ತುಮಕೂರಿನ ತಿಪಟೂರು ಕೊಬ್ಬರಿ ಆಯ್ತು.. ಈಗ ತೆಂಗಿನ ಚಿಪ್ಪಿಗೆ ವಿದೇಶಗಳಲ್ಲೂ ಬಲು ಡಿಮ್ಯಾಂಡ್, ಒಂದಕ್ಕೆ ಬೆಲೆ ಎಷ್ಟು?
Coconut Shell: ಕಲ್ಪತರು ನಾಡು ಅಂತಲೇ ಹೆಸರುವಾಸಿಯಾಗಿರುವ ತುಮಕೂರು ಜಿಲ್ಲೆಯ ತಿಪಟೂರು ಎಪಿಎಂಸಿಯಲ್ಲಿ ಕೊಬ್ಬರಿಯು ದಾಖಲೆ ಮಟ್ಟದಲ್ಲಿ ಮಾರಾಟ ಆಗಿರುವುದನ್ನು ಕೇಳಿಯೇ ಇರುತ್ತೇವೆ. ಆದರೆ ಇದೀಗ ತೆಂಗಿನ ಕಾಯಿ ಚಿಪ್ಪಿಗೆ ಇದ್ದಕ್ಕಿದ್ದಂತೆ ದೇಶ-ವಿದೇಶಗಳಲ್ಲಿ ಬೇಡಿಕೆ ಹೆಚ್ಚಾಗಿದೆ. ಹಾಗಾದ್ರೆ ಇದಕ್ಕೆ ಕಾರಣ ಏನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಮನೆಗಳಲ್ಲಿ ಅನಗತ್ಯ ಕಸವೆಂದು ಎಸೆಯಲ್ಪಡುತ್ತಿದ್ದ ಅಥವಾ ಕೇವಲ ಒಲೆಯ ಸೌದೆಯಾಗಿ ಬಳಕೆ ಮಾಡುತ್ತಿದ್ದ ತೆಂಗಿನಕಾಯಿ ಚಿಪ್ಪುಗಳಿಗೆ ಈಗ ದೇಶೀಯ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿದೆ. ಹಿಂದೆ ಉಚಿತವಾಗಿ ಸಿಗುತ್ತಿದ್ದ ಈ ಚಿಪ್ಪುಗಳು ಈಗ ತೆಂಗು ಬೆಳೆಗಾರರು ಮತ್ತು ಸಣ್ಣ ವ್ಯಾಪಾರಿಗಳ ಪಾಲಿಗೆ ಭಾರಿ ಆದಾಯ ತಂದುಕೊಡುವ ಪ್ರಮುಖ ಮೂಲವಾಗಿವೆ.

ಒಂದು ಜೊತೆ ತೆಂಗಿನ ಚಿಪ್ಪಿಗೆ ಬೆಲೆ ಎಷ್ಟು?
ಪ್ರಸ್ತುತ ಮಾರುಕಟ್ಟೆಯಲ್ಲಿ ಒಂದು ಜೊತೆ ತೆಂಗಿನ ಚಿಪ್ಪಿಗೆ (ಅಂದರೆ 2 ಅರ್ಧ ಭಾಗಗಳಿಗೆ) 3.50 ರೂಪಾಯಿಗಳವರೆಗೂ ಉತ್ತಮ ಧಾರಣೆ ಸಿಗುತ್ತಿದೆ. ಕೃಷಿ ತ್ಯಾಜ್ಯವೆಂದು ಪರಿಗಣಿಸಲಾಗುತ್ತಿದ್ದ ಈ ಉತ್ಪನ್ನ ಇಂದು ತೆಂಗು ಬೆಳೆಗಾರರಿಗೆ ಹೆಚ್ಚುವರಿ ಲಾಭ ತಂದುಕೊಡುತ್ತಿದೆ.
ತೆಂಗಿನ ಚಿಪ್ಪಿನಿಂದ ಏನೆಲ್ಲಾ ತಯಾರಿಸಲಾಗುತ್ತದೆ?
