ಸಂಪುಟ ವಿಸ್ತರಣೆ: ಜೂ.28ಕ್ಕೆ ಸಿದ್ದರಾಮಯ್ಯ ದೆಹಲಿಗೆ
ಬೆಂಗಳೂರು, ಜೂನ್ 26 : ರಾಜ್ಯ ಸಚಿವ ಸಂಪುಟದಲ್ಲಿ ಖಾಲಿ ಇರುವ ಮೂರು ಸ್ಥಾನಗಳನ್ನು ಭರ್ತಿ ಮಾಡಿ ಸಂಪುಟ ವಿಸ್ತರಿಸಬೇಕು ಎಂಬ ಒತ್ತಡಗಳು ಕಾಂಗ್ರೆಸ್ ನಲ್ಲಿ ಹೆಚ್ಚಿರುವಾಗಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ (ಜೂ.28) ದೆಹಲಿಗೆ ತೆರಳಿ ಸಂಪುಟ ವಿಸ್ತರಣೆಯ ಬಗ್ಗೆ ಪಕ್ಷದ ವರಿಷ್ಠ ನಾಯಕರೊಂದಿಗೆ ಸಮಾಲೋಚನೆ ನಡೆಸುವರು.
ನಗರದ ರಾಜಾಜಿನಗರದಲ್ಲಿ ಆರೋಗ್ಯಮಂದಿರ ಟ್ರಸ್ಟ್ ಆಯೋಜಿಸಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟ ವಿಸ್ತರಣೆ ಬಗ್ಗೆ ಇದೇ ತಿಂಗಳ 28ರಂದು ದೆಹಲಿಯಲ್ಲಿ ಪಕ್ಷದ ವರಿಷ್ಠರೊಂದಿಗೆ ಚರ್ಚೆ ನಡೆಸುವುದಾಗಿ ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.
ರಾಷ್ಟ್ರಪತಿ ಚುನಾವಣೆಗೆ ಮೀರಾಕುಮಾರ್ ಅವರ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಹಾಜರಿರಲು ದೆಹಲಿಗೆ ಹೋಗುತ್ತಿದ್ದೇನೆ. ಆ ಸಂದರ್ಭದಲ್ಲಿ ಸಾಧ್ಯವಾದರೆ ವರಿಷ್ಠ ನಾಯಕರನ್ನು ಭೇಟಿ ಮಾಡಿ ಸಂಪುಟ ವಿಸ್ತರಣೆಯ ಬಗ್ಗೆ ಚರ್ಚೆ ನಡೆಸುತ್ತೇನೆ ಎಂದರು.

ಮೂರು ಸ್ಥಾನಗಳು ಖಾಲಿ
ಎಚ್ ಸಿ ಮಹಾದೇವ ಪ್ರಸಾದ್ (ಅಕಾಲಿಕ ಮರಣ), ಡಾ. ಜಿ ಪರಮೇಶ್ವರ (ರಾಜೀನಾಮೆ), ಎಚ್ ವೈ ಮೇಟಿ(ರಾಜೀನಾಮೆ) ಅವರಿಂದ ತೆರವಾದ ಮೂರು ಸ್ಥಾನಗಳನ್ನು ಭರ್ತಇ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಳೆ ಸಂಜೆ ದೆಹಲಿಗೆ ತೆರಳಿ ವರಿಷ್ಠರೊಂದಿಗೆ ಮಾತುಕತೆ ನಡೆಸುವರು.

ಜಾತಿವಾರು ಲೆಕ್ಕಚಾರ
ಮೂರು ಸ್ಥಾನಗಳಿಗೆ ಜಾತಿ ಅನುಗುಣವಾಗಿ ನೀಡಲು ಸಿದ್ದರಾಮಯ್ಯ ಅವರ ಲೆಕ್ಕಚಾರವಾಗಿದ್ದು, ಈ ಮೊದಲು ಎಚ್ ಸಿ ಮಹಾದೇವ ಪ್ರಸಾದ್ (ಲಿಂಗಾಯತ) , ಎಚ್ ವೈ ಮೇಟಿ(ಕುರುಬ), ಡಾ. ಜಿ ಪರಮೇಶ್ವರ(ದಲಿತ) ನೀಡಲಾಗಿತ್ತು. ಈ ಬಾರಿಯೂ ಇದೇ ಜಾತಿ ಲೆಕ್ಕಚಾರಗಳ ಮೇಲೆ ಸಂಪುಟ ವಿಸ್ತರಣೆ ಮಾಡಲು ತೀರ್ಮಾನಿಸಲಾಗಿದೆ.

ಪ್ರಮುಖರ ಪೈಪೋಟಿ
ಒಂದು ಸ್ಥಾನ ಖಾಲಿ ಇರುವ ದಲಿತ ಕೋಟದಡಿ ಆರ್ ಬಿ ತಿಮ್ಮಾಪುರ, ನಾರಾಯಣಸ್ವಾಮಿ, ಮೊಟಮ್ಮ ಮಂತ್ರಿ ಸ್ಥಾನದ ಪ್ರಮುಖ ಆಕಾಂಕ್ಷಿಗಳಾಗಿದ್ದಾರೆ. ಇನ್ನು ಕುರುಬರ ಪೈಕಿ ವಿಧಾನ ಪರಿಷತ್ ಸದಸ್ಯ ಎಚ್ ಎಂ ರೇವಣ್ಣ ಮೊದಲಾದವರು. ಕೊನೆಯದಾಗಿ ಲಿಂಗಾಯತ ಕೋಟದಲ್ಲಿ ಕಾಂಗ್ರೆಸ್ ದೆಹಲಿ ಪ್ರತಿನಿಧಿ ಸಿ ಎಸ್ ನಾಡಗೌಡ, ಗೀತಾ ಮಹಾದೇವ ಪ್ರಸಾದ್, ತಿಪಟೂರು ಶಾಸಕ ಷಡಕ್ಷರಿ ಸಚಿವ ಸ್ಥಾನಕ್ಕೆ ಲಾಭಿ ನಡೆಸಿದ್ದಾರೆ.

ಸಂಪುಟ ವಿಸ್ತರಣೆ ಚರ್ಚೆ ಅನುಮಾನ
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಇಟಲಿ ಪ್ರವಾಸದಲ್ಲಿದ್ದಾರೆ. ರಾಜ್ಯ ಉಸ್ತುವಾರಿ ವೇಣುಗೋಪಾಲ್ ಕರ್ನಾಟಕ ಪ್ರವಾಸದಲ್ಲಿ ಇರುತ್ತಾರೆ. ಹೀಗಾಗಿ, ಸಂಪುಟ ವಿಸ್ತರಣೆ ಕುರಿತು ಇದೇ 28ರಂದು ಚರ್ಚೆ ನಡೆಯುವ ಸಾಧ್ಯತೆ ಕಡಿಮೆ ಎಂದು ಪಕ್ಷದ ಮೂಲಗಳು ತಿಳಿಸಿವೆ.












Click it and Unblock the Notifications