ರಾಯಣ್ಣ ಪ್ರತಿಮೆ ಧ್ವಂಸ ಮಾಡಿದ ಪುಂಡರನ್ನು ಸದೆಬಡಿಯಲಾಗುವುದು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಬೆಳಗಾವಿ, ಡಿ.18: ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಧ್ವಂಸ ಮಾಡಿದ, ಗಲಭೆ ನಡೆಸಿದ ಪುಂಡರನ್ನು ಸೆದೆಬಡಿಯಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಚ್ಚರಿಕೆ ನೀಡಿದ್ದಾರೆ.
ಹುಬ್ಬಳ್ಳಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ನಿನ್ನೆ ರಾತ್ರಿ ಬೆಳಗಾವಿಯಲ್ಲಿ ನಡೆದ ಪುಂಡಾಟಿಕೆಯನ್ನು ಸಂಪೂರ್ಣವಾಗಿ ಖಂಡಿಸುತ್ತೇನೆ. ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಗೃಹ ಸಚಿವರಿಗೆ ಸೂಚನೆ ಕೊಟ್ಟಿದ್ದೇನೆ. ಅವರೂ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಈಗಾಗಲೇ ಕೆಲವರ ಬಂಧನ ಆಗಿದೆ. ಇನ್ನಷ್ಟು ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ' ಎಂದು ಹೇಳಿದರು.
ಈ ರೀತಿ ಸಣ್ಣ ಪುಟ್ಟ ವಿಚಾರಕ್ಕೆ ಗಲಾಟೆ, ಕಲ್ಲು ತೂರಾಟ, ಸಾರ್ವಜನಿಕ ಆಸ್ತಿ ಪಾಸ್ತಿ, ಸರ್ಕಾರಿ ವಾಹನಗಳ ಮೇಲೆ ಕಲ್ಲು ತೂರಾಟ ಮಾಡ ಕಾನೂನು ಬಾಹಿರ ಚಟುವಟಿಕೆ ಮಾಡಬಾರದು. ಪೊಲೀಸರು ಈ ಸಂಬಂಧ ದೀರ್ಘಾವಧಿ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ.
Koo Appಬೆಳಗಾವಿಯಲ್ಲಿ ತಡರಾತ್ರಿ ವಿವಿಧ ಸಂಘಟನೆಗಳ ಪ್ರತಿಭಟನೆ ಸಂದರ್ಭದಲ್ಲಿ ಕಿಡಿಗೇಡಿಗಳು ಕಲ್ಲು ತೂರಾಟ, ಪುಂಡಾಟಿಕೆ ನಡೆಸಿರುವುದು ಖಂಡನೀಯ. ದುಷ್ಕರ್ಮಿಗಳ ವಿರುದ್ಧ ಪೊಲೀಸರು ಕ್ರಮ ತೆಗೆದುಕೊಳ್ಳಬೇಕು. ಪ್ರಚೋದನೆ, ಪುಂಡಾಟಿಕೆಗೆ ಅವಕಾಶ ನೀಡದೆ, ಕಾನೂನು ಸುವ್ಯವಸ್ಥೆ ಕಾಪಾಡಲು ಸರ್ಕಾರ ಎಲ್ಲ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತೇನೆ. - BS Yediyurappa (@bsybjp) 18 Dec 2021
ರಾಷ್ಟ್ರಭಕ್ತರ ಪ್ರತಿಮೆ ಭಗ್ನಗೊಳಿಸುವುದು ಒಳ್ಳೆಯ ಕೆಲಸ ಅಲ್ಲ. ನಾಡಿಗಾಗಿ ತ್ಯಾಗ ಮಾಡಿದ ದೇಶಭಕ್ತರನ್ನು ಸ್ಮರಿಸಲು, ಅವರ ಗೌರವ ಉಳಿಸಲು ಪ್ರತಿಮೆಯನ್ನು ನಿರ್ಮಾಣ ಮಾಡಲಾಗುತ್ತದೆ. ಇಂತಹ ಪ್ರತಿಮೆಗಳನ್ನು ವಿರೂಪಗೊಳಿಸಿ ಸಮಾಜದಲ್ಲಿ ಕ್ಷೋಭೆ ಉಂಟು ಮಾಡುವುದು ಸರಿಯಲ್ಲ. ಕೆಲವೇ ಕೆಲವು ಪುಂಡರು ಇಂತಹ ಕೆಲಸ ಮಾಡುತ್ತಿದ್ದಾರೆ. ಅವರನ್ನು ನಿಯಂತ್ರಣ ಮಾಡಲಾಗುವುದು ಎಂದು ಹೇಳಿದರು.
