Karnataka rain: ಕರಾವಳಿ-ಒಳನಾಡು ಜಿಲ್ಲೆಗಳಿಗೆ ತಂಪೆರೆಯಲು ಸಜ್ಜಾದ ವರುಣ, ಜಿಲ್ಲಾವಾರು ಮುನ್ಸೂಚನೆ
ಬೆಂಗಳೂರು, ಅಕ್ಟೋಬರ್ 29: ಬದಲಾದ ಹವಾಮಾನ ವೈಪರಿತ್ಯಗಳ ಪ್ರಭಾವದಿಂದಾಗಿ ಕರ್ನಾಟಕದಲ್ಲಿ ಮುಂದಿನ ಐದು ದಿನಗಳು ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ವಿಶೇಷವೆಂದರೆ ಶುಷ್ಕ ವಾತಾವರಣ ಎದುರಿಸುತ್ತಿರುವ ಉತ್ತರ ಒಳನಾಡಿಗೆ ಅಲ್ಲಲ್ಲಿ ಮಳೆ ಬರಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.
ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ಹ್ಯಾಮೂನ್ ಚಂಡಮಾರುತದ ಪ್ರಭಾವದಿಂದ ಕರ್ನಾಟಕ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಐದು ದಿನಗಳ ಪೈಕಿ ಸೋಮವಾರದಿಂದ ಮೂರು ದಿನ ಮಳೆಯಾರ್ಭಟ ಹೆಚ್ಚಿರಲಿದೆ. ಕೆಲವೆಡೆ ಬಿಸಿಲ ವಾತಾವರಣವೇ ಮುಂದುವರಿಯಲಿದೆ.

ಕರಾವಳಿಯ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳು ಮತ್ತು ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಮೈಸೂರು, ಚಿಕ್ಕಬಳ್ಳಾಪುರ, ಕೋಲಾರ, ಚಿತ್ರದುರ್ಗ, ದಾವಣಗೆರೆ, ತುಮಕೂರು, ಶಿವಮೊಗ್ಗ, ವಿಜಯನಗರ, ರಾಮನಗರ, ಮಂಡ್ಯ, ಹಾಸನ, ಕೊಡಗು ಜಿಲ್ಲೆಗಳಲ್ಲಿ ಗುಡುಗು ಸಹಿತ ಜೋರು ಮಳೆ ಅಬ್ಬರಿಸಲಿದೆ. ಮಂಗಳವಾರ ಮತ್ತು ಬುಧವಾರ ಮಳೆ ಹೆಚ್ಚಿರಲಿದೆ ಎಂದು ಮಳೆ ಮುನ್ಸೂಚನಾ ವರದಿ ತಿಳಿಸಿದೆ.
ಉತ್ತರ ಒಳನಾಡಿನ ಹವಾಮಾನ ವರದಿ
ಇದೇ ವೇಳೆ ಉತ್ತರ ಒಳನಾಡಿನ ಒಂದೆರಡು ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆ ನಿರೀಕ್ಷೆ ಇದೆ. ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ರಾಯಚೂರು ಸೇರಿದಂತೆ ಇನ್ನಿತರ ಜಿಲ್ಲೆಗಳಲ್ಲಿ ಆಗಾಗ ಮಳೆ ಆಗಲಿದೆ. ಇದರ ಹೊರತು ಈ ಭಾಗದ ಉಳಿದ ಜಿಲ್ಲೆಗಳಲ್ಲಿ ಶುಷ್ಕ ವಾತಾವರಣವೇ ಮುಂದುವರಿಯಲಿದೆ.
ಸದ್ಯ ರಾಜ್ಯದಲ್ಲಿ ಹಿಂಗಾರು ಮಳೆ ಆರಂಭದ ಲಕ್ಷಣಗಳು ಇದ್ದರೂ ನಿರೀಕ್ಷಿತ ಮಳೆ ಆಗಿಲ್ಲ. ಎಲ್ಲೆಡೆ ಅತ್ಯಧಿಕ ತಾಪಮಾನ ದಾಖಲಾಗಿದೆ. ಈ ಪೈಕಿ ಮುಂದಿನ ಮೂರು ದಿನ ರಾಜ್ಯದ ವಿವಿಧೆಡೆ ಮಳೆ ತಂಪೆರೆಯಲಿದೆ.

ಕಳೆದ 24 ಗಂಟೆಗಳಲ್ಲಿ ಕಾರವಾರದಲ್ಲಿ ಗರಿಷ್ಠ ತಾಪಮಾನ 36.1 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇದರೊಂದಿಗೆ ಕಲಬುರಗಿಯಲ್ಲಿ 34 ಡಿಸೆ, ಶಿರಾಲಿ, ಮಂಗಳೂರು ವಿಮಾನ ನಿಲ್ದಾಣ, ಪೆಣಂಬೂರು, ಗದಗ, ಚಿಕ್ಕನಹಳ್ಳಿಯಲ್ಲಿ ತಲಾ ಗರಿಷ್ಠ 33 ಡಿಗ್ರೆ ಸಲ್ಸಿಯಸ್ ದಾಖಲಾಗಿದೆ.
ಸೈಕ್ಲೋನ್ ಹ್ಯಾಮೋನ್ ಚಂಡಮಾರುತ ಪ್ರಭಾವವು ಕೇವಲ ಕರ್ನಾಟಕ ಮಾತ್ರವಲ್ಲದೇ ತಮಿಳುನಾಡು, ಕೇರಳ, ಆಂಧ್ರ ಕರಾವಳಿ ಭಾಗ ಸೇರಿದಂತೆ ವಿವಿಧ ಕಡೆಗಳಲ್ಲಿ ಜೋರು ಗುಡುಗು ಸಹಿತ ಭಾರೀ ಮಳೆ ಆಗಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.












Click it and Unblock the Notifications