ಬೆಂಗಳೂರಿನ 3 ಲೋಕಸಭಾ ಕ್ಷೇತ್ರಗಳಲ್ಲಿಂದು ಸಿಎಂ ಪ್ರಚಾರ: ಮಲ್ಲೇಶ್ವರಂನಲ್ಲಿ ಭರ್ಜರಿ ರೋಡ್ ಶೋ
ಬೆಂಗಳೂರು ಏಪ್ರಿಲ್ 7: ಬೆಂಗಳೂರಿನ ಮೂರು ಲೋಕಸಭಾ ಕ್ಷೇತ್ರಗಳಲ್ಲಿಂದು ಸಿಎಂ ಸಿದ್ದರಾಮಯ್ಯ ಪ್ರಚಾರ ಮಾಡಲಿದ್ದಾರೆ. ಮಲ್ಲೇಶ್ವರಂನಲ್ಲಿ ಭರ್ಜರಿ ರೋಡ್ ಶೋ ಕೂಡ ನಡೆಯಲಿದೆ.
ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಮತಭೇಟಿ ಶುರು ಮಾಡಿದೆ. ಕಳೆದ ದಿನ ಕೋಲಾರದಿಂದ ಮತಪ್ರಚಾರ ನಡೆಸಿದ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಇಂದು ಬೆಂಗಳೂರಿನ ಮೂರು ಕ್ಷೇತ್ರಗಳಲ್ಲಿ ಪ್ರಚಾರ ಮಾಡಲಿದ್ದಾರೆ. ಬೆಳಗ್ಗೆ 11 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಪ್ರಚಾರ ನಡೆಯಲಿದೆ.

ಇಂದು ಮಧ್ಯಾಹ್ನ ಒಂದು ಗಂಟೆಗೆ ಮಲ್ಲೇಶ್ವರಂನಲ್ಲಿ ಬೃಹತ್ ರೋಡ್ ಶೋ ಕೂಡ ಹಮ್ಮಿಕೊಳ್ಳಲಾಗಿದೆ. ಇಂದು ಮತ್ತು ನಾಳೆ ಎರಡು ದಿನಗಳ ಕಾಲ ಬೆಂಗಳೂರಿನಲ್ಲಿಯೇ ಸಿಎಂ ಸಿದ್ದರಾಮಯ್ಯ ಅವರು ಚುನಾವಣಾ ಪೂರಕವಾಗಿ ಕಾರ್ಯಕರ್ತರ ಸಭೆ ಮತ್ತು ಪ್ರಚಾರ ನಡೆಸಲಿದ್ದಾರೆ. ಬೆಂಗಳೂರು ಉತ್ತರ, ದಕ್ಷಿಣ ಲೋಕಸಭಾ ಕ್ಷೇತ್ರಗಳಲ್ಲಿ ಮತಭೇಟೆ ನಡೆಯಲಿದೆ.
ಇನ್ನೂ ದಾಸರಹಳ್ಳಿ, ಬ್ಯಾಟರಾಯನಪುರ, ಮಲ್ಲೇಶ್ವರಂ, ಪದ್ಮನಾಭನಗರ, ಬೊಮ್ಮನಹಳ್ಳಿ, ಮಹಾಲಕ್ಷ್ಮಿ ಲೇಔಟ್ ಕ್ಷೇತ್ರಗಳಲ್ಲಿ ಮತಭೇಟೆ ನಡೆಯಲಿದೆ. ಜೊತೆಗೆ ನಾಳೆ ಜಯನಗರ, ಚಿಕ್ಕಪೇಟೆ, ಬಿಟಿಎಂ ಲೇಔಟ್, ರಾಜಾಜಿನಗರ, ಸಿವಿ ರಾಮನ್ ನಗರ ಮತ್ತು ಗಾಂಧಿನಗರ ಕ್ಷೇತ್ರದ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದಾರೆ.
ಮೈಸೂರಿನಲ್ಲೂ ಸಿಎಂ ಪ್ರಚಾರ
ಬೆಂಗಳೂರು ಬಳಿಕ ಸಿಎಂ ಸಿದ್ದರಾಮಯ್ಯ ಮೈಸೂರಿನಲ್ಲಿ ಪ್ರಚಾರ ಆರಂಭಿಸಲಿದ್ದಾರೆ. ಮೈಸೂರು-ಕೊಡುಗು ಹಾಗೂ ಚಾಮರಾಜನಗರ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನ ಗೆಲ್ಲಿಸಲು ಸಿಎಂ (CM Siddaramaiah) ಪಣ ತೊಟ್ಟಿದ್ದಾರೆ. ಹೀಗಾಗಿ ಮತ್ತೆ ಏಪ್ರಿಲ್ 11 ಹಾಗೂ 12ರಂದು ಮೈಸೂರು ಹಾಗೂ ಚಾಮನರಾಜನಗರ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಎರಡು ದಿನಗಳ ಕ್ಷೇತ್ರದಲ್ಲೇ ಉಳಿದು ಕಾಂಗ್ರೆಸ್ ಅಭ್ಯರ್ಥಿಗಳ ಪರ ಭರ್ಜರಿ ಪ್ರಚಾರ ಮಾಡಲಿದ್ದಾರೆ. ಕಳೆದ ವಾರವಷ್ಟೇ ಸಿಎಂ ಸಿದ್ದರಾಮಯ್ಯ ಮೈಸೂರಿಗೆ ಭೇಟಿ ನೀಡಿ 3 ದಿನ ಮತಬೇಟೆ ನಡೆಸಿದರು. ಕೆಲ ಮೈತ್ರಿ ಪಕ್ಷದ ನಾಯಕರನ್ನ ಕಾಂಗ್ರೆಸ್‌ಗೆ ಸೆಳೆದಿದ್ದಾರೆ.
ಮೈಸೂರು, ಚಾಮರಾಜನಗರ ಲೋಕಸಭಾ ಕ್ಷೇತ್ರ ಗೆಲ್ಲಲೇ ಬೇಕಾದ ಒತ್ತಡದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಇದ್ದು, ಈ ಹಿನ್ನೆಲೆಯಲ್ಲಿ ಮತ್ತೆ ಎರಡು ದಿನಗಳ ಕಾಲ ಮೈಸೂರು ಚಾಮರಾಜನಗರ ಪ್ರವಾಸ ಕೈಗೊಂಡಿದ್ದಾರೆ. ಚುನಾವಣೆ ಘೋಷಣೆಯಾದ ನಂತರ ಈಗಾಗಲೇ 7 ದಿನಗಳ ಕಾಲ ಸಿದ್ದರಾಮಯ್ಯ ಮೈಸೂರು ಭಾಗದಲ್ಲಿ ಉಳಿದುಕೊಂಡಿದ್ದರು. ಮಾರ್ಚ್ 24 ರಿಂದ 27ರ ವರೆಗೆ 4 ದಿನ ಚುನಾವಣೆ ತಂತ್ರಗಾರಿಕೆ ನಡೆಸಿದ್ದರು. ಸದ್ಯ ಎರಡನೇ ಬಾರಿ ಏಪ್ರಿಲ್ 11 ರಿಂದ ಮೂರು ದಿನಗಳ ಕಾಲ ಮೈಸೂರು ಚಾಮರಾಜನಗರ ಪ್ರವಾಸ ಕೈಗೊಳ್ಳಲಿದ್ದಾರೆ.












Click it and Unblock the Notifications