ಪರಪ್ಪನ ಅಗ್ರಹಾರದಲ್ಲಿ ಕೈದಿಗಳಿಗೆ ರಾಜಾತಿಥ್ಯ ವೀಡಿಯೋ ವೈರಲ್: ಸಿದ್ದರಾಮಯ್ಯ ಫಸ್ಟ್ ರಿಯಾಕ್ಷನ್
ಬೆಂಗಳೂರು, ನವೆಂಬರ್ 08: ಪರಪ್ಪನ ಅಗ್ರಹಾರದಲ್ಲಿ ಕೈದಿಗಳಿಗೆ ರಾಜಾತಿಥ್ಯ ದೊರಕುತ್ತಿರುವ ಬಗ್ಗೆ ವೀಡಿಯೋ ವೈರಲ್ ಆಗಿರುವ ಕುರಿತು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪರಿಶೀಲಿಸಲಾಗುವುದು ಎಂದು ಪ್ರತಿಕ್ರಿಯಿಸಿದ್ದಾರೆ.
ಇಂದು ದಾಸಶ್ರೇಷ್ಠ ಕನಕದಾಸರ ಜಯಂತಿಯ ಅಂಗವಾಗಿ ಬೆಂಗಳೂರಿನ ಶಾಸಕರ ಭವನದ ಆವರಣದಲ್ಲಿರುವ ಕನಕದಾಸರ ಪ್ರತಿಮೆಯ ಮುಂಭಾಗ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕನಕದಾಸರು ಕೇವಲ ಭಕ್ತರಾಗಿರದೇ ಒಬ್ಬ ದಾರ್ಶನಿಕ ವ್ಯಕ್ತಿಯಾಗಿದ್ದರು. ಸಂತ ಕನಕದಾಸರ ಜಯಂತಿಯನ್ನು ಸರ್ಕಾರ ಶ್ರದ್ಧಾಭಕ್ತಿಗಳಿಂದ ರಾಜ್ಯಾದ್ಯಂತ ಆಚರಿಸುತ್ತಿದೆ. ಕನಕದಾಸರ ಸಂದೇಶಗಳನ್ನು ಈ ನಾಡಿನ ಜನತೆಗೆ ತಿಳಿಸುವಂತಹ ಪ್ರಯತ್ನವನ್ನು ಮಾಡುತ್ತಿದೆ ಎಂದರು.

ಕನಕದಾಸರು ಸಮಾಜದಲ್ಲಿ ಬದಲಾವಣೆಯನ್ನು ತರಲು ಬಯಸಿದ್ದರು. ಶ್ರೀಕೃಷ್ಣನ ಮಹಾ ಭಕ್ತರಾಗಿದ್ದು ಉಡುಪಿಯಲ್ಲಿ ಕನಕನ ಕಿಂಡಿ ನಿರ್ಮಾಣವಾಗಲು ಕಾರಣರಾದರು. ಅಂಥವರ ಜನ್ಮ ದಿನವನ್ನು ಇಂದು ಆಚರಿಸುವ ಮೂಲಕ ಜನತೆಗೆ ಕನಕದಾಸರ ಬಗ್ಗೆ ಜನರಿಗೆ ತಿಳಿಸಿಕೊಡಲಾಗುತ್ತಿದೆ. ಅವರು ಆಕಸ್ಮಿಕವಾಗಿ ಕುರುಬ ಜನಾಂಗದಲ್ಲಿ ಹುಟ್ಟಿದ್ದರೂ ವಿಶ್ವಮಾನವರಾದರು ಎಂದರು.
ಕುಲಕುಲ ವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ ಎಂದು ಹೇಳಿ ಮನುಷ್ಯರೆಲ್ಲರೂ ಒಂದೇ ಎಂದು ಸಾರಿದರು. ತಮ್ಮ ಕೀರ್ತನೆ, ಹಾಡುಗಳ ಮೂಲಕ ಈ ಸಂದೇಶವನ್ನು ತಿಳಿಸಿದ್ದಾರೆ. ಅವರನ್ನು ಗೌರವಿಸಿ ಸ್ಮರಿಸುವ ಕೆಲಸವನ್ನು ಸರ್ಕಾರ ಇಂದು ಮಾಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಸಕ್ಕರೆ ಕಾರ್ಖಾನೆ ಮಾಲೀಕರು, ರೈತ ಮುಖಂಡರೊಂದಿಗೆ ಚರ್ಚಿಸಿ ನಿನ್ನೆ ರಾಜ್ಯ ಸರ್ಕಾರ ಕೈಗೊಂಡಿರುವ ನಿರ್ಧಾರದ ಬಗ್ಗೆ ಮಾಜಿ ಸಚಿವ ಮುರುಗೇಶ್ ನಿರಾಣಿ ಸೇರಿದಂತೆ ಸಕ್ಕರೆ ಮಾಲೀಕರು ಅಸಮಾಧಾನ ವ್ಯಕ್ತಪಡಿಸಿರುವ ಬಗ್ಗೆ ಮಾತನಾಡಿ, ಅವರೆಲ್ಲರ ಸಮ್ಮುಖದಲ್ಲಿಯೇ ಈ ತೀರ್ಮಾನವಾಗಿದೆ. ಜೂನ್ ನಲ್ಲಿ ಜಿಲ್ಲಾಧಿಕಾರಿಗಳು ಹೇಳುವವರಿಗೆ 3200 ರೂ.ಗಳಿಗೆ ಅವರು ಒಪ್ಪಿರಲಿಲ್ಲ. ನಂತರದಲ್ಲಿ ಒಪ್ಪಿಕೊಂಡರು.50 ರೂ.ಗಳನ್ನು ಕಾರ್ಖಾನೆ ಮಾಲೀಕರು ಕೊಡಬೇಕೆಂದು ಬಹಳ ಸ್ಪಷ್ಟವಾಗಿ ಹೇಳಲಾಗಿದೆ. ಸರ್ಕಾರ 50 ರೂ. ಪ್ರೋತ್ಸಾಹಧನ ಪಾವತಿಸಲಿದೆ. 10.25 ರಿಕವರಿ ಇದ್ದರೆ 3100 ರೂ.ಜೊತೆಗೆ 100 ರೂ.ಗಳು, ಹಾಗೂ 11.25 ರಿಕವರಿ ಇದ್ದರೆ 3200 ಜೊತೆಗೆ 100 ರೂ. ಸೇರಿದಂತೆ ಒಟ್ಟು 3300 ಒದಗಿಸಲಾಗುವುದು ಎಂದರು.
ಈ ಬಗ್ಗೆ ಸರ್ಕಾರದ ಆದೇಶ ಹೊರಡಿಸಲಾಗುವುದು. ಸಚಿವ ಶಿವಾನಂದ ಪಾಟೀಲರು ಅಲ್ಲಿಯೇ ಘೋಷಣೆ ಮಾಡಲಿದ್ದಾರೆ. ಸರ್ಕಾರ ಬೇರೆ ವಿಚಾರಗಳ ಬಗ್ಗೆ ಪ್ರತ್ಯೇಕ ಸಭೆ ನಡೆಸಲು ತೀರ್ಮಾನಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.












Click it and Unblock the Notifications