SC-ST Reservation: ಸುಪ್ರೀಂ ತೀರ್ಪಿನಿಂದ ಒಳಮೀಸಲಾತಿಗಿದ್ದ ಅಡ್ಡಿ ನಿವಾರಣೆ: ಸಿದ್ದರಾಮಯ್ಯ ಮುಂದಿನ ನಡೆ?
ಬೆಂಗಳೂರು, ಆಗಸ್ಟ್ 01: ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡಗಳಿಗೆ (ST) ನೀಡಲಾಗಿರುವ ಮೀಸಲಾತಿ ಒಳಗಡೆಯೇ ಮೀಸಲಾತಿ ನೀಡುವ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಈ ತೀರ್ಪು ಸ್ವಾಗತಿಸಿರುವ ಸಿಎಂ ಸಿದ್ದರಾಮಯ್ಯ ಅವರು ಒಳಮೀಸಲಾತಿ ಜಾರಿಗೆ ಉಂಟಾಗಿದ್ದ ಅಡ್ಡಿ ನಿವಾರಣೆ ಆಗಿದೆ ಎಂದು ತಿಳಿಸಿದೆ.
ಎಸ್‌ಸಿ ಎಸ್‌ಟಿ ಪಂಗಡಗಳಿಗೆ ನೀಡಲಾದ ಮೀಸಲಾತಿ ಒಳಗಡೆಯೇ ಮೀಸಲಾತಿ ನೀಡಲು ಸುಪ್ರೀಂ ಕೋರ್ಟ್ ಒಪ್ಪಿದೆ. ಒಳಮೀಸಲಾತಿ ಕಾನೂನು ಬದ್ಧ ಎಂದು ಅಭಿಪ್ರಾಯಪಟ್ಟಿದೆ. ಇನ್ನೂ ಸರ್ಕಾರಿ ಉದ್ಯೋಗಗಳಲ್ಲಿ ಯಾವ ಜಾತಿಗಳಿಗೆ ಒಳ ಮೀಸಲಾತಿ ನೀಡಬೇಕೆಂಬ ಅಧಿಕಾರ ಆಯಾ ಸರ್ಕಾರ, ಕೋರ್ಟ್ ವಿವೇಚನೆಗೆ ನೀಡಲಾಗಿದೆ ಎಂದು ತಿಳಿಸಿ ನ್ಯಾಯಾಲಯ ಪ್ರಮುಖ ತೀರ್ಪು ನೀಡಿದೆ.

ಈ ಕುರಿತು ಸಾಮಾಜಿಕ ಜಾಲತಾಣ (ಎಕ್ಸ್)ದಲ್ಲಿ ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ ಅವರು, ಬಿಜೆಪಿಗೆ ಟಾಂಗ್ ನೀಡಿದ್ದಾರೆ. ಪರಿಶಿಷ್ಟರಲ್ಲಿ ಅತಿ ಹಿಂದುಳಿದವರನ್ನು ಗುರುತಿಸಿ ಒಳಮೀಸಲಾತಿ ನೀಡುವ ರಾಜ್ಯ ಸರ್ಕಾರಗಳ ಅಧಿಕಾರವನ್ನು ಎತ್ತಿಹಿಡಿದು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಐತಿಹಾಸಿಕವಾದುದ್ದಾಗಿದೆ. ನ್ಯಾಯಾಲಯದ ಈ ತೀರ್ಪನ್ನು ನಾನು ಮುಕ್ತವಾಗಿ ಸ್ವಾಗತಿಸುತ್ತೇನೆ ಎಂದಿದ್ದಾರೆ.
ರಾಜ್ಯ ಸರ್ಕಾರದಿಂದ ಸೂಕ್ತ ಕ್ರಮ
ಸುಪ್ರೀಂ ಕೋರ್ಟ್ ತೀರ್ಪಿನಿಂದಾಗಿ ಒಳಮೀಸಲಾತಿ ಅನುಷ್ಠಾನದ ಹಾದಿಯಲ್ಲಿನ ಮುಖ್ಯ ಅಡ್ಡಿಯೊಂದು ನಿವಾರಣೆಯಾಗಿದೆ. ತೀರ್ಪಿನಲ್ಲಿರುವ ವಿವಾದಾತ್ಮಕ ಕೆನೆಪದರದ ಬಗೆಗಿನ ಅಂಶವೂ ಸೇರಿದಂತೆ ಇತರ ವಿಷಯಗಳ ಬಗ್ಗೆ ಪರಿಶಿಷ್ಟ ಜಾತಿಯ ನಾಯಕರು ಮತ್ತು ಕಾನೂನು ತಜ್ಞರ ಜೊತೆ ಸಮಾಲೋಚನೆ ನಡೆಸಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಪರಿಶಿಷ್ಟ ಜಾತಿಯೊಳಗೆ ಒಳಮೀಸಲಾತಿ ಕಲ್ಪಿಸುವ ಬಗ್ಗೆ ಕಾಂಗ್ರೆಸ್ ಪಕ್ಷ ಬದ್ಧವಾಗಿದೆ. ಹಿಂದೆ ಕಾಂಗ್ರೆಸ್ ಪಕ್ಷದ ಸರ್ಕಾರವೇ ರಚಿಸಿದ್ದ ನ್ಯಾ.ಎ.ಜೆ.ಸದಾಶಿವ ಅವರ ಅಧ್ಯಕ್ಷತೆಯ ಆಯೋಗದ ವರದಿಯನ್ನು ಅನುಷ್ಠಾನಗೊಳಿಸುವುದಾಗಿ ನಾವು ಕಳೆದ ವಿಧಾನಸಭಾ ಚುನಾವಣೆಯಲ್ಲಿನ ಪಕ್ಷದ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗೆ ಸರ್ಕಾರ ಬದ್ಧವಾಗಿದೆ.

