ಗವರ್ನರ್ ವಿರುದ್ಧ ರಾಷ್ಟ್ರಪತಿಗಳಿಗೆ ದೂರು ನೀಡಲು ಸಿದ್ಧವಾಯ್ತು ಸಿದ್ದರಾಮಯ್ಯ ಸರ್ಕಾರ?: ಸಿಎಂ ಬಿಚ್ಚಿಟ್ಟ ಮಾಹಿತಿ
ಬೆಂಗಳೂರು, ಆಗಸ್ಟ್ 25: ರಾಜ್ಯ ರಾಜಕಾರಣದಲ್ಲಿ ಮುಡಾ ಹಗರಣ ದೊಡ್ಡ ಬಿರುಗಾಳಿ ಎಬ್ಬಿಸಿದೆ. ಇದು ಆಡಳಿತ ಪಕ್ಷ ಕಾಂಗ್ರೆಸ್ ಹಾಗೂ ವಿಪಕ್ಷ ಬಿಜೆಪಿ ಮಧ್ಯೆ ಹೋರಾಟ ಉಂಟಾಗುವ ಜೊತೆಗೆ ಸಿಎಂ ಸಿದ್ದರಾಮಯ್ಯ ಹಾಗೂ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಥ್ ಮಧ್ಯೆದ ಮುನಿಸಿಗೆ ಕಾರಣವಾಗಿದೆ. ಇದೀಗ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ರಾಷ್ಟ್ರಪತಿಗಳಿಗೆ ದೂರು ನೀಡಲು ಸಿದ್ಧತೆ ಆರಂಭಿಸಿದೆ. ಯಾರ ವಿರುದ್ಧ, ಯಾವ ಕಾರಣಕ್ಕೆ ಎಂಬ ಮಾಹಿತಿ ಇಲ್ಲಿದೆ.
ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಪಾಲ್ಗೊಂಡಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತರೊಬ್ಬರು ರಾಜ್ಯಪಾಲರಿಗೆ ದೂರು ನೀಡುತ್ತಿದ್ದಂತೆ ರಾಜ್ಯಪಾಲರು, ಸಿಎಂಗೆ ನೋಟಿಸ್ ಜಾರಿ ಮಾಡಿದರು. ನಂತರ ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಸಹ ನೀಡಿ ಬಿಟ್ಟರು.

ನಂತರ ರಾಜ್ಯ ಸರ್ಕಾರವು ಮಂಡಿಸಿದ್ದ ಸುಮಾರು ಹನ್ನೊಂದು ಮಸೂದೆಗಳನ್ನು ರಾಜ್ಯಪಾಲರು ಅನುಮೋದನೆ ನೀಡದೇ ಮರಳಿ ಕಳುಹಿಸಿದ್ದಾರೆ. ಇದೆಲ್ಲದ್ದರಿಂದ ಹಿನ್ನಡೆ ಎದುರಿಸುತ್ತಿರುವ ರಾಜ್ಯ ಸರ್ಕಾರ ರಾಜ್ಯಪಾಲರ ವಿರುದ್ದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ದೂರು ನೀಡಲು ಸಿದ್ಧತೆ ಆರಂಭಿಸಿರುವ ಮಾಹಿತಿ ಲಭ್ಯವಾಗಿದೆ.
ರಾಜ್ಯಪಾಲರನ್ನು ವಾಪಾಸ್ ಕರೆಸಿಕೊಳ್ಳುವಂತೆ ಒತ್ತಾಯ
ರಾಜ್ಯಪಾಲರ ಕಚೇರಿಯು ರಾಜಕೀಯವಾಗಿ ದುರ್ಬಳಕೆ ಆಗುತ್ತಿದೆ ಎಂದು ರಾಜ್ಯ ಸರ್ಕಾರ ಗಂಭೀರ ಆರೋಪ ಮಾಡಿದೆ. ಈ ಕೂಡಲೇ ರಾಜ್ಯದಿಂದ ರಾಜ್ಯಪಾಲರನ್ನು ವಾಪಾಸ್ ಕರೆಸಿಕೊಳ್ಳಬೇಕು ಎಂದು ಮನವಿ ಪತ್ರದ ಮುಖೇನ ಸರ್ಕಾರ ಒತ್ತಾಯಿಸುವ ಸಾಧ್ಯತೆ ಇದೆ ಎಂದು ಸಿಎಂ ಸಿದ್ದರಾಮಯ್ಯ ಶನಿವಾರ ಬೆಂಗಳೂರಿನಲ್ಲಿ ಮಾಹಿತಿ ನೀಡಿದ್ದಾರೆ.
