ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆ ಪ್ರಗತಿ ಪರಿಶೀಲಿಸಿದ ಸಿಎಂ: ಸೇವೆಯಲ್ಲಿನ ಲೋಪ ಸರಿಪಡಿಸಲು ಸಿದ್ದರಾಮಯ್ಯ ತಾಕೀತು
ಬೆಂಗಳೂರು, ಜೂನ್ 13: ರಾಷ್ಟ್ರೀಯ ಆರೋಗ್ಯ ಅಭಿಯಾನದ ಉದ್ದೇಶ ಸಮರ್ಪಕವಾಗಿ ಜಾರಿ, ಅದರ ಪ್ರಗತಿ ಕುರಿತು ಸಿಎಂ ಸಿದ್ದರಾಮಯ್ಯ ಅವರು ಪರಿಶೀಲಿಸಿದರು. ಈ ವೇಳೆ ತಜ್ಞ ವೈದ್ಯರ ಕೊರತೆ ಮತ್ತು ಎಂಆರ್ ಐ ಹಾಗೂ ಡಯಾಲಿಸಿಸ್ ಯಂತ್ರಗಳನ್ನು ತಾಲ್ಲೂಕಾ ಆಸ್ಪತ್ರೆಗಳಲ್ಲಿ ಸಮರ್ಪಕವಾಗಿ ಅಳವಡಿಸದ ಕಾರಣ ಆರೋಗ್ಯಾಧಿಕಾರಿಗಳನ್ನು ಅವರು ತರಾಟೆಗೆ ತೆಗೆದುಕೊಂಡರು. ಜನರ ಆರೋಗ್ಯ ರಕ್ಷಣೆ ವಿಚಾರದಲ್ಲಿ ನಿರ್ಲಕ್ಷ್ಯ ಸಹಿಸಲ್ಲ ಎಂದು ಎಚ್ಚರಿಸಿದರು.
ಬೆಂಗಳೂರಿನ ಗೃಹ ಕಚೇರಿ ಕೃಷ್ಣಾದಲ್ಲಿ ಆರೋಗ್ಯ ಆಧಿಕಾರಿಗಳ ಜೊತೆಗೆ ಸಿಎಂ ಸಿದ್ದರಾಮ್ಯ ಸಭೆ ನಡೆಸಿದರು. ಈ ವೇಳೆ ರಾಷ್ಟ್ರೀಯ ಆರೋಗ್ಯ ಅಭಿಯಾನ, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್, ಆರೋಗ್ಯ ಸೇವೆಯ ಲಭ್ಯತೆ ಕುರಿತಂತೆ ಪ್ರತ್ಯೇಕವಾಗಿ ಪ್ರಗತಿ ಪರಿಶೀಲನೆ ನಡೆಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಇದೇ ವೇಳೆ ಅಭಿಯಾನದ ಕೊರತೆಗಳನ್ನು ಗುರುತಿಸಿ ಮುಂದಿನ ಸಭೆ ವೇಳೆಗೆ ಆಗಿರುವ ಲೋಪಗಳನ್ನು ಸರಿಪಡಿಸಿಬೇಕು. ಮತ್ತೆ ತಪ್ಪುಗಳು ಮರುಕಳಿಸದಂತೆ ಕ್ರಮವಹಿಸಲು ಅವರು ಸೂಚನೆ ನೀಡಿದರು.
ರಾಷ್ಟ್ರೀಯ ಆರೋಗ್ಯ ಮಿಷನ್ ನ ಅನುದಾನ ಸಕಾಲದಲ್ಲಿ ಬಳಕೆ ಆಗುತ್ತಿಲ್ಲ. ಮಿಷನ್ ನಡಿ ಆರೋಗ್ಯ ವ್ಯವಸ್ಥೆ ಬಲಪಡಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು. ಈ ಯೋಜನೆಯಡಿ ಶೇಕಡಾ 52 ರಷ್ಟು ತಜ್ಞ ವೈದ್ಯರ ಕೊರತೆ ಇದೆ. ಶೇಕಡಾ 31 ರಷ್ಟು ಎಂಬಿಬಿಎಸ್ ವೈದ್ಯರ ಕೊರತೆ ಹಾಗೂ ಶೇಕಡಾ 18 ರಷ್ಟು ನರ್ಸ್ ಸಿಬ್ಬಂದಿ ಕೊರತೆ ಇದೆ. ಇದೆಲ್ಲ ಗಮನಿಸಿದ ಮುಖ್ಯಮಂತ್ರಿಗಳು ವೇತನ ಹೆಚ್ಚಳ ಹಾಗೂ ಖಾಲಿ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದರು.