ಈ ನಡುವೆ ಕಳೆದ ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ರಾಜ್ಯದ ಬಿಜೆಪಿ ರಾಜ್ಯ ಸರ್ಕಾರ ಒಳಮೀಸಲಾತಿ ಬಗ್ಗೆ ಅವಸರದಲ್ಲಿ ತೀರ್ಮಾನ ಕೈಗೊಂಡು ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಟ್ಟಿತ್ತು. ಪರಿಶಿಷ್ಟ ಜಾತಿಯೊಳಗಿನ ಮೀಸಲಾತಿಯನ್ನು ಸಂವಿಧಾನ ತಿದ್ದುಪಡಿಯ ಮೂಲಕ ಅನುಷ್ಠಾನಗೊಳಿಸಬಹುದು ಎಂದು ಕೇಂದ್ರ ಬಿಜೆಪಿ ಸರ್ಕಾರ ತಿಳಿಸಿತ್ತು.
ಕೇಂದ್ರ ಬಿಜೆಪಿ ವಿರುದ್ಧ ಸಿಎಂ ಕಿಡಿ
ಇನ್ನೂ ಸರ್ಕಾರವೇ ರಚಿಸಿದ್ದ ಉಷಾ ಮೆಹ್ರಾ ಸಮಿತಿ ಸ್ಪಷ್ಟವಾಗಿ ತಿಳಿಸಿದ್ದರೂ ಕೇಂದ್ರ ಸರ್ಕಾರ ಇಲ್ಲಿಯ ವರೆಗೆ ತೀರ್ಮಾನ ಕೈಗೊಳ್ಳದೆ ಮೂಲೆಗೆ ಸರಿಸಿತ್ತು ಎಂದು ಅವರು ದೂರಿದರು.
ಈಗಿನ ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ನ್ಯಾ.ಎ.ಜೆ.ಸದಾಶಿವ ಆಯೋಗದ ಶಿಫಾರಸುಗಳನ್ನು ಕೂಲಂಕಷವಾಗಿ ಅಧ್ಯಯನ ನಡೆಸಿ, ಅಗತ್ಯ ಬಿದ್ದರೆ ಇದಕ್ಕೆ ಸಂಬಂಧಿಸಿದಂತೆ ಇತ್ತೀಚಿನ ಬೆಳವಣಿಗೆಗಳನ್ನು ಪರಿಗಣನೆಗೆ ತೆಗೆದುಕೊಂಡು ಸಮಾಲೋಚನೆ-ಸಂಧಾನದ ಮೂಲಕ ಒಳಮೀಸಲಾತಿ ಬಗ್ಗೆ ಸ್ಪಷ್ಟವಾದ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಳ್ಳಲಿದೆ ಎಂದು ಎಸ್‌ಸಿ, ಎಸ್‌ಟಿ ವರ್ಗದವರಲ್ಲಿ ಭರವಸೆ ಮೂಡಿಸಿದ್ದಾರೆ.












Click it and Unblock the Notifications