* ಆಧುನಿಕ ತಂತ್ರಜ್ಞಾನ ಹಾಗೂ ವಿವಿಧ ವೈಜ್ಞಾನಿಕ ಕಾರಣದಿಂದಾಗಿ ತೆಂಗಿನ ಚಿಪ್ಪಿಗೆ ಭಾರಿ ಬೇಡಿಕೆ ಬಂದಿದೆ. ಆಯುರ್ವೇದ, ಗಿಡಮೂಲಿಕೆ ಹಾಗೂ ವಿವಿಧ ಪ್ರಕೃತಿ ಚಿಕಿತ್ಸೆಯ ಔಷಧೀಯ ಉತ್ಪನ್ನಗಳ ತಯಾರಿಕೆಯಲ್ಲಿ ಇದನ್ನು ಬಳಕೆ ಮಾಡಲಾಗುತ್ತಿದೆ.
* ಸೌಂದರ್ಯವರ್ಧಕ ಉದ್ಯಮ: ಚರ್ಮದ ಆರೈಕೆ, ಫೇಸ್ ಪ್ಯಾಕ್ ಹಾಗೂ ಆಧುನಿಕ ಸೌಂದರ್ಯವರ್ಧಕ ಸಾಬೂನು/ಕ್ರೀಮ್‌ಗಳ ತಯಾರಿಕೆಯಲ್ಲಿ ಸಕ್ರಿಯ ಕಾರ್ಬನ್ ಆಗಿ ಬಳಕೆ ಮಾಡಲಾಗುತ್ತಿದೆ.
* ಆಕ್ಟಿವೇಟೆಡ್ ಚಾರ್ಕೋಲ್, ಸೌಂದರ್ಯವರ್ಧಕ ಫಿಲ್ಟರ್‌ಗಳು ಹಾಗೂ ವಿವಿಧ ಶೋಧನೆ ಪ್ರಕ್ರಿಯೆಯ ಕೈಗಾರಿಕಾ ಘಟಕಗಳಲ್ಲಿ ಇದಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ.
ಬೇಡಿಕೆ ಹೆಚ್ಚಾಗಲು ಪ್ರಮುಖ ಕಾರಣಗಳೇನು?
ಕಳೆದ ಕೆಲವು ವರ್ಷಗಳಿಂದ ರಾಜ್ಯದಲ್ಲಿ ಎದುರಾಗಿರುವ ತೀವ್ರ ಬಿಸಿಲು, ಮಳೆಯ ಅಭಾವ ಹಾಗೂ ಕೀಟ, ರೋಗಬಾಧೆಗಳ ಹಿನ್ನೆಲೆಯಲ್ಲಿ ತೆಂಗಿನ ಇಳುವರಿ ಗಣನೀಯವಾಗಿ ಕುಸಿದಿದೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ತೆಂಗಿನ ಚಿಪ್ಪಿನ ಪೂರೈಕೆಯಲ್ಲೂ ಕೊರತೆ ಉಂಟಾಗಿದೆ.
ಬೇಡಿಕೆ ಹೆಚ್ಚಿರುವುದರಿಂದ ಕರಾವಳಿ, ಮಲೆನಾಡು ಹಾಗೂ ತುಮಕೂರು ಸೇರಿದಂತೆ ಪ್ರಮುಖ ತೆಂಗು ಬೆಳೆಯುವ ಭಾಗಗಳಲ್ಲಿ ವ್ಯಾಪಾರಿಗಳು ಮತ್ತು ಮಧ್ಯವರ್ತಿಗಳು ನೇರವಾಗಿ ರೈತರ ತೋಟ, ಮನೆ ಬಾಗಿಲು ಹಾಗೂ ಅಂಗಡಿಗಳಿಗೆ ತೆರಳಿ ಉತ್ತಮ ಬೆಲೆ ನೀಡಿ ಚಿಪ್ಪುಗಳನ್ನು ಖರೀದಿ ಮಾಡುತ್ತಿದ್ದಾರೆ. ಬಳಿಕ ಅವುಗಳನ್ನು ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ತೆಂಗಿನ ಚಿಪ್ಪಿನ ಮರುಬಳಕೆ ಹಾಗೂ ಹೆಚ್ಚುತ್ತಿರುವ ಜಾಗತಿಕ ಬೇಡಿಕೆಯು 'ಕಸದಿಂದ ರಸ' ಎಂಬ ತತ್ತ್ವಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ. ಇದು ರೈತರ ಆದಾಯವನ್ನು ಹೆಚ್ಚಿಸುವುದಲ್ಲದೆ ಜೊತೆಗೆ ಸ್ಥಳೀಯವಾಗಿ ಚಿಪ್ಪು ಸಂಗ್ರಹಣೆ ಮತ್ತು ರಫ್ತು ಪ್ರಕ್ರಿಯೆಯ ಮೂಲಕ ಗ್ರಾಮೀಣ ಭಾಗದಲ್ಲಿ ಹೊಸ ಉದ್ಯೋಗ ಹಾಗೂ ಆರ್ಥಿಕ ಚಟುವಟಿಕೆಗಳಿಗೆ ದಾರಿ ಮಾಡಿಕೊಟ್ಟಿದೆ ಎನ್ನಲಾಗಿದೆ.
