ಸಿದ್ದು, ಡಿಕೆಶಿ ಕೈ ಹಿಡಿದು ಮೇಲಕ್ಕೆತ್ತಿದ ಖರ್ಗೆ: ಕನ್ನಡಿಗರ ಹಿತ ರಕ್ಷಣೆಗೆ ನಮ್ಮ ಕೈಗಳು ಒಂದಾಗಿರಲಿದೆ ಎಂದ ಸಿದ್ದರಾಮಯ್ಯ
ಬೆಂಗಳೂರು, ಮೇ 18: ಕರ್ನಾಟಕ ಚುನಾವಣೆಯಲ್ಲಿ ಅಭೂತಪೂರ್ವ ಯಶಸ್ಸು ಕಂಡ ಕಾಂಗ್ರೆಸ್ ಪಕ್ಷ ಅಧಿಕಾರದ ಗದ್ದುಗೆ ಏರಲಿದೆ. ಶನಿವಾರ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ರಾಜ್ಯದ ಉಪಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಲಿದ್ದಾರೆ.
ಇಂದು ಬೆಳಿಗ್ಗೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ಸಂಧಾನಸೂತ್ರ ಯಶಸ್ವಿಯಾಗಿದೆ. ಆ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರ ಕೈಯನ್ನು ಎತ್ತಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಯಶಸ್ಸಿನ ಸಂಕೇತವನ್ನು ತೋರಿಸಿದ್ದಾರೆ.

ಈ ಚಿತ್ರವನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿರುವ ಸಿದ್ದರಾಮಯ್ಯ, 'ಕನ್ನಡಿಗರ ಹಿತ ರಕ್ಷಣೆಗೆ ನಮ್ಮ ಕೈಗಳು ಸದಾ ಒಂದಾಗಿರಲಿದೆ. ಜನಪರ, ಪಾರದರ್ಶಕ, ಭ್ರಷ್ಟಾಚಾರ ರಹಿತ ಆಡಳಿತ ನೀಡುವ ಜೊತೆಗೆ ನಮ್ಮ ಎಲ್ಲಾ ಗ್ಯಾರೆಂಟಿಗಳನ್ನು ಈಡೇರಿಸಲು ಕಾಂಗ್ರೆಸ್ ಪಕ್ಷ ಒಂದು ಕುಟುಂಬವಾಗಿ ಕೆಲಸ ಮಾಡಲಿದೆ' ಎಂದು ತಿಳಿಸಿದ್ದಾರೆ.
ಇದೇ ಫೋಟೊವನ್ನು ಶೇರ್ ಮಾಡಿಕೊಂಡಿರುವ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು, 'ರಾಜ್ಯದ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಯಾಗಿ ಆಯ್ಕೆಯಾದ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರಿಗೆ ಅಭಿನಂದನೆಗಳು. ಕನ್ನಡಿಗರ ಅಸ್ಮಿತೆ ಕಾಪಾಡುತ್ತಾ, ಜನಪರ ಆಡಳಿತ ನೀಡುವುದು ನಮ್ಮ ಗುರಿ. ಪ್ರಣಾಳಿಕೆಯಲ್ಲಿ ಕೊಟ್ಟ 5 ಆಶ್ವಾಸನೆಗಳನ್ನು ಈಡೇರಿಸಿ ರಾಜ್ಯವನ್ನು ಅಭಿವೃದ್ಧಿ ಪಥದಲ್ಲಿ ಸರ್ಕಾರ ಕೊಂಡೊಯ್ಯಲಿದೆ' ಎಂದೂ ಹೇಳಿದ್ದಾರೆ.

