ಮುಡಾ 14 ಸೈಟ್ ವಾಪಾಸ್: ಕದ್ದ ಮಾಲು ಹಿಂತಿರುಗಿಸಿದ ಕೂಡಲೇ ಕಳ್ಳ ಮಾಫಿ ಆಗಲ್ಲ: ಆರ್.ಅಶೋಕ
ಬೆಂಗಳೂರು, ಅಕ್ಟೋಬರ್ 01: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರದ್ಧ ತನಿಖೆಗೆ ಕೋರ್ಟ್ ಆದೇಶ ನೀಡಿದ ಬೆನ್ನಲ್ಲೆ ಅವರು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ (MUDA Case) ಪಡೆದಿದ್ದ 14 ನಿವೇಶನಗಳನ್ನು ಮರಳಿ ನೀಡುವುದಾಗಿ ತಿಳಿಸಿದ್ದಾರೆ. ಹಾಗಾದರೆ ಸಿಎಂ ತಪ್ಪು ಮಾಡಿಲ್ಲ ಎನ್ನುತ್ತಲೇ ಇದೀಗ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ ಎಂದು ಬಿಜೆಪಿ ವಿಪಕ್ಷ ನಾಯಕ ಆರ್.ಅಶೋಕ ಲೇವಡಿ ಮಾಡಿದ್ದಾರೆ.
ಮುಡಾ ಸೈಟ್ ವಾಪಾಸ್ ನೀಡುವ ಬಗ್ಗೆ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿಯವರು ಮುಡಾಗೆ ಬರೆದ ಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿರುವ ಆರ್.ಅಶೋಕ ಸಿಎಂ ಕಾಲೆಳೆದಿದ್ದಾರೆ.

ಮುಡಾ ಹಗರಣ ಪ್ರಕರಣದಲ್ಲಿ ಕಾನೂನಿನ ಕುಣಿಕೆ ಬಿಗಿಯಾಗುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಪತ್ನಿ ಹೆಸರಿನಲ್ಲಿ ಪಡೆದಿದ್ದ 14 ಸೈಟುಗಳನ್ನು ಹಿಂತಿರುಗಿಸುವ ನಿರ್ಧಾರ ಮಾಡಿದ್ದಾರೆ. ನಾನು ತಪ್ಪೇ ಮಾಡಿಲ್ಲ ಎನ್ನುತ್ತಿದ್ದವರು ಈಗ ತಮ್ಮ ತಪ್ಪನ್ನ ಒಪ್ಪಿಕೊಂಡು ಸತ್ಯಕ್ಕೆ ಶರಣಾಗಿರುವುದು ನಮ್ಮ ಹೋರಾಟದ ಹಾದಿಯಲ್ಲಿ ಸಿಕ್ಕಿರುವ ಮತ್ತೊಂದು ಜಯ ಎಂದು ಅವರು ಬಣ್ಣಿಸಿದ್ದಾರೆ.
ಆದರೆ ಕದ್ದ ಮಾಲನ್ನು ಹಿಂತಿರುಗಿಸಿದ ಕೂಡಲೇ ಕಳ್ಳ ನಿರಪರಾಧಿ ಆಗಿಬಿಡುತ್ತಾನೆಯೇ?. ಕದ್ದ ಮಾಲನ್ನು ವಾಪಸ್ಸು ಕೊಟ್ಟ ತಕ್ಷಣ ಕಳ್ಳತನ ಮಾಫಿ ಆಗಿಬಿಡುತ್ತದೆಯೇ? ಎಂದು ಅವರು ಪ್ರಶ್ನಿಸಿರುವ ಅವರು, ಸಿಎಂ ಸಿದ್ದರಾಮಯ್ಯಗೆ ಶಿಕ್ಷೆ ಕಟ್ಟಿಟ್ಟ ಬುತ್ತಿ ಎಂದು ಪರೋಕ್ಷವಾಗಿ ಭವಿಷ್ಯ ನುಡಿದಿದ್ದಾರೆ.
'ಕೆಟ್ಟ ಮೇಲೆ ಬುದ್ಧಿ ಬಂತು' ಎಂಬಂತೆ ಈಗಲಾದರೂ ಸಿದ್ದರಾಮಯ್ಯನವರಿಗೆ ತಮ್ಮ ತಪ್ಪಿನ ಅರಿವಾಯಿತಲ್ಲ ಎನ್ನುವುದು ಸಮಾಧಾನಕರ ವಿಷಯ ಎಂದರು.
ಆದರೆ 'ಅಡಿಕೆಗೆ ಹೋದ ಮಾನ, ಆನೆ ಕೊಟ್ಟರೂ ಬರುವುದಿಲ್ಲ' ಸಿಎಂ ಸಿದ್ದರಾಮಯ್ಯನವರೇ. ತಾವು ಪ್ರಕರಣದ ತನಿಖೆ ಎದುರಿಸಲೇ ಬೇಕು. ನಿಷ್ಪಕ್ಷಪಾತ ಮತ್ತು ಪಾರದರ್ಶಕ ತನಿಖೆಗಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಲೇ ಬೇಕು. ಅಲ್ಲಿಯವರೆಗೂ ನಮ್ಮ ಹೋರಾಟ ನಿರಂತರವಾಗಿ ಮುಂದುವರೆಯುತ್ತದೆ ಎಂದು ಅವರು ಸಿಎಂ ರಾಜೀನಾಗೆ ಆಗ್ರಹಿಸಿದ್ದಾರೆ.