ನಿರಂತರವಾಗಿ ರಾಷ್ಟ್ರೀಯ ಆರೋಗ್ಯ ಅಭಿಯಾನ ಪ್ರಗತಿ ಪರಿಶೀಲನೆ ಮಾಡಬೇಕು. ನಿಗದಿತ ಗುರಿ ಸಾಧನೆಯನ್ನು ಖಾತರಿ ಪಡಿಸಬೇಕು ಹಾಗೂ ಅನುದಾನ ಸಕಾಲದಲ್ಲಿ ವೆಚ್ಚ ಮಾಡಬೇಕು ಎಂದು ಇಲಾಖೆಯ ಆಯುಕ್ತರಿಗೆ ಸೂಚಿಸಿದರು.

ಕಳೆದ ಒಂದು ವರ್ಷದಲ್ಲಿ ನಿಗಮಕ್ಕೆ 5 ವ್ಯವಸ್ಥಾಪಕ ನಿರ್ದೇಶಕರ ನೇಮಕ ಮಾಡಿರುವುದರಿಂದ ಸಮಸ್ಯೆ ಆಗಿರುವ ಬಗ್ಗೆ ಅಧಿಕಾರಿಗಳು ಮುಖ್ಯಮಂತ್ರಿಗಳ ಗಮನಕ್ಕೆ ತಂದರು. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಹೀಗೆ ಆಗುವುದಿಲ್ಲ ಎಂದು ಭರವಸೆ ನೀಡಿದರು. ನಿಗಮದ ವ್ಯವಸ್ಥಾಪಕ ನಿರ್ದೇಶಕರು ಕನಿಷ್ಠ 2 ವರ್ಷ ಸೇವೆ ಸಲ್ಲಿಸಬೇಕು ಎಂದರು.
ಸಭೆಯಲ್ಲಿ ಸಿಎಂ ನೀಡಿದ ಇತರ ನಿರ್ದೇಶನಗಳು
* ಎಲ್ಲ ತಾಲ್ಲೂಕು ಆಸ್ಪತ್ರೆಗಳಲ್ಲಿ ಎಂಆರ್ಐ ಸ್ಕ್ಯಾನಿಂಗ್ ಹಾಗೂ ಡಯಾಲಿಸಿಸ್ ಯಂತ್ರಗಳನ್ನು ಅಳವಡಿಸಬೇಕು ಹಾಗೂ ಈ ಎಲ್ಲ ಸೇವೆಗಳನ್ನು ಒದಗಿಸಲು ತಂತ್ರಜ್ಞರನ್ನು ನೇಮಕ ಮಾಡಬೇಕು ಎಂದು ಸೂಚಿಸಿದರು.
* ಸರ್ಕಾರಿ ಆಸ್ಪತ್ರೆಗಳಲ್ಲಿ ಬಡಜನರಿಗೆ ಈ ವಿಶೇಷ ಸೇವೆಗಳನ್ನು ಒದಗಿಸದಿದ್ದರೆ ಅವರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸಲು ಹೇಗೆ ಸಾಧ್ಯ?. ಮೂರು ತಿಂಗಳಲ್ಲಿ ವ್ಯವಸ್ಥೆ ಸರಿಪಡಿಸಬೇಕು. ಸರ್ಕಾರಿ ಆಸ್ಪತ್ರೆಗಳಿಗೆ ಜನ ಬರವಂತೆ ಮಾಡಬೇಕು.