ವಿದೇಶಗಳಿಗೂ ಚಿಪ್ಪುಗಳ ರಫ್ತು
ಅದರಲ್ಲೂ ರಾಜ್ಯದ ಕೊಬ್ಬರಿ ಚಿಪ್ಪಿನಿಂದ ತಯಾರಾಗುವ ಇದ್ದಿಲಿಗೆ ಹೊರರಾಜ್ಯಗಳಲ್ಲಿ ಭಾರಿ ಬೇಡಿಕೆಯಿದೆ. ಇಲ್ಲಿನ ವ್ಯಾಪಾರಿಗಳು ಚಿಪ್ಪನ್ನು ಸುಟ್ಟು ಇದ್ದಿಲನ್ನಾಗಿ ಪರಿವರ್ತಿಸಿ ವಿವಿಧ ರಾಜ್ಯಗಳಿಗೆ ಪೂರೈಕೆ ಮಾಡುತ್ತಾರೆ. ಅಲ್ಲಿನ ಕಾರ್ಖಾನೆಗಳಲ್ಲಿ ಇದನ್ನ ಸ್ವಚ್ಛಗೊಳಿಸಿ, ಒಣಗಿಸಿ, ನಿಗದಿತ ಗಾತ್ರಕ್ಕೆ ತಕ್ಕಂತೆ ಕತ್ತರಿಸಿ ಪ್ಯಾಕ್ ಮಾಡಿ ವಿದೇಶಗಳಿಗೂ ರಫ್ತು ಮಾಡಲಾಗುತ್ತದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಕೊಬ್ಬರಿ ಚಿಪ್ಪನ್ನು ಕೇವಲ ಇದ್ದಿಲಿಗೆ ಮಾತ್ರವಲ್ಲದೆ ಇನ್ನು ಹಲವು ಉದ್ಯಮಗಳಲ್ಲಿ ಪ್ರಮುಖ ಕಚ್ಚಾ ವಸ್ತುವಾಗಿ ಬಳಕೆ ಮಾಡಲಾಗುತ್ತದೆ. ಸೌಂದರ್ಯವರ್ಧಕಗಳು, ಮುಖದ ಕ್ರೀಮ್‌ಗಳು, ನೀರು ಶುದ್ಧೀಕರಣದ ಪ್ರಕ್ರಿಯೆ ಸೇರಿದಂತೆ ಹಲವು ಉದ್ದೇಶಗಳಿಗಾಗಿ ಕೊಬ್ಬರಿ ಚಿಪ್ಪನ್ನು ಬಳಕೆ ಮಾಡಲಾಗುತ್ತದೆ. ಆದ್ದರಿಂದ ಇದಕ್ಕೆ ಜಾಗತಿಕ ಮಟ್ಟದಲ್ಲಿ ದೊಡ್ಡ ಮಟ್ಟದ ಬೇಡಿಕೆಯಿದೆ ಎಂದು ಹಲವರು ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಇದರಿಂದ ಚಪ್ಪಿಗೆ ಎಷ್ಟು ಬೇಡಿಕೆ ಇದೆ ಎಂಬುದನ್ನ ಎತ್ತಿತೋರಿಸುತ್ತದೆ.


Click it and Unblock the Notifications
