ಸರ್ಕಾರಿ ಅಧಿಕಾರಿಗಳ ಸಭೆಯೇ ನಡೆದಿಲ್ಲ: ಎಚ್‌ಡಿಕೆಗೆ ಸಿದ್ದು ತಿರುಗೇಟು, ಸಿಎಂ ಹೇಳಿದ್ದೇನು?
ಬೆಂಗಳೂರು, ಜೂನ್ 14: ಕರ್ನಾಟಕ ಸರ್ಕಾರದ ಹಿರಿಯ ಅಧಿಕಾರಿಗಳ ಜೊತೆಗೆ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ ಅವರ ಉಪಸ್ಥಿತಿ ಕುರಿತು ಜೆಡಿಎಸ್ ಮತ್ತು ಬಿಜೆಪಿ ಸಾಕಷ್ಟು ಟೀಕೆಗಳನ್ನು ಮಾಡಿದ್ದವು. ಈ ಕುರಿತು ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ ಅವರು ಎರಡು ಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ.
ಲೋಕಸಭಾ ಚುನಾವಣೆಗೂ ಮುನ್ನವೇ ಬೆಂಗಳೂರಿನ ಬಿಬಿಎಂಪಿ ಚುನಾವಣೆ ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಸಂಬಂಧವೇ ದೆಹಲಿ ಹಂಗಿನ ಸರ್ಕಾರ ನಡೆಸಿದ ಸಭೆಯಲ್ಲಿ ಸುರ್ಜೇವಾಲ ಭಾಗಿಯಾಗಿದ್ದಾರೆ. ಬಿಬಿಎಂಪಿ ಅಧಿಕಾರಿಗಳು ಭಾಗಿಯಾಗಿದ್ದಾರೆ. ಇವರು ರಾಜ್ಯದ ಹಣ ಲೂಟಿ ಮಾಡಲು ಬಂದಿರುವ ದೆಹಲಿ ಪ್ರತಿನಿಧಿ ಎಂದೆಲ್ಲ ಜೆಡಿಎಸ್ ಮುಖ್ಯಸ್ಥ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದರು.

ನೆನ್ನೆ ನಡೆದ ಸರ್ಕಾರಿ ಅಧಿಕಾರಿಗಳ ಸಭೆಯಲ್ಲಿ ಸುರ್ಜೇವಾಲ ಅವರು ಭಾಗಿಯಾಗಿರಲಿಲ್ಲ. ಬದಲಾಗಿ ಆ ಸಂಬಂಧ ಅಧಿಕೃತವಾಗಿ ಸಭೆ ನಡೆದಿಲ್ಲ ಎಂದು ಸಿಎಂ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ರಣದೀಪ್ ಸುರ್ಜೇವಾಲ ಅವರು ನಗರದ ಹೋಟೆಲ್‌ನಲ್ಲಿದ್ದರು. ಅವರು ನಮ್ಮ ಶಾಸಕರನ್ನು ಬಿಬಿಎಂಪಿ ಚುನಾವಣೆ ಕುರಿತು ಚರ್ಚಿಸಲು ಆಹ್ವಾನಿಸಿದ್ದರು. ಈ ಸಂಬಂಧವೇ ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಇನ್ನಿತರ ಶಾಸಕರು, ಸಚಿವರು ಸುರ್ಜೇವಾಲ ಭೇಟಿಗೆ ತೆರಳಿದ್ದರು.
ಡಿಕೆಶಿ ಭೇಟಿ ಮಾಡಲು ಅಧಿಕಾರಿಗಳು ಬಂದಿದ್ದರು
ಈ ವೇಳೆ ನಗರ ಪ್ರದಕ್ಷಿಣೆ (ಸಿಟಿರೌಂಡ್ಸ್) ಕುರಿತು ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಲು ಅದೇ ಹೋಟೆಲ್‌ಗೆ ಆಗಮಿಸಿದ್ದರು. ಇದಷ್ಟೇ ಹೊರತು ಯಾವ ಅಧಿಕೃತ ಸಭೆಯು ನಡೆದಿಲ್ಲ. ಬೇಕಿದ್ದರೆ ಬಿಜೆಪಿಯವರು ರಾಜ್ಯಪಾಲರಿಗೆ ದೂರು ಕೊಡುವುದಿದ್ದರೆ ಕೊಡಲಿ ಎಂದು ಮುಖ್ಯಮಂತ್ರಿಗಳು ತಿರುಗೇಟು ನೀಡಿದರು.

