7th Pay Commission; ಆಯೋಗದ ಜೊತೆ ಸಿಎಂ ಮಹತ್ವದ ಸಭೆ
ಬೆಂಗಳೂರು, ಫೆಬ್ರವರಿ 12: ಕರ್ನಾಟಕದ ಬಜೆಟ್ ಅಧಿವೇಶನ 2024 ಸೋಮವಾರ ಆರಂಭವಾಗಲಿದೆ. ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಫೆಬ್ರವರಿ 16ರಂದು 2024-25ನೇ ಸಾಲಿನ ಬಜೆಟ್ ಮಂಡಿಸಲಿದ್ದಾರೆ.
ಬಜೆಟ್ ಮಂಡನೆಗೂ ಮೊದಲು ಮುಖ್ಯಮಂತ್ರಿ ಸಿದ್ದರಾಮಯ್ಯ ಕೆ. ಸುಧಾಕರ್ ನೇತೃತ್ವದ 7ನೇ ವೇತನ ಆಯೋಗದ ಜೊತೆ ಮಹತ್ವದ ಸಭೆಯನ್ನು ನಡೆಸಲಿದ್ದಾರೆ. ಸೋಮವಾರದ ಮುಖ್ಯಮಂತ್ರಿಗಳ ಕಾರ್ಯಕ್ರಮ ಪಟ್ಟಿಯಲ್ಲಿ ಈ ಸಭೆಯ ಮಾಹಿತಿ ಇದೆ.

ಸೋಮವಾರ ಮಧ್ಯಾಹ್ನ 3 ಗಂಟೆಗೆ ವಿಧಾನಸೌಧದ ಮುಖ್ಯಮಂತ್ರಿಗಳ ಕೊಠಡಿಯಲ್ಲಿ ರಾಜ್ಯ 7ನೇ ವೇತನ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರ ಜೊತೆ ಸಭೆ ನಡೆಯಲಿದೆ. ಬಜೆಟ್‌ಗೆ ಕೆಲವೇ ದಿನಗಳು ಬಾಕಿ ಇರುವ ಹಿನ್ನಲೆಯಲ್ಲಿ ಸಭೆ ಕುತೂಹಲ ಮೂಡಿಸಿದೆ.
ನವೆಂಬರ್‌ನಲ್ಲಿ 7ನೇ ರಾಜ್ಯ ವೇತನ ಆಯೋಗದ ಅವಧಿ ಅಂತ್ಯಗೊಳ್ಳುತ್ತಾ ಬಂದಿತ್ತು. ಆಗ ಕೆ. ಸುಧಾಕರ್ ನೇತೃತ್ವದ ವೇತನ ಆಯೋಗ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಹಲವಾರು ವಿಚಾರಗಳ ಕುರಿತು ಚರ್ಚೆ ನಡೆಸಿತ್ತು. ಆದರೆ ಆಯೋಗದ ವರದಿಯನ್ನು ಸಲ್ಲಿಕೆ ಮಾಡಿರಲಿಲ್ಲ.
ಆಯೋಗದ ಅವಧಿ ವಿಸ್ತರಣೆ; ಬಳಿಕ ಕರ್ನಾಟಕ ರಾಜ್ಯ 7ನೇ ವೇತನ ಆಯೋಗದ ಅವಧಿಯನ್ನು 15/3/2024ರ ತನಕ ವಿಸ್ತರಣೆ ಮಾಡಿದೆ. ಈ ವಿಸ್ತರಣೆ ಆದೇಶ ಪ್ರಕಟವಾದ ಬಳಿಕ ಮೊದಲ ಬಾರಿಗೆ 7ನೇ ವೇತನ ಆಯೋಗದ ಜೊತೆ ಮುಖ್ಯಮಂತ್ರಿಗಳು ಸಭೆಯನ್ನು ನಡೆಸುತ್ತಿದ್ದಾರೆ.
ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಮಂಡಿಸುತ್ತಿದ್ದಾರೆ. ಅಲ್ಲದೇ ಆಯೋಗದ ಅವಧಿ ಅಂತ್ಯಗೊಳ್ಳುವ ಮಾರ್ಚ್ 15ರ ಹೊತ್ತಿಗೆ ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಗೆ ಬಂದಿರುವ ನಿರೀಕ್ಷೆ ಇದೆ. ಈ ಹಿನ್ನಲೆಯಲ್ಲಿ ಬಜೆಟ್‌ನಲ್ಲಿ ವೇತನ ಆಯೋಗದ ವರದಿ ಕುರಿತು ಯಾವುದಾದರೂ ಘೋಷಣೆ ಮಾಡಲು ಈ ಸಭೆಯನ್ನು ನಡೆಸುತ್ತಿದ್ದಾರೆಯೇ? ಎಂದು ಕಾದು ನೋಡಬೇಕಿದೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಎರಡು ಬಾರಿ ರಾಜ್ಯ 7ನೇ ವೇತನ ಆಯೋಗದ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ. 2023ರ ನವೆಂಬರ್‌ನಲ್ಲಿ ಸರ್ಕಾರ 7ನೇ ರಾಜ್ಯ ವೇತನ ಆಯೋಗದ ವರದಿಯನ್ನು ಪಡೆಯಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ ಆಯೋಗದ ಅವಧಿ ವಿಸ್ತರಣೆ ಮಾಡಲಾಗಿತ್ತು.
ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಾಗುವ ಮೊದಲು 7ನೇ ರಾಜ್ಯ ವೇತನ ಆಯೋಗದ ವರದಿಯನ್ನು ಪಡೆದು ಅನುಷ್ಠಾನಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಸರ್ಕಾರದ ಮುಂದೆ ಬೇಡಿಕೆ ಇಟ್ಟಿದೆ.
ಅಲ್ಲದೇ ಫೆಬ್ರವರಿ ಮೊದಲ ವಾರದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ. ಎಸ್. ಷಡಾಕ್ಷರಿ ನೇತೃತ್ವದ ನಿಯೋಗ 7ನೇ ವೇತನ ಆಯೋಗದ ಅಧ್ಯಕ್ಷ, ಸದಸ್ಯರನ್ನು ಭೇಟಿ ಮಾಡಿತ್ತು, ಹಲವಾರು ವಿಚಾರಗಳ ಕುರಿತು ವಿವರವಾದ ಚರ್ಚೆ ನಡೆಸಿತ್ತು.
ಪ್ರಮುಖವಾಗಿ ಈ ಹಿಂದೆ 6ನೇ ವೇತನ ಆಯೋಗದ ಅಧ್ಯಕ್ಷರಾದ ಶ್ರೀ ಶ್ರೀನಿವಾಸ ಮೂರ್ತಿ ಅವರು 8 ತಿಂಗಳ ಅವಧಿಯೊಳಗೆ ಸರ್ಕಾರಕ್ಕೆ ಸಲ್ಲಿಸಿದ 6ನೇ ವೇತನ ಆಯೋಗದ ವರದಿಯನ್ನು ಸ್ವೀಕರಿಸಿದ ಒಂದು ತಿಂಗಳ ಅವಧಿಯಲ್ಲಿ ಅಂದಿನ ರಾಜ್ಯ ಸರ್ಕಾರವು ಅನುಷ್ಠಾನಗೊಳಿಸಿರುವ ಅಂಶವನ್ನು ಆಯೋಗದ ಗಮನಕ್ಕೆ ತರಲಾಗಿತ್ತು.
ವೇತನ ಆಯೋಗ ರಚನೆಯಾಗಿ 14 ತಿಂಗಳುಗಳಾಗಿದ್ದು, ವರದಿ ಸಲ್ಲಿಸಲು ಈಗಾಗಲೇ ತುಂಬಾ ವಿಳಂಬವಾಗಿರುವ ವಿಷಯವನ್ನು ಹಾಗೂ ವೇತನ ಆಯೋಗದ ಅನುಷ್ಠಾನದ ಬಗ್ಗೆ ನೌಕರರಲ್ಲಿ ಮೂಡಿರುವ ಆತಂಕದ ವಿಷಯವನ್ನು ಸಭೆಯಲ್ಲಿ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರ ಮುಂದೆ ಪ್ರಸ್ತಾಪಿಸಲಾಗಿತ್ತು.
ಮಾರ್ಚ್‌ನಲ್ಲಿ ಲೋಕಸಭೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಬರುವುದರಿಂದ ವೇತನ ಆಯೋಗದ ವರದಿಯನ್ನು ಜಾರಿಗೊಳಿಸಲು ತೊಡಕಾಗಲಿರುವ ಅಂಶವನ್ನು ಆಯೋಗಕ್ಕೆ ತಿಳಿಸಲಾಗಿತ್ತು.
ಸರ್ಕಾರ ಮಂಡಿಸಲಿರುವ ಆಯವ್ಯಯಕ್ಕಿಂತ ಮುಂಚಿತವಾಗಿ ಹಾಗೂ ಲೋಕಸಭಾ ಚುನಾವಣೆ ನೀತಿ ಸಂಹಿತೆ ಪ್ರಾರಂಭವಾಗುವುದಕ್ಕಿಂತ ಮೊದಲು 7ನೇ ರಾಜ್ಯ ವೇತನ ಆಯೋಗದ ವರದಿ ಅನುಷ್ಠಾನಗೊಳಿಸಲು ಅನುಕೂಲವಾಗುವಂತೆ ವರದಿಯನ್ನು ಶೀಘ್ರ ಸರ್ಕಾರಕ್ಕೆ ಸಲ್ಲಿಸಲು ಸರ್ಕಾರಿ ನೌಕರರ ಸಂಘ ಆಯೋಗಕ್ಕೆ ಮನವಿ ಮಾಡಿತ್ತು.












Click it and Unblock the Notifications