ಕುವೈತ್ ಅಗ್ನಿ ಅವಘಡದಲ್ಲಿ ಮೃತಪಟ್ಟ ಕಲಬುರಗಿಯ ವಿಜಯಕುಮಾರ್ ಕುಟುಂಬಕ್ಕೆ ಪರಿಹಾರ ಘೋಷಿಸಿದ ರಾಜ್ಯ ಸರ್ಕಾರ
ಬೆಂಗಳೂರು, ಜೂನ್. 18: ಇತ್ತೀಚೆಗೆ ಕುವೈತ್‌ನ ಅಗ್ನಿ ಅವಘಡದಲ್ಲಿ ರಾಜ್ಯದ ಕಲಬುರಗಿ ಜಿಲ್ಲೆಯ ವಿಜಯಕುಮಾರ್ ಮೃತಪಟ್ಟಿದ್ದರು. ವಿಜಯಕುಮಾರ್ ಕುಟುಂಬಕ್ಕೆ ಕರ್ನಾಟಕ ಸರ್ಕಾರದಿಂದ ರೂ.5 ಲಕ್ಷಗಳ ಆರ್ಥಿಕ ಪರಿಹಾರ ಘೋಷಣೆ ಮಾಡಲಾಗಿದೆ. ಈ ಬಗ್ಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಇದೇ ತಿಂಗಳ 12 ರಂದು ಕುವೈತ್‌ನ ಮಾಂಗಾಫ್‌ನಲ್ಲಿರುವ ವಸತಿ ಸಮುಚ್ಚಯದಲ್ಲಿ ಸಂಭವಿಸಿದ ಆಕಸ್ಮಿಕ ಅಗ್ನಿ ದುರಂತದಲ್ಲಿ ಮೃತಪಟ್ಟ ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಸರಸಂಬ ಗ್ರಾಮದ ವಿಜಯಕುಮಾರ್ ಅವರ ಕುಟುಂಬಕ್ಕೆ ರಾಜ್ಯ ಸರ್ಕಾರದ ವತಿಯಿಂದ ರೂ. 5 ಲಕ್ಷ ಪರಿಹಾರ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅನುಮೋದನೆ ನೀಡಿದ್ದಾರೆ.

ದಿನಾಂಕ 12/06/2024ರಂದು ಕುವೈತ್‌ನ ಮಾಂಗಾಫ್‌ನಲ್ಲಿರುವ ವಸತಿ ಸಮುಚ್ಚಯವೊಂದರಲ್ಲಿ ಆಕಸ್ಮಿಕವಾಗಿ ನಡೆದ ಅಗ್ನಿ ದುರಂತದಲ್ಲಿ ಸುಮಾರು 45 ಭಾರತೀಯ ಪ್ರಜೆಗಳು ಸಾವನ್ನಪ್ಪಿದ್ದಾರೆ. ಹಲವರು ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆಯನ್ನು ಅಲ್ಲಿನ ಆಸ್ಪತ್ರೆಗಳಲ್ಲಿ ಪಡೆಯುತ್ತಿದ್ದಾರೆ.
ಈ ಅಗ್ನಿ ದುರಂತದಲ್ಲಿ ಪ್ರಾಣ ಕಳಕೊಂಡವರ ಪೈಕಿ ಕೇರಳ ರಾಜ್ಯದವರೇ ಹೆಚ್ಚಿನವರಾಗಿದ್ದು, ಕಲ್ಯಾಣ ಕರ್ನಾಟಕದ ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಸರಸಂಬ ಗ್ರಾಮದ 40 ವರ್ಷ ವಯಸ್ಸಿನ ವಿಜಯಕುಮಾರ್ ಸಹ ಒಬ್ಬರಾಗಿದ್ದರು. ಇವರು ವಾಹನ ಚಾಲಕರಾಗಿ ಕುವೈತ್‌ನಲ್ಲಿ ಸುಮಾರು 8 ವರ್ಷಗಳಿಂದ ನೆಲೆಸಿದ್ದರು. ಇವರನ್ನು ಅವಲಂಬಿಸಿ ಕುಟುಂಬದಲ್ಲಿ 8 ಸದಸ್ಯರಿದ್ದಾರೆ.

ವಿಜಯಕುಮಾರ್ ಮೃತ ದೇಹವನ್ನು ಕುವೈತ್ ನಿಂದ ಭಾರತಕ್ಕೆ ತರುವ ಸಂದರ್ಭದಲ್ಲಿ ಕರ್ನಾಟಕ ಸರ್ಕಾರದ ಅನಿವಾಸಿ ಭಾರತೀಯ ಸಮಿತಿಯು ಭಾರತ ಸರ್ಕಾರದೊಂದಿಗೆ ಹಾಗೂ ಕುವೈತ್ ನ ರಾಯಭಾರಿ ಕಚೇರಿಯೊಂದಿಗೆ ನಿಕಟ ಸಂಪರ್ಕದಲ್ಲಿತ್ತು. ತದನಂತರ ಮೃತದೇಹವನ್ನು ಕೊಚ್ಚಿಯಿಂದ ಹೈದರಾಬಾದ್ ಮೂಲಕ ಮೃತರ ಸ್ವಗ್ರಾಮಕ್ಕೆ ತಲುಪಿಸುವಲ್ಲಿ ಸರ್ಕಾರದ ಅನೇಕ ಅಧಿಕಾರಿ ಸಿಬ್ಬಂದಿ ಕಾರ್ಯನಿರ್ವಹಿಸಿರುತ್ತಾರೆ. ನಂತರ ಮೃತ ದೇಹವನ್ನು ಕುಟುಂಬಸ್ಮರಿಗೆ ಹಸ್ತಾಂತರಿಸಲಾಗಿದೆ.
ಈಗಾಗಲೇ ಕೇರಳ ರಾಜ್ಯ ಸರ್ಕಾರವು ಸದರಿ ಅಗ್ನಿ ದುರಂತದಲ್ಲಿ ಸತ್ತವರ ಕುಟುಂಬದ ಅವಲಂಬಿತ ಸದಸ್ಯರಿಗೆ ರೂ.5 ಲಕ್ಷಗಳ ಆರ್ಥಿಕ ಪರಿಹಾರ ಘೋಷಿಸಿದೆ. ಮುಂದುವರೆದು ಕರ್ನಾಟಕದ ಅನಿವಾಸಿ ಭಾರತೀಯ ಸಮಿತಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಕರ್ನಾಟಕ ರಾಜ್ಯ ಸರ್ಕಾರವು ಸಹ ಮೃತ ವಿಜಯಕುಮಾರ್ ಕುಟುಂಬಕ್ಕೆ ಗರಿಷ್ಠ ಮಟ್ಟದ ಆರ್ಥಿಕ ನೆರವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಪಾವತಿಸುವಂತೆ ಮನವಿ ಮಾಡಲಾಗಿತ್ತು. ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು ಸದರಿ ಅವಲಂಬಿತ ಕುಟುಂಬದವರಿಗೆ ಐದು ಲಕ್ಷಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ನೀಡುವಂತೆ ಅನುಮೋದಿಸಿರುತ್ತಾರೆ.












Click it and Unblock the Notifications