|
ಬೆಳಗಾವಿಯಲ್ಲಿ ಭಯೋತ್ಪಾದನೆ ಶಕ್ತಿಗಳನ್ನು ಮೂಲೋತ್ಪಾಟನೆ ಮಾಡಿ:
ಬೆಳಗಾವಿಯಲ್ಲಿ ತಡರಾತ್ರಿ ಪುಂಡರು ನಡೆಸಿರುವ ದಾಂಧಲೆಯನ್ನು ಕಟು ಶಬ್ದಗಳಲ್ಲಿ ಖಂಡಿನೀಯ. ಬೆಳಗಾವಿಯಲ್ಲಿ ನಡೆಯುತ್ತಿರುವ ಇಂಥ ಭಯೋತ್ಪಾದನೆಯನ್ನು ಕೊನೆಗಾಣಿಸಬೇಕಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸರಕಾರವನ್ನು ಒತ್ತಾಯ ಮಾಡಿದ್ದಾರೆ.
ಘಟನೆ ವಿಷಯ ತಿಳಿಯುತ್ತಿದ್ದಂತೆ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿರುವ ಕುಮಾರಸ್ವಾಮಿ ಅವರು; ಪುಂಡರ ಹೆಡೆಮುರಿ ಕಟ್ಟಿ ತಕ್ಕ ಶಾಸ್ತಿ ಮಾಡಬೇಕು. ಮತ್ತೆ ಇಂಥ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.
ಬೆಳಗಾವಿಯಲ್ಲಿ ತಡರಾತ್ರಿ ಪುಂಡರು ಪೊಲೀಸ್ ವಾಹನಗಳಿಗೆ ಹಾನಿ ಮಾಡಿ ಬೆಂಕಿ ಹಚ್ಚಿರುವುದು ಅಕ್ಷಮ್ಯ. ವಿಧಾನಮಂಡಲ ಅಧಿವೇಶನಕ್ಕೆ ಹೋಗಲು ಪಾಸ್ ಅಂಟಿಸಲಾಗಿದ್ದ ವಾಹನಗಳನ್ನೇ ಗುರಿ ಮಾಡಲಾಗಿದೆ. ಕನ್ನಡಿಗರ ಹೆಮ್ಮೆಯಾದ ಸಂಗೊಳ್ಳಿ ರಾಯಣ್ಣರ ಪ್ರತಿಮೆ ಹಾಳು ಮಾಡಿರುವುದು ಕ್ಷಮಾರ್ಹವಲ್ಲದ ಅಪರಾಧ ಹಾಗೂ ಖಂಡನೀಯ. ಬೆಳಗಾವಿಯಲ್ಲಿ ಪ್ರಕ್ಷುಬ್ಧತೆ ಸೃಷ್ಟಿಸಿ ಭಾಷಾ ವೈಷಮ್ಯವನ್ನು ಹೆಚ್ಚಿಸುವುದು ದುರುಳರ ಉದ್ದೇಶವಿದ್ದಂತಿದೆ. ಶಾಂತಿಯನ್ನು ಕದಡಿ ಜನರಲ್ಲಿ ಭಯಭೀತಿ ಉಂಟು ಮಾಡಲು ಪುಂಡರನ್ನು ಪ್ರಚೋದಿಸಿದವರನ್ನು ಹೊರಗೆಳೆದು ಶಿಕ್ಷಿಸಬೇಕು. ಈ ಪುಂಡಾಟದ ಹಿಂದೆ ದೊಡ್ಡ ಹುನ್ನಾರ ಇರುವಂತಿದೆ ಎಂದು ಹೇಳಿದ್ದಾರೆ
