗೊಳ್ಳುತ್ತಿರುವ ಅಧಿಕಾರಿ/ ನೌಕರರ ಮಾಹಿತಿ, ಹೊಸದಾಗಿ ಸೃಜಿಸಲಾಗುತ್ತಿರುವ ಹುದ್ದೆಗಳ ಮಾಹಿತಿಯನ್ನು ನೀಡಲಾಗಿದೆ.
ಅಟಲ್‌ಜಿ ಜನಸ್ನೇಹಿ ನಿರ್ದೇಶನಾಲಯ (ಕಂದಾಯ ಸಚಿವಾಲಯ), ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ನಿರ್ದೇಶನಾಲಯ (ಕಂದಾಯ ಸಚಿವಾಲಯ), ಭೂಮಿ ಉಸ್ತುವಾರಿ ಕೋಶ (ಕಂದಾಯ ಇಲಾಖೆ, ವಿಪತ್ತು ನಿರ್ವಹಣೆ ನೊಂದಣಿ, ಮುದ್ರಾಂಕ, ಭೂಮಿ, UPOR) ವಿಲೀನಗೊಳಿಸಲಾಗುತ್ತಿರುವ ಕಛೇರಿಗಳು.
ಉಳಿದಂತೆ ಕಂದಾಯ ವಿಶೇಷ ಕೋಶ (ಕಂದಾಯ ಸಚಿವಾಲಯ), ಕಂದಾಯ ಗ್ರಾಮಗಳ ರಚನೆ ಕೋಶ (ಕಂದಾಯ ಸಚಿವಾಲಯ), ಲೆಕ್ಕಪರಿಶೋಧನಾ ಶಾಖೆ (ಕಂದಾಯ ಸಚಿವಾಲಯ), ಮನೆ ಬಾಡಿಗೆ ನಿಯಂತ್ರಕರ ಕಛೇರಿ (ಜಿಲ್ಲಾಧಿಕಾರಿ ಕಚೇರಿ, ಬೆಂಗಳೂರು ನಗರ ಜಿಲ್ಲೆ), ಜಾರಿದಳ, ಬೆಂಗಳೂರು (ಜಿಲ್ಲಾಧಿಕಾರಿ ಕಚೇರಿ, ಬೆಂಗಳೂರು ನಗರ ವಿಲೀನಗೊಳಿಸಲಾಗುತ್ತಿರುವ ಕಛೇರಿಗಳಾಗಿವೆ.
ಪ್ರಸ್ತುತ ಆಯುಕ್ತರು, ಭೂಮಾಪನ, ನಿರ್ದೇಶಕರು, ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ವಿಭಾಗ, ಪ್ರಧಾನ ಕಾರ್ಯದರ್ಶಿ, ಕಂದಾಯ ಇಲಾಖೆ ಇವರ ಆಡಳಿತ ವ್ಯಾಪ್ತಿಯಲ್ಲಿ ಹಾಗೂ ಭೂಮಿ ಮತ್ತು ಯುಪಿಒಆರ್ ವಿಭಾಗಗಳು, ಸರ್ಕಾರದ ಪ್ರಧಾನ ಕಾರ್ಯದರ್ಶಿ (ವಿಪತ್ತು ನಿರ್ವಹಣೆ, ಭೂಮಿ & ಯುಪಿಒಆರ್ (UPOR)) ಇವರ ಆಡಳಿತ ವ್ಯಾಪ್ತಿಯಲ್ಲಿ ಬರುತ್ತಿದ್ದವು.
ಇನ್ನು ಮುಂದೆ ನಿರ್ದೇಶಕರು, ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ವಿಭಾಗವು ಸರ್ಕಾರದ ಪ್ರಧಾನ ಕಾರ್ಯದರ್ಶಿ (ವಿಪತ್ತು ನಿರ್ವಹಣೆ, ಭೂಮಿ & ಯುಪಿಒಆರ್ (UPCR) ಇವರ ವ್ಯಾಪ್ತಿಗೆ ಹಾಗೂ ಯುಪಿಒಆರ್ ವಿಭಾಗವು ಸರ್ಕಾರದ ಪ್ರಧಾನ ಕಾರ್ಯದರ್ಶಿ, ಕಂದಾಯ ಇಲಾಖೆ ಇವರ ವ್ಯಾಪ್ತಿಗೆ ಬರುವುದರೊಂದಿಗೆ 7 ವಿಭಾಗಗಳ ಎಲ್ಲಾ ಕಛೇರಿ/ ಹುದ್ದೆಗಳನ್ನು ಕಂದಾಯ ಆಯುಕ್ತರ ವ್ಯಾಪ್ತಿಯೊಳಗೆ/ ಅಧೀನಕ್ಕೆ ತಂದು ಕಂದಾಯ ಆಯುಕ್ತಾಲಯವನ್ನು ಸ್ಥಾಪಿಸಲಾಗುತ್ತದೆ.
