ಕಾವೇರಿ ವಿವಾದ: ಹೆಚ್‌ಡಿ ದೇವೇಗೌಡರ ನಡೆ ಸ್ವಾಗತಿಸಿದ ಸಿಎಂ ಸಿದ್ದರಾಮಯ್ಯ
ಕಾವೇರಿ ನೀರು ಹಂಚಿಕೆ ವಿವಾದ ದಿನದಿಂದ ದಿನಕ್ಕೆ ಹೆಚ್ಚು ತೀವ್ರವಾಗುತ್ತಿದೆ. ತಮಿಳುನಾಡಿಗೆ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಕಾವೇರಿ ಜಲಾನಯಕ ಪ್ರದೇಶದ ರೈತರು, ಸಂಘ ಸಂಸ್ಥೆಗಳು, ಕನ್ನಡ ಪರ ಸಂಘಟನೆಗಳು, ವಿರೋಧ ಪಕ್ಷಗಳು ಮುಗಿಬಿದ್ದಿವೆ. ಸೆಪ್ಟೆಂಬರ್ 26 ರಂದು ಬೆಂಗಳೂರು ಬಂದ್‌ಗೆ ಕರೆ ಕೊಟ್ಟಿದ್ದರೆ ಸೆಪ್ಟೆಂಬರ್ 29ರಂದು ಕರ್ನಾಟಕ ಬಂದ್ ಮಾಡಲು ನಿರ್ಧರಿಸಲಾಗಿದೆ.
ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಕಾವೇರಿ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಪರಿಹರಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ದೇವೇಗೌಡರು ಪತ್ರ ಬರೆದಿರುವ ಕ್ರಮವನ್ನು ಸಿಎಂ ಸಿದ್ದರಾಮಯ್ಯ ಅವರು ಸ್ವಾಗತಿಸಿದ್ದು, ಮೋದಿ ಮಧ್ಯ ಪ್ರವೇಶಕ್ಕೆ ಆಗ್ರಹಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, "ಕಾವೇರಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ನಾಡಿಗೆ ಎದುರಾಗಿರುವ ಸಂಕಷ್ಟ ನಿವಾರಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಸ್ಥಿಕೆ ವಹಿಸುವಂತೆ ಕೋರಿ ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡ ಅವರು ಪತ್ರ ಬರೆದಿರುವುದನ್ನು ನಾನು ಸ್ವಾಗತಿಸುತ್ತೇನೆ." ಎಂದು ಹೇಳಿದ್ದಾರೆ.
ಸಂಸದರು ಒತ್ತಡ ಹೇರಲಿ
ಪ್ರಸ್ತುತ ಸಂದರ್ಭದಲ್ಲಿ ನಾಡಿಗೆ ಆಗುತ್ತಿರುವ ಅನ್ಯಾಯವನ್ನು ತಪ್ಪಿಸಲು ಮೋದಿ ಅವರು ಮಧ್ಯಸ್ಥಿಕೆ ವಹಿಸಿ ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸುವುದೊಂದೇ ಪರಿಣಾಮಕಾರಿ ಮತ್ತು ಈ ಸಂದರ್ಭಕ್ಕನುಗುಣವಾದ ಪರಿಹಾರವಾಗಿದೆ. ಪ್ರಧಾನಿ ಮೋದಿ ಅವರು ಮಾಜಿ ಪ್ರಧಾನಿಗಳಾದ ದೇವೇಗೌಡರ ಮನವಿಯನ್ನು ಪುರಸ್ಕರಿಸಿ, ಕೂಡಲೇ ಮಾತುಕತೆಗೆ ಆಹ್ವಾನಿಸುತ್ತಾರೆಂದು ನಂಬಿದ್ದೇನೆ ಎಂದು ಸಿದ್ದರಾಮಯ್ಯ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಕಾವೇರಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ನಾಡಿಗೆ ಎದುರಾಗಿರುವ ಸಂಕಷ್ಟ ನಿವಾರಿಸಲು ಪ್ರಧಾನಿ @narendramodi ಅವರು ಮಧ್ಯಸ್ಥಿಕೆ ವಹಿಸುವಂತೆ ಕೋರಿ ಮಾಜಿ ಪ್ರಧಾನಿ @H_D_Devegowda ಅವರು ಪತ್ರ ಬರೆದಿರುವುದನ್ನು ನಾನು ಸ್ವಾಗತಿಸುತ್ತೇನೆ.