ಬೆಂಗಳೂರಿನ ಹೋಟೆಲ್‌ನಲ್ಲಿ ರಾಜ್ಯ ಸರ್ಕಾರದ ಅಧಿಕಾರಿಗಳ ಸಭೆ ನಡೆದಿದೆ. ಅದರಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಬಿಬಿಎಂಪಿ ಅಧಿಕಾರಿಗಳು ಪಾಲ್ಗೊಂಡಿದ್ದರು. ಈ ಸಭೆಯಲ್ಲಿ ದೆಹಲಿ ಕಾಂಗ್ರೆಸ್ ಪ್ರತಿನಿಧಿ ಸುರ್ಜೆವಾಲ ಅವರಿಗೆ ಏನು ಕೆಲಸ, ಅವರಿಗೂ ಸರ್ಕಾರದ ಅಧಿಕಾರಿಗಳಿಗೂ ಏನು ಸಂಬಂಧ ಎಂದು ಎಚ್‌ಡಿ ಕುಮಾರಸ್ವಾಮಿ ಅವರು ಸಭೆ ಫೋಟೊ ಹಂಚಿಕೊಂಡು ವಾಗ್ದಾಳಿ ನಡೆಸಿದ್ದರು.
ದೂರಿನ ಬಗ್ಗೆ ಹೇಳಿದ್ದ ಬಿಜೆಪಿ: ಸಿಂಹಗೆ ಸಿದ್ದು ಎದುರೇಟು
ಕರ್ನಾಟಕದ ಜನರು ಮತ ಹಾಕಿರುವುದು ನಿಮಗೋ? ಇಲ್ಲದ ದೆಹಲಿ ನಂಬರ್ 10 ಕಾಂಗ್ರೆಸ್ ಹೈಕಮಾಂಡ್‌ಗೋ?. ಕರ್ನಾಟಕಕಕ್ಕೆ ಎಂತಹ ದುರ್ಗತಿ ಬಂದಿದೆ ಎಂದು ಜನ ಅರ್ಥ ಮಾಡಿಕೊಳ್ಳಬೇಕು. ಇದು ಹೈಕಮಾಂಡ್ ಹಂಗಿನಾ ಸರ್ಕಾರ ಆಗಿರುವುದಕ್ಕೆ ಇದೇ ಎಂದು ಕುಮಾರಸ್ವಾಮಿ ಟೀಕಿಸಿದ್ದರು. ಇತ್ತ ಬಿಜೆಪಿ ಸಹ ಕಾಂಗ್ರೆಸ್ ವಿರುದ್ಧ ಹರಿಹಾಯ್ದು, ಸಭೆ ಕುರಿತು ರಾಜ್ಯಪಾಲರಿಗೆ ದೂರು ನೀಡುವುದಾಗಿ ಹೇಳಿತ್ತು.
ಇನ್ನೂ ಕಾಂಗ್ರೆಸ್ ಬಿಜೆಪಿ ಜೊತೆ ಹೊಂದಾಣಿಕೆ ರಾಜಕಾರಣ ಮಾಡಿಕೊಂಡಿದೆ ಎಂದು ಬಿಜೆಪಿ ಸಂಸದ ಪ್ರತಾಪ್ ಸಿಂಹ ಆರೋಪಿಸಿದ್ದರು. ಈ ಕುರಿತು ಮಾತನಾಡಿದ ಸಿಎಂ ಸಿದ್ದರಾಮಯ್ಯ, ಹೊಂದಾಣಿಕೆ ರಾಜಕಾರಣ ಮಾಡುತ್ತಿರುವುದು ಯಾರು?, ಪ್ರತಾಪ್ ಸಿಂಹ ಎಳಸು ಮನುಷ್ಯ, ಆತನಿಗೆ ರಾಜಕೀಯ ಪ್ರಬುದ್ಧತೆ ಇನ್ನೂ ಇಲ್ಲ. ಮೈಸೂರು-ಬೆಂಗಳೂರು ಎಕ್ಸಪ್ರೆಸ್ ವೇ ಮಾಡಿಸಿದ್ದ ತಾವೇ ಎಂದು ಹೇಳುತ್ತಾರೆ ಎಂದು ಸಂಸದರ ಆರೋಪಕ್ಕೆ ಎದುರೇಟು ಕೊಟ್ಟರು.












Click it and Unblock the Notifications