TB Dam: ಗೇಟ್ ತುಂಡಾದ ಜಲಾಶಯಕ್ಕೆ ಇಂದು ಸಿಎಂ ಸಿದ್ದರಾಮಯ್ಯ ಭೇಟಿ
ಬೆಂಗಳೂರು, ಆಗಸ್ಟ್ 13: ಕೊಪ್ಪಳ ಜಿಲ್ಲೆಯ ಮುನಿರಾಬಾದ್ ಬಳಿ ಇರುವ ರಾಜ್ಯದ ಎರಡನೇ ಅತೀ ದೊಡ್ಡ ಜಲಾಶಯವಾದ ತುಂಗಭದ್ರಾ ಡ್ಯಾಂನ ಕ್ರಸ್ಟ್ ಗೇಟ್ ಮುರಿದು ಕೊಚ್ಚಿ ಹೋಗಿದೆ. ಈಗಾಗಲೇ ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ವಿಪಕ್ಷ ನಾಯಕರು ಡ್ಯಾಂಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಇವತ್ತು ಮಂಗಳವಾರ (ಆಗಸ್ಟ್ 13) ಸಿಎಂ ಸಿದ್ದರಾಮಯ್ಯ ಅವರು ಖುದ್ದ ಟಿಬಿ ಡ್ಯಾಂಗೆ ಬೇಟಿ ನೀಡಿ ಸದಸ್ಯ ಸ್ಥಿತಿಗತಿ ಬಗ್ಗೆ ಮಾಹಿತಿ ಪಡೆಯಲಿದ್ದಾರೆ.
ಸದ್ಯ ತುಂಗಭದ್ರಾ ಜಲಾಶಯದ ಗೇಟ್ ಒಂದು ವೇಳೆ ಕೊಚ್ಚಿ ಹೋಗಿರದಿದ್ದರೆ ಇಂದು ಮಂಗಳವಾರ ನಿಗದಿಯಂತೆ ಸಿಎಂ ಸಿದ್ದರಾಮಯ್ಯ ಅವರು ಇದೇ ಡ್ಯಾಂಗೆ ಬಾಗಿನ ಅರ್ಪಿಸಲಿದ್ದರು. ರಾಜ್ಯ ಸರ್ಕಾರ ಅದಕ್ಕೆಲ್ಲ ಸಿದ್ಧತೆ ಮಾಡಿಕೊಂಡಿತ್ತು ಎನ್ನಲಾಗಿದೆ. ಅಷ್ಟರಲ್ಲಾಗಲೇ ಈ ಸಮಸ್ಯೆ ಸೃಷ್ಟಿಯಾಗಿದೆ.

ಇಂದು ಮಧ್ಯಾಹ್ನ 12ಗಂಟೆಗೆ ಅವರು ಡ್ಯಾಂ ವೀಕ್ಷಣೆ ಮಾಡಲಿದ್ದಾರೆ. ನಂತರ ಅವರು ಜಲಾಶಯದ ಸಮೀಪವೇ ಇರುವ ಅತಿಥಿಗೃಹದಲ್ಲಿ ಹಿರಿಯ ಅಧಿಕಾರಿಗಳ ಜೊತೆಗೆ ಸಭೆ ನಡೆಸಿ ಡ್ಯಾಂ ಸುರಕ್ಷತೆ, ಡ್ಯಾಂ ಕೆಳಭಾಗದ ಗ್ರಾಮದ ಜನರು, ರೈತರ ಸುರಕ್ಷತೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲಿದ್ದಾರೆ.
ಅಲ್ಲದೇ, ಟಿಬಿ ಡ್ಯಾಂ ಗೇಟ್ ಅಳವಡಿಕೆ ಕಾರ್ಯಕ್ಕೆ ಎಷ್ಟು ದಿವಸ ಹಿಡಿಬಹುದು. ಅಧಿಕಾರಿಗಳು ಮತ್ತು ತಜ್ಞರಿಂದ ಮಾಹಿತಿ ಪಡೆಯಲಿದ್ದಾರೆ. ಕೆಲವು ಅಗತ್ಯ ಸೂಚನೆಗಳನ್ನು ಅವರು ಅಧಿಕಾರಿಗಳಿಗೆ ಈ ವೇಳೆ ನೀಡಲಿದ್ದಾರೆ.
ಈ ಕುರಿತು ಸೋಮವಾರ ಬೆಂಗಳೂರಿನ ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಅನೇಕರು ಸ್ಥಳಕ್ಕೆ ಹೋಗಿ ಏನು ಮಾಡಬೇಕೆಂದು ತಿಳಿಸಿದ್ದಾರೆ. ಮಂಗಳವಾರ ನಾನು ಸಹ ತೆರಳಲಿದ್ದೇನೆ ಎಂದು ತಿಳಿಸಿದ್ದಾರೆ.
ಎಲ್ಲ ಡ್ಯಾಂ ಪರಿಶೀಲಿಸಿ ವರದಿ ನೀಡಲು ಸೂಚನೆ
ಟಿಬಿ ಡ್ಯಾಂ ಗೇಟಿನ ಚೈನ್ ಲಿಂಕ್ ತುಂಡಾಗಿ ಕೊಚ್ಚಿ ಹೋಗಿದೆ. ಸರ್ಕಾರದ ಸೂಚನೆ ಮೇರೆಗೆ ವಿಜಯನಗರದಲ್ಲಿ ಹೊಸ ಗೇಟ್ ಸಿದ್ಧಪಡಿಸಲಾಗುತ್ತಿದೆ. ಇದಷ್ಟೇ ಅಲ್ಲದೇ, ರಾಜ್ಯದ ಇತರ ಎಲ್ಲ ಜಲಾಶಯಗಳ ಸುರಕ್ಷತೆ, ಇಂದಿನ ಸ್ಥಿತಿಗತಿ ಪರಿಶೀಲಿಸಲು ಸರ್ಕಾರ ಪರಿಶೀಲನಾ ಸಮಿತಿ ರಚನೆ ಮಾಡಿದೆ. ಸಮಿತಿ ಸದಸ್ಯರು ಕೂಡಲೇ ಪರಿಶೀಲಿಸಿ ವರದಿ ನೀಡುವಂತೆ ಡಿಸಿಎಂ ಡಿಕೆ ಶಿವಕುಮಾರ್ ಸೂಚಿಸಿದ್ದಾರೆ.












Click it and Unblock the Notifications