ಕೊಬ್ಬರಿ ಅಷ್ಟೇ ಅಲ್ಲ, ತೆಂಗಿನ ಕಾಯಿಯ ಪ್ರತಿಯೊಂದು ಭಾಗಕ್ಕೂ ಈಗ ಬಂಗಾರದ ಬೆಲೆ, ರೈತರಿಗೆ ಸಿಹಿ-ಕಹಿ ಅನುಭವ
ರಾಜ್ಯದಲ್ಲಿ ಕೊಬ್ಬರಿ ಜೊತೆಗೆ, ತೆಂಗಿನ ಉಳಿದ ಉಪ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗಿದೆ. ಇದೀಗ ತೆಂಗಿನ ಸಿಪ್ಪೆ ಸುಲಿಯುವವರಿಗೂ ಬಲು ಡಿಮ್ಯಾಂಡ್ ಇದ್ದು, ಹೆಚ್ಚಿನ ಕೂಲಿ ನೀಡಬೇಕಾದ ಪರಿಸ್ಥಿತಿ ಇದೆ. ಹಾಗಾದ್ರೆ ಕೂಲಿಕಾರರಿಗೆ ಸಿಗುವ ಆದಾಯ ಎಷ್ಟು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಅದರಲ್ಲೂ ಕಲ್ಪತರು ನಾಡು ಅಂತಲೇ ಹೆಸರುವಾಸಿಯಾಗಿರುವ ತುಮಕೂರು ಜಿಲ್ಲೆಯ ತಿಪಟೂರು ತಲ್ಲೂಕಿನ ಎಪಿಎಂಸಿಯಲ್ಲಿ ದಾಖಲೆ ಬೆಲೆಗೆ ಕೊಬ್ಬರಿ ಮಾರಾಟವಾದ ಉದಾಹರಣೆಗಳಿವೆ. ಯಾಕಂದ್ರೆ ಇಲ್ಲಿನ ಕೊಬ್ಬರಿಗೆ ಬೇಡಿಕೆ ಹೆಚ್ಚಿದೆ. ಜೊತೆಗೆ ತೆಂಗಿನ ಇತರ ಉಪ ಉತ್ಪನ್ನಗಳ ಬೆಲೆ ಏರಿಕೆಯಾಗಿದ್ದು, ಇದರಿಂದ ರೈತರ ಮುಖದಲ್ಲಿ ಸಂತಸ ಹೆಚ್ಚಾದಂತಾಗಿದೆ. ಮತ್ತೊಂದೆಡೆ ಕೂಲಿಕಾರರ ಕೊರತೆ ಇದ್ದು, ಹೆಚ್ಚು ಖರ್ಚು ತಗಲುವ ಆತಂಕವೂ ಇದೆ.

ತೆಂಗು ಬೆಳೆಗಾರರಿಗೆ ಹೊಸ ಸವಾಲು
ರಾಜ್ಯದ ಮಾರುಕಟ್ಟೆಯಲ್ಲಿ ಇತ್ತೀಚಿನ ದಿನಗಳಲ್ಲಿ ಒಣ ಕೊಬ್ಬರಿ ಮಾತ್ರವಲ್ಲದೆ, ತೆಂಗಿನ ಮರದಿಂದ ಸಿಗುವ ಪ್ರತಿಯೊಂದು ಉಪ ಉತ್ಪನ್ನಗಳಿಗೂ ಉತ್ತಮ ಬೇಡಿಕೆ ಇದೆ. ತೆಂಗಿನಕಾಯಿ, ಕೊಬ್ಬರಿ, ತೆಂಗಿನ ನಾರು, ಚಿಪ್ಪು ಹಾಗೂ ಕೋಕೋ ಪೀಟ್ ಪ್ರತಿಯೊಂದಕ್ಕೂ ಉತ್ತಮ ಬೆಲೆ ಸಿಗುತ್ತಿದ್ದು, ಬೆಳೆಗಾರರಲ್ಲಿ ಹೊಸ ಭರವಸೆ ಮೂಡಿಸಿದೆ. ಆದರೆ ಮತ್ತೊಂದೆಡೆ ಕೊಬ್ಬರಿ ಸುಲಿಯುವ ಕಾರ್ಮಿಕರ ಅಭಾವ ಮತ್ತು ಅವರ ಕೂಲಿ ದರದಲ್ಲಿ ಆಗಿರುವ ಏರಿಕೆ ಬೆಳೆಗಾರರಿಗೆ ಹೊಸ ಸವಾಲಾಗಿ ಪರಿಣಮಿಸಿದೆ.