'ಕರ್ನಾಟಕದ ಸುಭದ್ರ ಭವಿಷ್ಯ ಮತ್ತು ಜನಕಲ್ಯಾಣ ನಮ್ಮ ಪ್ರಮುಖ ಆದ್ಯತೆಯಾಗಿದೆ. ಅದನ್ನು ಖಾತರಿಪಡಿಸುವಲ್ಲಿ ನಾವು ಒಗ್ಗಟ್ಟಾಗಿದ್ದೇವೆ' ಎಂದು ನೂತನ ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಅಧಿಕೃತವಾಗಿ ಘೋಷಿಸಿದ ಕಾಂಗ್ರೆಸ್
ಸಿದ್ದರಾಮಯ್ಯ ಅವರನ್ನು ಕರ್ನಾಟಕದ ಮುಖ್ಯಮಂತ್ರಿ ಎಂದು ಕಾಂಗ್ರೆಸ್ ಗುರುವಾರ ಅಧಿಕೃತವಾಗಿ ಘೋಷಿಸಿದೆ. ಡಿಕೆ ಶಿವಕುಮಾರ್ ಅವರು ಏಕೈಕ ಉಪಮುಖ್ಯಮಂತ್ರಿ ಮತ್ತು ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರಾಗಿ ಮುಂದುವರಿಯುತ್ತಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ತಿಳಿಸಿದರು.
ಸಂಸತ್ ಚುನಾವಣೆ ಮುಗಿಯುವವರೆಗೂ ಶಿವಕುಮಾರ್ ಪಿಸಿಸಿ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ. ಮೇ 20 ರಂದು ಸಿಎಂ, ಡಿಸಿಎಂ ಮತ್ತು ಸಚಿವರ ಗುಂಪು ಪ್ರಮಾಣ ವಚನ ಸ್ವೀಕರಿಸಲಿದೆ ಎಂದು ವೇಣುಗೋಪಾಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಇಬ್ಬರಿಗೂ ಸರದಿ ಅಧಿಕಾರಾವಧಿಯ ಬಗ್ಗೆ ಕೇಳಿದಾಗ ವೇಣುಗೋಪಾಲ್, 'ಅಧಿಕಾರ ಹಂಚಿಕೆ ಸೂತ್ರ ಎಂದರೆ ಅದನ್ನು ಕರ್ನಾಟಕದ ಜನರೊಂದಿಗೆ ಹಂಚಿಕೊಳ್ಳುವುದು' ಎಂದು ಹೇಳಿದರು.
ಘೋಷಣೆ ವಿಳಂಬವಾಗುತ್ತಿರುವುದನ್ನು ವಿವರಿಸಿದ ವೇಣುಗೋಪಾಲ್, 'ಕಳೆದ ಕೆಲವು ದಿನಗಳಿಂದ ಒಮ್ಮತದ ಪ್ರಯತ್ನ ಮಾಡಲಾಗುತ್ತಿದೆ. ಕರ್ನಾಟಕದಲ್ಲಿ ಕ್ರಿಯಾಶೀಲ ನಾಯಕರಿದ್ದಾರೆ. ಸಿದ್ದರಾಮಯ್ಯ ಅವರು ಅನುಭವಿ ಮತ್ತು ಹಿರಿಯ ರಾಜಕಾರಣಿಗಳು. ಎಲ್ಲರಿಗೂ ಸಿಎಂ ಆಗಬೇಕೆಂಬ ಆಸೆ ಇರುತ್ತದೆ ಮತ್ತು ಇಬ್ಬರೂ ಅದಕ್ಕೆ ಅರ್ಹರು. ನಮ್ಮ ಕಾಂಗ್ರೆಸ್ ನಾಯಕರು ಹಿರಿಯ ನಾಯಕರೊಂದಿಗೆ ಸರಣಿ ಸಮಾಲೋಚನೆ ನಡೆಸಿದ್ದಾರೆ. ಅಂತಿಮವಾಗಿ ಕಾಂಗ್ರೆಸ್ ಅಧ್ಯಕ್ಷರು ನಿರ್ಧಾರ ಕೈಗೊಂಡರು' ಎಂದು ಹೇಳಿದರು.
ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಇಬ್ಬರೂ ಸಿಎಂ ಆಗುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಕರ್ನಾಟಕ ಎಐಸಿಸಿ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಹೇಳಿದ್ದಾರೆ. ಶನಿವಾರದ ಪ್ರಮಾಣ ವಚನ ಸಮಾರಂಭಕ್ಕೆ 'ಸಮಾನ ಮನಸ್ಸಿನ' ವಿವಿಧ ಪಕ್ಷಗಳ ನಾಯಕರನ್ನು ಆಹ್ವಾನಿಸಲಾಗುವುದು ಎಂದು ಕಾಂಗ್ರೆಸ್ ಹೇಳಿದೆ. ಶನಿವಾರದ ಕಾರ್ಯಕ್ರಮವು 2024 ರ ಲೋಕಸಭೆ ಚುನಾವಣೆಗೆ ಮುನ್ನ ಪ್ರತಿಪಕ್ಷಗಳ ಒಗ್ಗಟ್ಟಿಗೆ ವೇದಿಕೆಯಾಗಲಿದೆ ಎಂದು ಸೂಚಿಸುತ್ತದೆ. ಇಂದು ಸಂಜೆ ಬೆಂಗಳೂರಿನಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷ (ಸಿಎಲ್‌ಪಿ) ಮತ್ತೆ ಸಭೆ ಸೇರಲಿದೆ.












Click it and Unblock the Notifications