ಕಂದಾಯ ಆಯುಕ್ತಾಲಯವನ್ನು ಸ್ಥಾಪಿಸಿ ಕಾರ್ಯಗತಗೊಳಿಸಲು ಒಟ್ಟು 274 ಹುದ್ದೆಗಳನ್ನು ವಿಲೀನಗೊಳಿಸಲು ಉದ್ದೇಶಿಸಿ ಹಾಗೂ ಎಲ್ಲಾ ಕಛೇರಿ ಹುದ್ದೆಗಳನ್ನ ವಿಲೀನಗೊಳಿಸುವ, ಸ್ಥಳಾಂತರಿಸುವ ವಿಭಾಗಳು ಹಾಗೂ ಅವರುಗಳು ನಿರ್ವಹಿಸಬೇಕಾದ ವಿಷಯಗಳು ಮತ್ತು ಅವುಗಳಲ್ಲಿರುವ ಎಲ್ಲಾ ಹುದ್ದೆಗಳ ವಿವರಗಳನ್ನು ನೀಡಿ ಆದೇಶ ಹೊರಡಿಸಲಾಗಿದೆ.
ರಾಜ್ಯ ಮಟ್ಟದಲ್ಲಿ ಈಗಾಗಲೇ ಕಂದಾಯ ಆಯುಕ್ತಾಲಯವನ್ನು ಸ್ಥಾಪಿಸಲಾಗಿದ್ದು, ಸಾರ್ವಜನಿಕರಿಗೆ ಜಿಲ್ಲಾ ಮಟ್ಟದ, ರಾಜ್ಯ ಮಟ್ಟದ ಸೇವೆಗಳು ನಿಗದಿತ ಕಾಲಮಿತಿಯಲ್ಲಿ ಲಭ್ಯವಾಗಬೇಕೆಂದು ಕಂದಾಯ ಆಯುಕ್ತಾಲಯವನ್ನು ಸ್ಥಾಪಿಸಿ ಕಾರ್ಯಗತಗೊಳಿಸಲು ಕಂದಾಯ ಆಯುಕ್ತಾಲಯಕ್ಕೆ 7 ವಿಭಾಗಗಳಿಗೆ ಸಂಬಂಧಿಸಿದಂತೆ ಒಟ್ಟು 274 ಹುದ್ದೆಗಳನ್ನು ವಿಲೀನಗೊಳಿಸಲಾಗಿದೆ.
ಕಂದಾಯ ಇಲಾಖೆಯೊಳಗೆ ಹೊಸದಾಗಿ ಕೆತ್ತಲಾದ ಕಂದಾಯ ಆಯುಕ್ತಾಲಯದಲ್ಲಿ ಹೊಸ ಆಯುಕ್ತರ ಹುದ್ದೆಯನ್ನು ಸೃಜಿಸಲಾಗಿದೆ. ಹೆಚ್ಚಿನ ಹುದ್ದೆಗಳನ್ನು ಕಂದಾಯ ಇಲಾಖೆಯ ಅಡಿಯಲ್ಲಿ ವಿವಿಧ ವಿಭಾಗಗಳು/ ವಿಭಾಗಗಳ ಕಛೇರಿಯಿಂದ ತೆಗೆದುಕೊಳ್ಳಲಾಗಿದೆ. ಫ್ಲೈಯಿಂಗ್ ಸ್ಕ್ವಾಡ್ (ಎನ್‌ಫೋರ್ಸ್ ಮಂಟ್ ವಿಂಗ್) ನೇರವಾಗಿ ಪ್ರಧಾನ ಕಾರ್ಯದರ್ಶಿಯ ನಿಯಂತ್ರಣದಲ್ಲಿರುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ.
ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ವಿಭಾಗವು ಸರ್ಕಾರದ ಪ್ರಧಾನ ಕಾರ್ಯದರ್ಶಿ(ವಿಪತ್ತು ನಿರ್ವಹಣೆ, ಭೂಮಿ ಯಪಿಓಆರ್) ಇವರ ವ್ಯಾಪ್ತಿಗೆ ಹಾಗೂ ಭೂಮಿ & ಯುಪಿಒಆರ್(UPOR) ವಿಭಾಗವು ಸರ್ಕಾರದ ಪ್ರಧಾನ ಕಾರ್ಯದರ್ಶಿ, ಕಂದಾಯ ಇಲಾಖೆ ಇವರ ವ್ಯಾಪ್ತಿಗೆ ವಿನಿಮಯ ಮಾಡಿಕೊಳ್ಳಲಾಗಿದೆ.












Click it and Unblock the Notifications