ಮಾರ್ಕೊಪೋಲೊ ಬಸ್ ಖರೀದಿ ಹಗರಣ, ಸಿಐಡಿ ತನಿಖೆಗೆ ಆದೇಶ
ಬೆಂಗಳೂರು, ಮಾರ್ಚ್ 05 : ಮಾರ್ಕೊಪೋಲೊ ಬಸ್ ಖರೀದಿ ಹಗರಣದ ತನಿಖೆಯನ್ನು ಸಿಐಡಿ ತನಿಖೆಗೆ ವಹಿಸಲಾಗಿದೆ. ಮಾಜಿ ಸಾರಿಗೆ ಸಚಿವ ಆರ್.ಅಶೋಕ್, 'ಇದು ಸೇಡಿನ ರಾಜಕಾರಣ. ಇದಕ್ಕೆಲ್ಲ ಹೆದರುವುದಿಲ್ಲ' ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಸೋಮವಾರ ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಅವರು ಮಾರ್ಕೊಪೋಲೊ ಬಸ್ ಖರೀದಿ ಹಗರಣದ ತನಿಖೆಯನ್ನು ಸಿಐಡಿಗೆ ವಹಿಸಿ ಆದೇಶ ನೀಡಿದ್ದಾರೆ. ನಿಯಮಾವಳಿಗಳನ್ನು ಮೀರಿ ಬಸ್ ಖರೀದಿ ಮಾಡಿ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿಗೆ ನಷ್ಟ ಉಂಟು ಮಾಡಲಾಗಿದೆ ಎಂಬುದು ಆರೋಪವಾಗಿದೆ.
2015ರಲ್ಲಿ ವಿಧಾನಸಭೆಯ ಸಾರ್ವಜನಿಕ ಉದ್ಯಮಗಳ ಸಮಿತಿ ಸರ್ಕಾರಕ್ಕೆ ವರದಿಯನ್ನು ನೀಡಿತ್ತು. ಪರೀಕ್ಷಾರ್ಥ ಸಂಚಾರ ನಡೆಸದೆ ಕೆಎಸ್‌ಆರ್‌ಟಿಸಿಗೆ 41 ಹಾಗೂ ಬಿಎಂಟಿಸಿಗೆ 98 ಮಾರ್ಕೊಪೋಲೊ ಬಸ್ಸುಗಳನ್ನು ಖರೀದಿ ಮಾಡಲಾಗಿದೆ.

ಖರೀದಿಗೆ ಮೊದಲು ಬಸ್ಸುಗಳ ಇಂಧನ ಕ್ಷಮತೆಯನ್ನು ಸರಿಯಾಗಿ ಪರಿಶೀಲನೆ ಮಾಡಲಾಗಿಲ್ಲ. ಬಸ್ ಖರೀದಿಯಿಂದ ಕೆಎಸ್ಆರ್‌ಟಿಸಿಗೆ 81 ಲಕ್ಷ ನಷ್ಟ ಉಂಟಾಗಿದೆ ಎಂದು ವರದಿ ಹೇಳಿತ್ತು. ಈ ವರದಿಯ ಅನ್ವಯ ಸಿಐಡಿ ತನಿಖೆಗೆ ಆದೇಶ ನೀಡಲಾಗಿದೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಖರೀದಿ : 2009ರಲ್ಲಿ 98 ಹವಾನಿಯಂತ್ರಿತ ಮಾರ್ಕೊಪೋಲೊ ಬಸ್ ಮತ್ತು 44 ಹವಾನಿಯಂತ್ರಿತವಲ್ಲದ ಬಸ್ಸುಗಳನ್ನು ಖರೀದಿ ಮಾಡಲಾಗಿತ್ತು. ಇವುಗಳ ನಿರ್ವಹಣಾ ವೆಚ್ಚವೇ ಅಧಿಕವಾಗಿದ್ದರಿಂದ ಅವುಗಳನ್ನು ಗುಜರಿಗೆ ಹಾಕಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು.
ಆರ್.ಅಶೋಕ್ ಪ್ರತಿಕ್ರಿಯೆ : ಸಿಐಡಿ ತನಿಖೆಗೆ ವಹಿಸಿದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಾರಿಗೆ ಸಚಿವ ಆರ್.ಅಶೋಕ್, 'ಇದು ರಾಜ್ಯ ಸರ್ಕಾರದ ಸೇಡಿನ ರಾಜಕಾರಣ. ನಿಯಮಾವಳಿಯಂತೆಯೇ ಬಸ್ ಖರೀದಿ ಮಾಡಲಾಗಿದೆ. ಇಂತಹ ಬೆದರಿಕೆ ತಂತ್ರಕ್ಕೆ ಹೆದರುವುದಿಲ್ಲ' ಎಂದು ಹೇಳಿದ್ದಾರೆ.












Click it and Unblock the Notifications