ರಾಜ್ಯಪಾಲರಿಗೆ ಸಿಕ್ಕ ದೊಡ್ಡ ಜಯ: ಆರ್.ಅಶೋಕ
ಮುದಾದಿಂದ ಪತ್ನಿ ಹೆಸರಿನಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಕ್ರಮವಾಗಿ ಪಡೆದಿದ್ದ ಸೈಟುಗಳನ್ನು ವಾಪಸ್ಸು ನೀಡಲು 'ದೊಡ್ದ' ಮನಸ್ಸು ಮಾಡಿದ್ದಾರೆ. ಇದೆಲ್ಲ ನೋಡಿದರೆ ಸಂವಿಧಾನರಕ್ಷಿಸಲು ದಿಟ್ಟ ನಿರ್ಧಾರ ಕೈಗೊಂಡು ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದ ರಾಜ್ಯಪಾಲರಿಗೆ ಸಿಕ್ಕ ದೊಡ್ಡ ಜಯ ಎಂದು ಅವರು ತಿಳಿಸಿದ್ದಾರೆ.
ಅಲ್ಲದೇ ಇದು ರಾಜ್ಯಪಾಲರ ನಿರ್ಧಾರವನ್ನು ಎತ್ತಿ ಹಿಡಿದ ನ್ಯಾಯಾಂಗಕ್ಕೆ ಸಿಕ್ಕ ದೊಡ್ಡ ಜಯವಾಗಿದೆ. ಜಗ್ಗಲ್ಲ, ಬಗ್ಗಲ್ಲ ಎಂದು ಅಧಿಕಾರದ ಮದದಿಂದ ಮೆರೆಯುತ್ತಿದ್ದವರ ವಿರುದ್ಧ ಬಾಬಾಸಾಹೇಬ್ ಅಂಬೇಡ್ಕರರ ಸಂವಿಧಾನಕ್ಕೆ ಸಿಕ್ಕ ದೊಡ್ಡ ಜಯವಾಗಿದೆ ಎಂದು ಪ್ರತಿ ಮಾತಿನಲ್ಲೂ ಸಿದ್ದರಾಮಯ್ಯ ಅವರ ಮೇಲೆ ಆರ್.ಅಶೋಕ ಅವರು ವಾಗ್ದಾಳಿ ನಡೆಸಿದ್ದಾರೆ.
ಮೂಡಾ ಹಗರಣದಲ್ಲಿ ಕಾನೂನಿನ ಕುಣಿಕೆ ಬಿಗಿಯಾಗುತ್ತಿದ್ದಂತೆ ಸಿಎಂ @siddaramaiah ಅವರು ತಮ್ಮ ಪತ್ನಿ ಹೆಸರಿನಲ್ಲಿ ಪಡೆದಿದ್ದ 14 ಸೈಟುಗಳನ್ನ ಹಿಂತಿರುಗಿಸುವ ನಿರ್ಧಾರ ಮಾಡಿದ್ದು, ನಾನು ತಪ್ಪೇ ಮಾಡಿಲ್ಲ ಎನ್ನುತ್ತಿದ್ದವರು ಈಗ ತಮ್ಮ ತಪ್ಪನ್ನ ಒಪ್ಪಿಕೊಂಡು ಸತ್ಯಕ್ಕೆ ಶರಣಾಗಿರುವುದು ನಮ್ಮ ಹೋರಾಟದ ಹಾದಿಯಲ್ಲಿ ಸಿಕ್ಕಿರುವ ಮತ್ತೊಂದು ಜಯ.… pic.twitter.com/eIkCuVpMgX
— R. Ashoka (@RAshokaBJP) September 30, 2024
ಹೆಚ್ಚಾದ ಸಿಎಂ ರಾಜೀನಾಮೆ ಕೂಗು
ಸದ್ಯ ಮುಡಾ ಹಗರಣದ ತನಿಖೆಯನ್ನು ಮೈಸೂರು ಲೋಕಾಯುಕ್ತ ಪೊಲೀಸರಿಗೆ ವಹಿಸಲಾಗಿದೆ. ಈಗಾಗಲೇ ಸಿಎಂ ವಿರುದ್ಧ ವಿವಿಧ ಕಲಂಗಳಡಿ ಎಫ್‌ಐಆರ್ ದಾಖಲಾಗಿದೆ. ಸದ್ಯ ಸಿದ್ದರಾಮಯ್ಯ ಅವರು ಸಿಎಂ ಸ್ಥಾನದಲ್ಲಿದ್ದರೆ ತನಿಖೆ ಪಾರದರ್ಶಕವಾಗಿ ನಡೆಯುವುದಿಲ್ಲ. ಆದ್ದರಿಂದ ಕೂಡಲೇ ಅವರು ರಾಜೀನಾಮೆ ನೀಡಿ ತನಿಖೆ ಎದುರಿಸಬೇಕು ಎಂದು ಬಿಜೆಪಿ,ಜೆಡಿಎಸ್ ನಾಯಕರು ಮತ್ತಿತರರು ಆಗ್ರಹಿಸಿದ್ದಾರೆ.












Click it and Unblock the Notifications