ಮುಡಾ ಹಗರಣ ಇಟ್ಟುಕೊಂಡು ಬಿಜೆಪಿ ಪಾದಯಾತ್ರೆ ಮಾಡಿತು. ಅದನ್ನು ನಾವು ರಾಜಕೀಯವಾಗಿ ಎದುರಿಸುತ್ತೇವೆ. ಅದಲ್ಲದೇ ಬಿಜೆಪಿ ಹಾಗೂ ರಾಜ್ಯಪಾಲರು ಮತ್ತು ರಾಜ್ಯ ರಾಜಕೀಯ ಇತ್ತೀಚಿನ ಬೆಳವಣಿಗೆ ಕುರಿತು ಕೇಂದ್ರ ಹೈಕಮಾಂಡ್ ಗಮನಕ್ಕೆ ತಂದಿದ್ದೇವೆ. ದೆಹಲಿಗೆ ನಾನು, ಗೃಹ ಸಚಿವರ ಪರಮೇಶ್ವರ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ತೆರಳಿದ್ದ ವೇಳೆ ಅಲ್ಲಿ ನಮ್ಮ ನಾಯಕರೊಂದಿಗೆ ಈ ಕುರಿತು ಚರ್ಚಿಸಲಾಗಿದೆ. ಎಲ್ಲ ಬೆಳವಣಿಗೆಯನ್ನು ಅವರ ಗಮನಕ್ಕೆ ತಂದಿದ್ದು, ರಾಜ್ಯಪಾಲರ ವಿರುದ್ಧ ದೂರು ನೀಡುವ ಎಲ್ಲ ಅವಕಾಶಗಳು ಇವೆ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದು ಕಾನೂನು ಬಾಹಿರ
ಇನ್ನೂ ರಾಜ್ಯಪಾಲರು ಮುಡಾ ಪ್ರಕರಣದಲ್ಲಿ ತನಿಖೆಗೆ ಅನುಮತಿ ನೀಡಿರುವುದು ಕಾನೂನು ಬಾಹಿರವಾಗಿದೆ. ರಾಜ್ಯಪಾಲರ ನೀರ್ಣಯವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ. ಇದರ ವಿಚಾರಣೆ ಆಗಸ್ಟ್ 29ಕ್ಕೆ ಮುಂದೂಡಲಾಗಿದೆ. ರಾಜ್ಯಪಾಲರ ನೀರ್ಣವನ್ನು ರಾಜ್ಯ ಸರ್ಕಾರ, ಸಂಪುಟ ಖಂಡಿಸಿದೆ. ಮಸೂದೆ ವಾಪಾಸ್ ಕಳುಹಿಸಿದ್ದಾರೆ. ಇದರಲ್ಲಿ ಆರು ವಾಪಾಸ್ ಬಂದಿದ್ದು, ಮತ್ತೆ ಸರ್ಕಾರದ ಮಟ್ಟದಲ್ಲಿ ಆ ಮಸೂದೆಗಳ ಬಗ್ಗೆ ಚರ್ಚಿಸುತ್ತೇವೆ. ಇದೆಲ್ಲ ಬೆಳವಣಿಗೆ ಬಗ್ಗೆ ಕೇಂದ್ರ ವರಿಷ್ಠರಿಗೆ ತಿಳಿಸಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ.












Click it and Unblock the Notifications