ಅಂಬೇಡ್ಕರ್ ಇರದಿದ್ದರೆ ನಾನು ಕುರಿ, ಎಮ್ಮೆ ಕಾಯುತ್ತಿದ್ದೆ: ಬುದ್ಧ, ಬಸವಾದಿ ಶರಣರ ಬಗ್ಗೆ ಸಿದ್ದರಾಮಯ್ಯ ಹೇಳಿದ್ದೇನು?
ಬೆಂಗಳೂರು: ಅಂಬೇಡ್ಕರ್ ಅವರು ಸಂವಿಧಾನ ನೀಡದೇ ಇದ್ದಿದ್ದರೆ ನಾನು ಸಿಎಂ ಆಗುವುದು ಸಾಧ್ಯ ಇರಲಿಲ್ಲ. ಕುರಿ, ಎಮ್ಮೆ ಕಾಯುತ್ತಾ ಇರುತ್ತಿದ್ದೆ ಎಂದು ಸಿಎಂ ಸಿದ್ದರಾಮಯ್ಯ ತಮ್ಮ ಜೀವನದ ಘಟನೆಗಳನ್ನ ನೆನಪಿಸಿಕೊಂಡಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರ ಜಿಲ್ಲಾಡಳಿತ ರವೀಂದ್ರ ಕಲಾ ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಶಿವಶರಣ ಶ್ರೀ ಹಡಪದ ಅಪ್ಪಣ್ಣ ಜಯಂತಿ ಉದ್ಘಾಟಿಸಿ ಸಿಎಂ ಮಾತನಾಡಿದರು.
ಜಾತಿ ವ್ಯವಸ್ಥೆಗೆ ಚಲನೆ ಇಲ್ಲ, ಚಲನೆ ಇಲ್ಲದೆ ಹಿಂದುಳಿದ ಶೋಷಿತ ಸಮುದಾಯಕ್ಕೆ ಆರ್ಥಿಕ, ಶೈಕ್ಷಣಿಕ ಚಲನೆ ಸಿಗುವುದಿಲ್ಲ. ಹೀಗಾಗಿ ಬುದ್ದ, ಬಸವಾದಿ ಶರಣರು, ಬಿ.ಆರ್.ಅಂಬೇಡ್ಕರ್ ಅವರು ಜಾತಿ ಮುಕ್ತ ಸಮಾಜ ಇರಬೇಕು ಎಂದು ಆಶಿಸಿದ್ದರು. ಜನರಿಗೆ ಬಸವಣ್ಣ, ಹಡಪದ ಅಪ್ಪಣ್ಣ ಅವರಂಥವರ ಆದರ್ಶ & ವಿಚಾರಗಳು ಗೊತ್ತಾಗಬೇಕು. ಅದಕ್ಕಾಗಿ ಸಂತರ ಬಸವಾದಿ ಶರಣರ ಜನ್ಮ ದಿನಾಚರಣೆ ಆಚರಿಸಬೇಕೆಂದು ಸಿಎಂ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ. ಅಲ್ಲದೆ ಇನ್ನೂ ಹಲವು ವಿಚಾರಗಳನ್ನ ಹಂಚಿಕೊಂಡ ಸಿದ್ದರಾಮಯ್ಯ, ಈ ಹಿಂದೆ ಸಿಎಂ ಆಗಿದ್ದಾಗ ಕಾರಿನ ಮೇಲೆ ಕಾಗೆ ಕೂತಿದ್ದ ಪ್ರಸಂಗ ನೆನಪಿಸಿಕೊಂಡರು.

