ಬಿಪಿಎಲ್ ಕಾರ್ಡ್ ಅನರ್ಹದ ಕುರಿತು ಬಿಗ್ ಅಪ್‌ಡೇಟ್ ಕೊಟ್ಟ ಸಿಎಂ ಸಿದ್ದರಾಮಯ್ಯ
ಬೆಂಗಳೂರು, ಜೂನ್ 02: ಬಿಪಿಎಲ್ ಕಾರ್ಡ್ ಗಳು ಅನರ್ಹರಿಗೆ ಸಿಗುತ್ತಿರುವ ಬಗ್ಗೆ ಎಚ್ಚರ ವಹಿಸಬೇಕು. ಬಳ್ಳಾರಿ, ಯಾದಗಿರಿ, ಹಾವೇರಿಯಲ್ಲಿ ಶೇಕಡ 90ಕ್ಕಿಂತ ಹೆಚ್ಚಿದೆ.ಅರ್ಹರು ಬಿಟ್ಟು ಹೋಗಬಾರದು, ಅನರ್ಹರು ಸೇರಬಾರದು ಎಂಬ ಎಚ್ಚರಿಕೆ ಸದಾ ಇರಲಿ ಎಂದು ಮುಖ್ಯಮಂತ್ರಿಗಳು ತಿಳಿಸಿದರು.ಅನ್ನಭಾಗ್ಯ ಯೋಜನೆಯಡಿ ನೀಡುವ ಅಕ್ಕಿಯ ದುರುಪಯೋಗಕ್ಕೆ ಬಿಪಿಎಲ್ ಕಾರ್ಡ್ ಗಳು ಶೇ 90ಕ್ಕಿಂತ ಹೆಚ್ಚಾಗಿರುವುದನ್ನು ಪರಿಶೀಲಿಸಬೇಕು. ಮೂರನೇ ಪಕ್ಷದ ಸಂಸ್ಥೆಗಳಿಂದ ಪರಿಶೀಲನೆ ನಡೆಯಬೇಕು ಎಂದು ಸಿದ್ದರಾಮಯ್ಯ ಅವರು ತಿಳಿಸಿದರು.
ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಜೊತೆಗಿನ ಸಭೆಯಲ್ಲಿ ಮಾತನಾಡಿದ ಅವರು, ಅನ್ನಭಾಗ್ಯ ಯೋಜನೆಯಡಿ ನೀಡುವ ಅಕ್ಕಿಯ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಸಾರ್ವಜನಿಕರು ಮಾರುಕಟ್ಟೆಯಲ್ಲಿ ಮಾರಿಕೊಳ್ಳುವ ಬಗ್ಗೆ ದೂರುಗಳು ಬರುತ್ತಿವೆ. ಇದರ ದುರುಪಯೋಗ ತಡೆಯಲು ಪರ್ಯಾಯವಾಗಿ ಬೇಳೆ, ಎಣ್ಣೆ ಕೊಡಬಹುದಾ ಪರಿಶೀಲಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚಿಸಿದರು. ಯುವ ನಿಧಿ ಕಾರ್ಯಕ್ರಮ ದ ಉದ್ದೇಶ ನಿರುದ್ಯೋಗಿಗಳಿಗೆ ಉದ್ಯೋಗ ಸಿಗಬೇಕು ಎನ್ನುವುದು. ಒಬ್ಬ ಪದವೀಧರನಿಗೆ ಗರಿಷ್ಠ ಎರಡು ವರ್ಷಗಳ ಕಾಲ ನಿರುದ್ಯೋಗ ಭತ್ಯೆ ಸಿಗುತ್ತಿದೆ. ಅವರ ಕೌಶಲ್ಯಕ್ಕೆ ತಕ್ಕಂತೆ ತರಬೇತಿ ನೀಡಿ ಉದ್ಯೋಗ ಸಿಗಲು ಅವಕಾಶವಾಗುವಂತೆ ಕ್ರಮ ವಹಿಸಬೇಕು ಎಂದರು.

ಡೈರಿ ಬರೆಯುವುದು ಉತ್ತಮ ಅಭ್ಯಾಸವಾಗಿದ್ದು ಅದನ್ನು ರೂಢಿಸಿಕೊಳ್ಳಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿಸಿ, ಸಿಇಓಗಳಿಗೆ ಕಿವಿಮಾತು ಹೇಳಿದರು. ಹಿಂದೆಲ್ಲ ಡೈರಿ ಬರೆಯುವ ರೂಢಿ ಇತ್ತು. ಎಷ್ಟು ಜನ ಡಿಸಿ, ಸಿಇಓ ಗಳಿಗೆ ಡೈರಿ ಬರೆಯುವ ಅಭ್ಯಾಸ ಇದೆ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶ್ನಿಸಿದರು. ಇನ್ನೂ ರಾಜ್ಯದಲ್ಲಿ ಅರಣ್ಯೀಕರಣಕ್ಕೆ ಲಭ್ಯವಿರುವ ಜಮೀನಿನಲ್ಲಿ ಸಂಪೂರ್ಣ ಸಸಿಗಳನ್ನು ನೆಡಲು ಕ್ರಿಯಾ ಯೋಜನೆ ಸಿದ್ಧಪಡಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚಿಸಿದರು.
