ಸಿದ್ದು ಪಯಣಿಸಬೇಕಿದ್ದ ಹೆಲಿಕಾಪ್ಟರಲ್ಲಿ ಬೆಂಕಿ, ತಪ್ಪಿದ ಅನಾಹುತ
ಬೆಂಗಳೂರು, ಜ. 10 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಯಾಣಿಸಬೇಕಿದ್ದ ಹೆಲಿಕಾಪ್ಟರ್‌ನಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ಶನಿವಾರ ನಡೆದಿದೆ. ಭದ್ರತಾ ಸಿಬ್ಬಂದಿ ಸಿಎಂ ಅವರನ್ನು ತಕ್ಷಣ ಕೆಳಗಿಳಿಸಿದ್ದು, ಭಾರೀ ಅನಾಹುತ ತಪ್ಪಿದೆ. ಸಿಎಂ ಮೈಸೂರಿಗೆ ಹೆಲಿಕಾಪ್ಟರ್ ಮೂಲಕ ಪ್ರಯಾಣಿಸಬೇಕಿತ್ತು.
ಶನಿವಾರ ಬೆಂಗಳೂರಿನ ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಸ್ವಲ್ಪ ಸಮಯ ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ವಿಶ್ರಾಂತಿ ಪಡೆದ ಸಿಎಂ, ರಸ್ತೆ ಮಾರ್ಗವಾಗಿ ಮೈಸೂರಿಗೆ ಪ್ರಯಾಣ ಬೆಳೆಸಿದ್ದಾರೆ. ಸಿಎಂ ಜೊತೆ ಗೃಹ ಸಚಿವ ಕೆಜೆ ಜಾರ್ಜ್, ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ, ಸಿಎಂ ಜಂಟಿ ಕಾರ್ಯದರ್ಶಿ ರಾಮಯ್ಯ ಮುಂತಾದವರು ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸಬೇಕಿತ್ತು.

ಸಿಎಂ ಸಿದ್ದರಾಮಯ್ಯ ಎಚ್‌ಎಎಲ್ ಏರ್‌ಪೋರ್ಟ್‌ನಿಂದ ಮೈಸೂರಿಗೆ ಪ್ರಯಾಣಿಸಲು ಹೆಲಿಕಾಪ್ಟರ್ ಹತ್ತಿ ಕುಳಿತಿದ್ದಾಗಲೇ ಸೈಲೆನ್ಸರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತು. ಇದನ್ನು ಗಮನಿಸಿದ ಭದ್ರತಾ ಸಿಬ್ಬಂದಿ ಸಿಎಂ ಅವರನ್ನು ತಕ್ಷಣ ಕೆಳಗಿಳಿಸಿ ದೊಡ್ಡ ಅನಾಹುತ ತಪ್ಪಿಸಿದ್ದಾರೆ.
ಯಾವುದೇ ತೊಂದರೆ ಉಂಟಾಗಿಲ್ಲ : ಸಿಎಂ ಸಿದ್ದರಾಮಯ್ಯ ಅವರ ಜೊತೆ ಏರ್‌ಪೋರ್ಟ್‌ನಲ್ಲಿದ್ದ ಗೃಹ ಸಚಿವ ಕೆಜೆ ಜಾರ್ಜ್ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಸಣ್ಣ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಸಿಎಂ ಸುರಕ್ಷಿತವಾಗಿದ್ದು ರಸ್ತೆ ಮಾರ್ಗದ ಮೂಲಕ ಮೈಸೂರಿಗೆ ಪ್ರಯಾಣಿಸಿದ್ದಾರೆ ಎಂದು ಹೇಳಿದ್ದಾರೆ.
ತಾಂತ್ರಿಕ ದೋಷದ ಕಾರಣ ಬೆಂಕಿ ಕಾಣಿಸಿಕೊಂಡಿತ್ತು. ಅದನ್ನು ಭದ್ರತಾ ಸಿಬ್ಬಂದಿ ತಕ್ಷಣ ಗಮನಿಸಿ ಸಿಎಂ ಅವರನ್ನು ಕೆಳಗಿಳಿಸಿದ್ದಾರೆ. ಬೆಂಕಿ ಕಾಣಿಸಿಕೊಂಡ ಘಟನೆ ಬಗ್ಗೆ ತನಿಖೆ ನಡೆಸಲಾಗುತ್ತದೆ ಎಂದು ಗೃಹ ಸಚಿವರು ತಿಳಿಸಿದ್ದಾರೆ.












Click it and Unblock the Notifications