* ಮೂರು ತಿಂಗಳಲ್ಲಿ ಮತ್ತೊಮ್ಮೆ ಪರಿಶೀಲನೆ ನಡೆಸುತ್ತೇನೆ. ಇದೇ ಪರಿಸ್ಥಿತಿ ಮುಂದುವರೆದರೆ ಅಧಿಕಾರಿಗಳೇ ಜವಾಬ್ದಾರರು ಎಂದು ಸಿಎಂ ಎಚ್ಚರಿಸಿದರು.
* ಗ್ರಾಮೀಣ ಪ್ರದೇಶದಲ್ಲಿ ವೈದ್ಯರಿಗೆ ಕಟ್ಟಿಸಿರುವ ವಸತಿ ಗೃಹದಲ್ಲಿ ಯಾವ ವೈದ್ಯರೂ ಉಳಿದುಕೊಳ್ಳುತ್ತಿಲ್ಲ. ಈ ಲೋಪ ಸರಿಪಡಿಸುವಂತೆ ಆಯುಕ್ತರಿಗೆ ಸಿಎಂ ನಿರ್ದೇಶಿಸಿದರು.
* ಆಯುಷ್ಮಾನ್ ಭಾರತ್- ಆರೋಗ್ಯ ಕರ್ನಾಟಕ ಯೋಜನೆಯು Assurance Mode ನಲ್ಲಿದೆ. ತಮಿಳುನಾಡು ಹಾಗೂ ರಾಜಸ್ಥಾನದಲ್ಲಿ ಜಾರಿಯಲ್ಲಿರುವ ಇನ್ಷೂರೆನ್ಸ್ ಮಾದರಿಯನ್ನು ಅಧ್ಯಯನ ಮಾಡಿ ವರದಿ ಕೊಡಬೇಕು.
*ಪ್ರಗತಿ ಪರಿಶೀಲನೆ ವೇಳೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು. ಮನುಷ್ಯರಿಗೆ ಸಹಾಯ ಮಾಡಬೇಕು ಆಗ ನಾವೂ ಮನುಷ್ಯರಾಗುತ್ತೇವೆ. ರೋಗಿಗಳಿಗೆ ಕಾಯಿಲೆ ವಾಸಿ ಮಾಡಲು ಪ್ರಯತ್ನಿಸಬೇಕು. ಪಾವತಿಯ ಅವಧಿ 14 ದಿನಕ್ಕೆ ಇಳಿಕೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆ ಗಳ ಎಂಪ್ಯಾನೆಲ್ ಮೆಂಟ್ ಸುಧಾರಿಸುವ ನಿರೀಕ್ಷೆ ಇದೆ ಎಂದು ಹೇಳಿದರು.
* ಲ್ಯಾಬ್ ಟೆಕ್ನಿಷಿಯನ್ ಮತ್ತಿತರ ಅತಿ ಅಗತ್ಯವಿರುವ ಅರೆ ವೈದ್ಯಕೀಯ ಸಿಬ್ಬಂದಿ ನೇಮಕಕ್ಕೆ ಆದ್ಯತೆ ನೀಡುವಂತೆ ಹಣಕಾಸು ಇಲಾಖೆಗೆ ಸಿದ್ದರಾಮಯ್ಯ ಸೂಚಿಸಿದರು.
* ಔಷಧ ಖರೀದಿ ಪ್ರಕ್ರಿಯೆ ನಿರಂತರವಾಗಿ ನಡೆಯಲು ಅನುವಾಗುವಂತೆ ಎರಡು ವರ್ಷಕ್ಕೊಮ್ಮೆ ಟೆಂಡರ್ ಕರೆಯಲು ಇಲಾಖೆಯು ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಿದರು.
ಸಭೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಡಾ. ರಜನೀಶ್ ಗೋಯಲ್, ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಟಿಕೆ. ಅನಿಲ್ ಕುಮಾರ್, ಆರ್ಥಿಕ ಇಲಾಖೆ ಕಾರ್ಯದರ್ಶಿ ಪಿ.ಸಿ. ಜಾಫರ್, ಮುಖ್ಯಮಂತ್ರಿಯವರ ಕಾರ್ಯದರ್ಶಿ ಎನ್. ಜಯರಾಂ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.












Click it and Unblock the Notifications