ಮಾನವ ಆನೆಗಳ ಸಂಘರ್ಷ ತಡೆಯಲು ಸಾಧ್ಯವಾಗುವಂತೆ ಎಲ್ಲಾ ಕ್ರಮ ಕೈಗೊಳ್ಳಬೇಕು. ಆನೆಗಳು ನಾಡಿಗೆ ಪ್ರವೇಶಿಸಿದಂತೆ ಕಾಡಿನಲ್ಲಿಯೇ ಮೇವಿನ ವ್ಯವಸ್ಥೆ ಕಲ್ಪಿಸಬೇಕು, ಬ್ಯಾರಿಕೇಡ್ ಗಳನ್ನು ಹಾಕಬೇಕು ಎಂದು ಸೂಚಿಸಿದ ಅವರು ಮಾನವ -ಪ್ರಾಣಿಗಳ ಸಂಘರ್ಷ ತಡೆಯಲು ಎಲ್ಲಾ ಸುಧಾರಣಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದರು. ಇನ್ನೂ ಜಿಲ್ಲೆಗಳಲ್ಲಿ ಮಾನವ ಸಂಘರ್ಷ ದಂತಹ ಸಮಸ್ಯೆಗಳು ಇದ್ದಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಮುಖ್ಯ ಕಾರ್ಯದರ್ಶಿಗಳ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿಗಳು ಸೂಚನೆ ನೀಡಿದರು.
ಕೆರೆಗಳ ಅಭಿವೃದ್ಧಿಗೊಳಿಸಿ ಪ್ರವಾಸೋದ್ಯಮ ಚಟುವಟಿಕೆಗಳನ್ನು ಹಮ್ಮಿಕೊಳ್ಳಿ ಸಣ್ಣ ನೀರಾವರಿ ಇಲಾಖೆಯ ಪ್ರಗತಿಯ ಬಗ್ಗೆ ಪರಿಶೀಲಿಸಿದ ಮುಖ್ಯಮಂತ್ರಿಗಳು ಕೆರೆಗಳಲ್ಲಿ ಮೀನು ಸಾಕಣೆ ಮತ್ತು ಹರಾಜು ಪ್ರಕ್ರಿಯೆಯನ್ನು ಇ ಟೆಂಡರ್ ಮೂಲಕ ನಿರ್ವಹಿಸಲು ಸೂಚಿಸಿದರು. ಕೆರೆಗಳ ಅಭಿವೃದ್ಧಿ ಮಾಡಿ ಪ್ರವಾಸೋದ್ಯಮ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು. ಇದು ಆದಾಯದ ಮೂಲವೂ ಆಗುತ್ತದೆ ಎಂದರು.
ಕೈಗಾರಿಕೆಗಳ ಅಭಿವೃದ್ಧಿಗೆ ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಸರಾಗವಾಗಬೇಕು. ರಾಜ್ಯ ಉನ್ನತ ಮಟ್ಟದ ಏಕಗವಾಕ್ಷಿ ಸಮಿತಿಯಲ್ಲಿ 2018-19ರಿಂದ ಇದುವರೆಗೂ ರೂ 500 ಕೋಟಿಗಿಂತ ಹೆಚ್ಚಿನ ಬಂಡವಾಳ ಇರುವ 132 ಯೋಜನೆಗಳಿಗೆ ( ಹೆಚ್ಚುವರಿ ಬಂಡವಾಳ/ವಿಸ್ತರಣಾ ಯೋಜನೆಗಳು ಸೇರಿ) ಅನುಮೋದನೆ ನೀಡಿದ್ದು 4,40,819.75ಕೋಟಿ ಬಂಡವಾಳ ಹೂಡಿಕೆ ಹಾಗೂ ಅಂದಾಜು 359091 ಜನರಿಗೆ ಉದ್ಯೋಗ ನಿರೀಕ್ಷಿಸಲಾಗಿದೆ ಎಂದರು.
ಇದರಲ್ಲಿ 51 ಯೋಜನೆಗಳು ಅನುಷ್ಠಾನಗೊಂಡಿದ್ದು ರೂ. 83,380.85 ಕೋಟಿ ಬಂಡವಾಳ ಹೂಡಿಕೆಯಾಗಿದ್ದು ಸುಮಾರು 109133 ಜನರಿಗೆ ಉದ್ಯೋಗ ನೀಡಲಾಗಿದೆ. ಕೈಗಾರಿಕೆಗಳ ಅಭಿವೃದ್ಧಿಗೆ ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಸಮಸ್ಯೆಗಳು ಆಗದಂತೆ ನೋಡಿಕೊಳ್ಳಬೇಕು. ಇ-ಖಾತಾ ಸಮಸ್ಯೆಗಳೂ ಆಗಬಾರದು ಎಂದು ಸೂಚಿಸಿದರು. ಜಿಲ್ಲೆಯ ಪ್ರವಾಸೋದ್ಯಮ ತಾಣಗಳ ಅಭಿವೃದ್ಧಿಗೆ ಒತ್ತು ನೀಡಬೇಕು. ಎಲ್ಲಾ ಜಿಲ್ಲೆಗಳಲ್ಲೂ ಪ್ರವಾಸಿ ಯೋಗ್ಯ ಸ್ಥಳಗಳು ಇದ್ದೇ ಇರುತ್ತದೆ. ಪ್ರವಾಸಿ ತಾಣಗಳಿಗೆ ಸಂಬಂಧಿಸಿದಂತೆ ಪ್ರಸ್ತಾವನೆಗಳು ಇದ್ದಲ್ಲಿ ಶೀಘ್ರ ಸರ್ಕಾರಕ್ಕೆ ಕಳಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚನೆ ನೀಡಿದರು.












Click it and Unblock the Notifications