ಕಾವೇರಿ ನದಿಯಲ್ಲಿ ಯುವ ಸೈನಿಕನ ಸಾವು

25 ವರ್ಷದ ಮಂಜು ಮೈಸೂರು ತಾಲೂಕಿನ ಬೋರೆ ಆನಂದೂರು ನಿವಾಸಿ. ಎರಡು ವರ್ಷಗಳ ಹಿಂದೆ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯಲ್ಲಿ ಸೈನಿಕರಾಗಿ ಕೆಲಸಕ್ಕೆ ಸೇರಿದ್ದರು. ಪ್ರಸ್ತುತ ಜಾರ್ಖಂಡ್ ನಲ್ಲಿ ಸೇವೆ ಸಲ್ಲಿಸುತ್ತಿದ್ದ ಮಂಜು ರಜೆ ನಿಮಿತ್ತ ತಮ್ಮ ಗ್ರಾಮಕ್ಕೆ ಬಂದಿದ್ದರು.
ನಿನ್ನೆ ಗುರುವಾರ ರಾಜ್ಯದಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಿದ್ದಾಗ ಗ್ರಾಮದಲ್ಲಿದ್ದ ಮಂಜು ಮಧ್ಯಾಹ್ನದ ವೇಳೆ ಸ್ನೇಹಿತರೊಂದಿಗೆ ಹಿನ್ನೀರಿನಲ್ಲಿ ಸ್ನಾನ ಮಾಡಲು ಹೋಗಿದ್ದರು. ನೀರಿಗಿಳಿದ ಮಂಜು ಆಕಸ್ಮಿಕವಾಗಿ ಮುಳುಗಿದ್ದಾರೆ. ತಕ್ಷಣ ಅವರನ್ನು ಜತೆಗಾರರು ನೀರಿಂದ ಮೇಲಕ್ಕೆತ್ತಿ ಆಸ್ಪತ್ರೆಗೆ ಸೇರಿಸುವ ವೇಳೆಗೆ ಅವರು ಅಸುನೀಗಿದ್ದರು.
ದೊಡ್ಡಬೋರಯ್ಯ- ತಾಯಪ್ಪ ದಂಪತಿಯ ಏಕೈಕ ಪುತ್ರ ಮಂಜು. ಎರಡು ತಿಂಗಳ ಹಿಂದಷ್ಟೇ ಮಂಜುಗೆ ವಿವಾಹ ನಿಶ್ಚಯವಾಗಿತ್ತು. ಜೂನ್ ತಿಂಗಳಲ್ಲಿ ಅವರ ವಿವಾಹ ನೆರವೇರಬೇಕಿತ್ತು. ಮಂಜು ಅಂತ್ಯಕ್ರಿಯೆ ಇಂದು ಶುಕ್ರವಾರ ಗ್ರಾಮದಲ್ಲಿ ನಡೆಯಲಿದೆ ಎಂದು ಆತನ ಕುಟುಂಬದವರು ಹೇಳಿದ್ದಾರೆ.












Click it and Unblock the Notifications