ಬೆಳಗಾವಿ ವಿವಾದ ಮುಗಿದ ಅಧ್ಯಾಯ. ಆದಾಗ್ಯೂ ಕೆಲ ವಿಚ್ಛಿಧ್ರಕಾರಿ ಶಕ್ತಿಗಳು ಆ ಭಾಗದಲ್ಲಿ ಅಶಾಂತಿ ಸೃಷ್ಟಿಸುತ್ತ ಕನ್ನಡಿಗರು-ಮರಾಠಿಗರ ನಡುವೆ ವೈಷಮ್ಯಕ್ಕೆ ಕಾರಣವಾಗುತ್ತಿದ್ದಾರೆ. ಅಂಥ ಶಕ್ತಿಗಳನ್ನು ಸರಕಾರ ಮೂಲೋತ್ಪಾಟನೆ ಮಾಡಬೇಕು. ಪುಂಡರನ್ನು ಕೂಡಲೇ ಬೇಟೆಯಾಡಿ ಇನ್ನೆಂದೂ ಅಂಥ ತಪ್ಪು ಮಾಡದಂತೆ ತಕ್ಕಶಾಸ್ತಿ ಮಾಡಬೇಕು. ಸರಕಾರಿ ಕಾರುಗಳನ್ನು ಗುರಿ ಮಾಡಿರುವುದು ರಾಜ್ಯ ಸರಕಾರವನ್ನೇ ಗುರಿ ಮಾಡಿದಂತೆ. ಸಂಗೊಳ್ಳಿ ರಾಯಣ್ಣ ಪ್ರತಿಮೆ ಮೇಲೆ ದಾಳಿ ಮಾಡಿರುವುದು ಕನ್ನಡಿಗರ ಮೇಲೆ, ಕರ್ನಾಟಕದ ಮೇಲೆ ದಾಳಿಗೆ ಸಮ. ಸರಕಾರ ಈ ಘಟನೆಯನ್ನು ಲಘುವಾಗಿ ಪರಿಗಣಿಸಬಾರದು. ಕೂಡಲೇ ಆ ದುರುಳರಿಗೆ ಕನ್ನಡಿಗರ ಶಕ್ತಿ ಏನೆಂಬುದನ್ನು ತೋರಿಸಬೇಕು. ಬೆಳಗಾವಿಯಲ್ಲಿ ಭಯೋತ್ಪಾದನೆ ಸೃಷ್ಟಿಸುತ್ತಿರುವ ಈ ದುಷ್ಟಶಕ್ತಿಗಳಿಗೆ ಕನ್ನಡಿಗರು ಹೆದರುವುದಿಲ್ಲ. ಕನ್ನಡಿಗರ ಶಕ್ತಿ ಏನೆಂದು ತೋರಿಸುವ ಕಾಲ ಈಗ ಬಂದಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದ್ದಾರೆ.
ಡಿ.ಕೆ. ಶಿವಕುಮಾರ್ ಖಂಡನೆ
ಅನಗೊಳದಲ್ಲಿ ಸ್ವಾತಂತ್ರ್ಯ ವೀರ ಸೇನಾನಿ ಸಂಗೊಳ್ಳಿ ರಾಯಣ್ಣನವರ ಪ್ರತಿಮೆಗೆ ಭಗ್ನ ಸೇರಿದಂತೆ ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟಿಕೆಯನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಉಗ್ರವಾಗಿ ಖಂಡಿಸಿದ್ದಾರೆ.