ಶರಣರ ಶ್ರಮದಿಂದ ಶೋಷಣೆ ಮುಕ್ತ ಸಮಾಜ
ನಾವು ಬಸವಾದಿ ಶರಣರ ಆಶಯ ಮತ್ತು ಆದರ್ಶಗಳನ್ನು ಮುಂದುವರೆಸುವ ಉದ್ದೇಶದಿಂದಲೇ ಒಂದು ಜಾತಿ, ಒಂದು ಧರ್ಮಕ್ಕೆ ಸೀಮಿತ ಆಗದೆ ಸರ್ವರಿಗೂ ಅನ್ವಯ ಆಗುವ ಐದು ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದೇವೆ. ಇದು ವೆರಿ ಸಿಂಪಲ್. ನಮ್ಮ ಯೋಜನೆಗಳ ಹಿಂದಿನ ಕಾಳಜಿ ಅರ್ಥ ಮಾಡಿಕೊಳ್ಳಲು ಹೃದಯ ಇದ್ದರೆ ಸಾಕು ಎಂದರು. ಇನ್ನು ಚಾತುವರ್ಣ ವ್ಯವಸ್ಥೆ ಜಾತಿ ಕಾರಣಕ್ಕೆ ಶೂದ್ರರು & ಮಹಿಳೆಯರು ಕೇವಲ ಉತ್ಪಾದನೆಗೆ ಮಾತ್ರ ಸೀಮಿತವಾಗಿದ್ದರು. ಇವರಿಗೆ ತಮ್ಮ ಉತ್ಪಾದನೆಯನ್ನು ಅನುಭವಿಸುವ ಹಕ್ಕು ಕೂಡ ಇರಲಿಲ್ಲ. ಯಾರು ಉತ್ಪಾದನೆಯಲ್ಲಿ ತೊಡಗುವುದಿಲ್ಲವೋ ಅವರು ಮಾತ್ರ ಉಳಿದೆಲ್ಲರ ಉತ್ಪಾದನೆಯನ್ನು ಅನುಭವಿಸಬಹುದಿತ್ತು. ಆದ್ದರಿಂದ ಬಸವಾದಿ ಶರಣರು ಶೋಷಣೆಯುಕ್ತ ಸಮಾಜ ಅಳಿಸಿ, ಜಾತಿ ಮುಕ್ತ ಸಮಾಜವನ್ನು ನಿರ್ಮಿಸಲು ಶ್ರಮಿಸಿದರು ಎಂದರು.
ಕಾರಿನ ಮೇಲೆ ಕಾಗೆ ಸ್ಮರಿಸಿದ ಸಿದ್ದರಾಮಯ್ಯ!
ಇದೇ ವೇಳೆ ಬಸವಾದಿ ಶರಣರು ಮೌಡ್ಯ ಪರಂಪರೆ ವಿರುದ್ಧ ಹೋರಾಡಿದ್ದನ್ನು ವಿವರಿಸಿದರು ಸಿದ್ದರಾಮಯ್ಯ. ಈ ಸಂದರ್ಭದಲ್ಲಿ ತಮ್ಮ ಕಾರಿನ ಮೇಲೆ ಕಾಗೆ ಕುಳಿತ ಪ್ರಸಂಗ ಸ್ಮರಿಸಿದರು. ನನ್ನ ಕಾರಿನ ಮೇಲೆ ಕಾಗೆ ಕುಳಿತಿದ್ದಕ್ಕೆ ಟಿವಿಗಳಲ್ಲಿ ಭಯಂಕರ ಚರ್ಚೆ ನಡೆಯಿತು. ಒಬ್ಬರು, ನಾನು ಬಜೆಟ್ ಮಂಡಿಸಲ್ಲ ಕುರ್ಚಿ ಕಳ್ಕೊತೀನಿ ಎಂದರು. ಇನ್ನೊಬ್ಬರು ಬಜೆಟ್ ಮಂಡಿಸಿದ ಮೇಲೆ ಅಧಿಕಾರ ಕಳ್ಕೊತಾರೆ ಅಂತಾ ಹೇಳಿದ್ದರು. ಆದ್ರೆ ಕಾಗೆ ಹಾರಿಹೋಯ್ತು, ಮೌಡ್ಯದ ಕಾಗೆ ಹಾರಿಸಿದವರೂ ನಾಪತ್ತೆ ಆದರು. ನಾನು ಕಾಗೆ ಕುಳಿತ ಬಳಿಕವೂ 2 ಬಜೆಟ್ ಮಂಡಿಸಿ ಅಧಿಕಾರ ಪೂರ್ತಿಯಾಗಿ, ಸಮರ್ಥವಾಗಿ ನಿರ್ವಹಿಸಿದೆ ಎಂದರು.











Click it and Unblock the Notifications