ತೆಂಗಿನ ಉಪ ಉತ್ಪನ್ನಗಳಿಗೆ ಹೆಚ್ಚಿದ ಬೇಡಿಕೆ
ಈ ಹಿಂದೆ ಬೆಳೆಗಾರರು ಕೇವಲ ಕೊಬ್ಬರಿ ಅಥವಾ ಹಸಿ ತೆಂಗಿನಕಾಯಿಯನ್ನಷ್ಟೇ ಪ್ರಮುಖ ಆದಾಯದ ಮೂಲವೆಂದು ನಂಬಿದ್ದರು. ಆದರೆ ಪ್ರಸ್ತುತ ಪರಿಸ್ಥಿತಿ ಬದಲಾಗಿದೆ. ತೆಂಗಿನ ಚಿಪ್ಪನ್ನು ಸಕ್ರಿಯ ಇದ್ದಿಲು ತಯಾರಿಕೆಗೆ ಮತ್ತು ಕರಕುಶಲ ವಸ್ತುಗಳ ತಯಾರಿಕೆಗೆ ಹೆಚ್ಚಾಗಿ ಬಳಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಚಿಪ್ಪಿಗೂ ಉತ್ತಮ ಬೆಲೆ ಸಿಗುತ್ತಿದೆ. ಅಲ್ಲದೆ ತೆಂಗಿನ ನಾರಿನಿಂದ ಹಾಸಿಗೆ, ಹಗ್ಗ ಮತ್ತು ಕೃಷಿ ಕ್ಷೇತ್ರದಲ್ಲಿ ಗಿಡಗಳ ಪಾಲನೆಗೆ ಬಳಸುವ ಕೋಕೋ ಪೀಟ್ ಉತ್ಪನ್ನಗಳಿಗೆ ವಿದೇಶಗಳಲ್ಲೂ ಬೇಡಿಕೆ ಹೆಚ್ಚಿದೆ. ಇದರಿಂದಾಗಿ ಸಂಸ್ಕರಣಾ ಘಟಕಗಳು ತೆಂಗಿನ ಎಲ್ಲಾ ಭಾಗಗಳನ್ನು ಹೆಚ್ಚು ಬೆಲೆಗೆ ಖರೀದಿಸುತ್ತಿವೆ.
ಕಾರ್ಮಿಕರ ಕೂಲಿ ದರದಲ್ಲಿ ಭಾರಿ ಏರಿಕೆ
ಒಂದೆಡೆ ಉತ್ಪನ್ನಗಳಿಗೆ ಸೂಕ್ತ ಬೆಲೆ ಸಿಗುತ್ತಿದ್ದರೆ, ಮತ್ತೊಂದೆಡೆ ಕೊಬ್ಬರಿ ಸಂಸ್ಕರಣಾ ವೆಚ್ಚ ಭಾರಿ ಏರಿಕೆಯಾಗಿದೆ. ಪ್ರಮುಖವಾಗಿ ಕೊಬ್ಬರಿ ಸುಲಿಯುವ ನುರಿತ ಕಾರ್ಮಿಕರ ಅಭಾವ ಇದ್ದು, ಅವರ ಕೂಲಿ ದರ ಗಣನೀಯವಾಗಿ ಹೆಚ್ಚಾಗಿದೆ. ಪ್ರದೇಶಗಳಿಗೆ ಅನುಗುಣವಾಗಿ 1,000 ಕೊಬ್ಬರಿ ಅಥವಾ ಕಾಯಿ ಸುಲಿಯಲು ಪ್ರಸ್ತುತ 650 ರಿಂದ 800 ರೂಪಾಯಿರವರೆಗೆ ಕೂಲಿ ನೀಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಕೆಲವು ಕಡೆಗಳಲ್ಲಿ ಸಾರಿಗೆ ವೆಚ್ಚ ಮತ್ತು ಉಪಾಹಾರದ ವೆಚ್ಚವನ್ನೂ ಬೆಳೆಗಾರರೇ ಭರಿಸಬೇಕಾದ ಪರಿಸ್ಥಿತಿ ಇದೆ.
ಕಾರ್ಮಿಕರ ಅಭಾವ ಮತ್ತು ಹೆಚ್ಚುತ್ತಿರುವ ಕೂಲಿ ವೆಚ್ಚದಿಂದಾಗಿ ಸಣ್ಣ ಮತ್ತು ಅತಿ ಸಣ್ಣ ರೈತರು ತಮ್ಮ ಆದಾಯದ ಒಂದು ಭಾಗವನ್ನು ಕೂಲಿಗಾಗಿಯೇ ಮೀಸಲಿಡಬೇಕಿದೆ. ಈ ಸಮಸ್ಯೆಗೆ ಪರಿಹಾರವಾಗಿ ಅನೇಕ ಕಡೆಗಳಲ್ಲಿ ಆಧುನಿಕ ಕೊಬ್ಬರಿ ಸುಲಿಯುವ ಯಂತ್ರಗಳ ಬಳಕೆ ಆರಂಭವಾಗಿದೆ. ಆದರೂ ಗ್ರಾಮೀಣ ಪ್ರದೇಶಗಳಲ್ಲಿ ಇವುಗಳ ಲಭ್ಯತೆ ಕಡಿಮೆ ಇದೆ.
ಸರ್ಕಾರ ಅಥವಾ ತೋಟಗಾರಿಕೆ ಇಲಾಖೆಯು ರೈತರಿಗೆ ರಿಯಾಯಿತಿ ದರದಲ್ಲಿ ಕೊಬ್ಬರಿ ಸುಲಿಯುವ ಮತ್ತು ಸಂಸ್ಕರಿಸುವ ಯಂತ್ರೋಪಕರಣಗಳನ್ನು ಪೂರೈಸಬೇಕು. ಇದರಿಂದ ಕಾರ್ಮಿಕರ ಮೇಲಿನ ಅವಲಂಬನೆ ಕಡಿಮೆಯಾಗಿ ಮತ್ತಷ್ಟು ಲಾಭ ಪಡೆಯಬಹುದು ಎಂಬುದು ತೆಂಗು ಬೆಳೆಗಾರರ ಆಗ್ರಹವಾಗಿದೆ. ಒಟ್ಟಿನಲ್ಲಿ ತೆಂಗಿನ ಕಾಯಿ ಸುಲಿಯುವವರ ಕೊರತೆ ಇದ್ದು, ಬೆಳೆಗಾರರಿಗೆ ದೊಡ್ಡ ಸವಲಾಗಿ ಪರಿಣಮಿಸಿರುವುದಂತೂ ನಿಜ.


Click it and Unblock the Notifications