ಎಂಇಎಸ್ ನ ಕನ್ನಡದ್ರೋಹಿ, ನಾಡದ್ರೋಹಿ ಕೃತ್ಯವನ್ನು ಕಾಂಗ್ರೆಸ್ ಎಂದಿಗೂ ಸಹಿಸುವುದಿಲ್ಲ ಎಂದು ಅವರು ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
|
ಸಿದ್ದರಾಮಯ್ಯ ಖಂಡನೆ:
ಬೆಳಗಾವಿಯಲ್ಲಿರುವ ಕರ್ನಾಟಕದ ಅಭಿನವ ಮೂರ್ತಿ ವೀರಸಂಗೊಳ್ಳಿ ರಾಯಣ್ಣನ ಪ್ರತಿಮೆ ಕೆಡವಿ, ವಿರೂಪಗೊಳಿಸಿದ ಎಂಇಎಸ್ ಪುಂಡರ ಕಿಡಿಗೇಡಿ ಕೇತ್ಯ ಖಂಡನೀಯ. ಅವರನ್ನು ತಕ್ಷಣ ಬಂಧಿಸಿ ಜೈಲಿಗಟ್ಟುವಂತೆ
ಮುಖ್ಯಮಂತ್ರಿಗಳು ಪೊಲೀಸರಿಗೆ ಸೂಚನೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸಿದ್ದರಾಮಯ್ಯ, @CM0Karnataka ಅವರೇ 'ಕ್ರಿಯೆಗೆ ಪ್ರತಿಕ್ರಿಯೆ' ಎಂಬ ಮೊಂಡುವಾದ ಮಂಡಿಸಬೇಡಿ. ಕಾನೂನಿನ ಕ್ರಮ ಇಂತಹ ಪುಂಡರಿಗೆ ಕಠಿಣ ಸಂದೇಶವಾಗಲಿ. ಇದೇ ವೇಳೆ ಕನ್ನಡ ಬಂಧುಗಳು ಆವೇಶಕ್ಕೆ ಒಳಗಾಗದೆ, ಸಂಯಮದಿಂದ ಶಾಂತಿ- ಸೌಹಾರ್ದತೆ ಕಾಪಾಡಿಕೊಂಡು ಬರಬೇಕು ಎಂದು ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

ಸಂಸದರು ಏನು ಮಾಡುತ್ತಿದ್ದಾರೆ?
ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಧ್ವಂಸ ಮಾಡಿರುವ ಘಟನೆ ಖಂಡನೀಯ. ರಾಜ್ಯದಲ್ಲಿ ಬಿಜೆಪಿಯ 25 ಸಂಸದರಿದ್ದಾರೆ. ಬೆಳಗಾವಿಯ ಘಟನೆ ಕುರಿತು ಒಬ್ಬರೂ ಮಾತನಾಡುವುದಿಲ್ಲ, ಇಲ್ಲಿನ ಸಮಸ್ಯೆಯ ಬಗ್ಗೆ ಸಂಸತ್ತಿನಲ್ಲಿ ಧ್ವನಿ ಎತ್ತುವುದಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಪ್ರವೀಣ್‌ಕುಮಾರ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಂಇಎಸ್ ಮತ್ತು ಕೆಲವು ಸ್ಥಳೀಯ ಕನ್ನಡ ವಿರೋಧಿಗಳಿಂದ ಪ್ರತಿ ಬಾರಿಯೂ ಇಂತಹ ಪುಂಡಾಟ ನಡೆಯುತ್ತದೆ. ಕಣ್ಣೊರೆಸುವ ತಂತ್ರಕ್ಕೆ ಅವರನ್ನು ಬಂಧಿಸಿ ಬೆಳಗಾವಿಯ ಜೈಲಿನಲ್ಲಿಯೇ ಇಡಲಾಗುತ್ತದೆ. ಅವರಿಗೆ ಅಲ್ಲಿ ಎಲ್ಲ ಸೌಕರ್ಯಗಳನ್ನೂ ಒದಗಿಸಲಾಗುತ್ತದೆ. ಒಂದು ಬಾರಿ ಅವರನ್ನು ಬೆಂಗಳೂರು ಜೈಲಿಗೆ ಕರೆತರಲಿ. ಆಗ ಕನ್ನಡಿಗರ ಭಾವನೆ ಅವರಿಗೆ ಅರ್ಥವಾಗುತ್ತದೆ ಎಂದು ಹೇಳಿದ್ದಾರೆ.












Click it and Unblock the Notifications