— CM of Karnataka (@CMofKarnataka) September 25, 2023
ಪ್ರಸ್ತುತ ಸಂದರ್ಭದಲ್ಲಿ ನಾಡಿಗೆ ಆಗುತ್ತಿರುವ ಅನ್ಯಾಯವನ್ನು ತಪ್ಪಿಸಲು ಮೋದಿ ಅವರು ಮಧ್ಯಸ್ಥಿಕೆ… https://t.co/paJrXOtxQ3
ಜೆಡಿಎಸ್ ಪಕ್ಷದ ಹಿರಿಯ ನಾಯಕರಾದ ಹೆಚ್.ಡಿ.ದೇವೇಗೌಡರ ಈ ನಿರ್ಧಾರದಿಂದಾದರೂ ಪ್ರೇರಣೆ ಪಡೆದು ರಾಜ್ಯ ಬಿಜೆಪಿ ನಾಯಕರು ಮತ್ತು ಆ ಪಕ್ಷದ ಸಂಸದರು ಸೇರಿ ಪ್ರಧಾನಮಂತ್ರಿ ಮಧ್ಯಪ್ರವೇಶಕ್ಕೆ ಒತ್ತಡ ಹೇರಬೇಕು. ಅತೀ ಶೀಘ್ರದಲ್ಲಿ ರಾಜ್ಯದ ಸರ್ವಪಕ್ಷಗಳ ನಾಯಕರ ನಿಯೋಗವನ್ನು ನರೇಂದ್ರ ಮೋದಿ ಭೇಟಿಮಾಡುವಂತೆ ಮಾಡಬೇಕು ಎಂದು ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.
ನೆಲ-ಜಲ-ಭಾಷೆಯ ಹಿತಾಸಕ್ತಿಯ ರಕ್ಷಣೆಯ ವಿಚಾರದಲ್ಲಿ ರಾಜ್ಯದ ರಾಜಕೀಯ ಪಕ್ಷಗಳು ತಮ್ಮ ಭಿನ್ನಮತಗಳನ್ನು ಮರೆತು ಒಟ್ಟಾಗಿ ಸಮಸ್ಯೆಯ ಪರಿಹಾರಕ್ಕಾಗಿ ಪ್ರಯತ್ನ ಪಟ್ಟಿರುವ ಇತಿಹಾಸ ಕರ್ನಾಟಕ ರಾಜ್ಯಕ್ಕೆ ಇದೆ. ಈ ಪರಂಪರೆಯನ್ನು ಜೆಡಿಎಸ್ ಪಕ್ಷದಂತೆ ಬಿಜೆಪಿ ಕೂಡಾ ಪಾಲಿಸಿಕೊಂಡು ಬರುತ್ತದೆ ಎಂದು ನಾನು ನಂಬಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ದೇವೇಗೌಡರು ಹೇಳಿದ್ದೇನು?
ಕೃಷ್ಣರಾಜಸಾಗರ ಜಲಾಶಯದಿಂದ ತಮಿಳುನಾಡಿಗೆ ಕಾವೇರಿ ನೀರು ಬಿಡುವ ವಿಚಾರದಲ್ಲಿ ಕರ್ನಾಟಕ ಮತ್ತು ತಮಿಳುನಾಡು ನಡುವೆ ನಡೆಯುತ್ತಿರುವ ವಿವಾದಗಳು ಮತ್ತು ಭಿನ್ನಾಭಿಪ್ರಾಯಗಳನ್ನು ಪರಿಹರಿಸಲು ಮಧ್ಯಸ್ಥಿಕೆ ವಹಿಸುವಂತೆ ಕೋರಿ ಮಾನ್ಯ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದೇನೆ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಟ್ವೀಟ್ ಮಾಡಿದ್ದರು.












Click it and Unblock the Notifications