ಚಿತ್ರದುರ್ಗ ಬಸ್ ದುರಂತ ಪ್ರಕರಣ: ಮೃತ ಕುಟುಂಬಸ್ಥರಿಗೆ 5 ಲಕ್ಷ ಪರಿಹಾರ: ಸಿದ್ದರಾಮಯ್ಯ ಘೋಷಣೆ
ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಗೊರ್ಲತ್ತು ಗ್ರಾಮದ ಬಳಿ ಲಾರಿ ಡಿಕ್ಕಿಯಾಗಿ ಖಾಸಗಿ ಬಸ್ ಹೊತ್ತಿ ಉರಿದು ಬಸ್‌ನಲ್ಲಿದ್ದ 11ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಚಿತ್ರದುರ್ಗ ಬಸ್ ದುರಂತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೃತ ಕುಟುಂಬಸ್ಥರಿಗೆ 5 ಲಕ್ಷ ಪರಿಹಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಣೆ ಮಾಡಿದ್ದಾರೆ.
ಈ ಕುರಿತು ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಚಿತ್ರದುರ್ಗದಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ ರೂ.5 ಲಕ್ಷ ಹಾಗೂ ಗಾಯಗೊಂಡವರಿಗೆ ತಲಾ ರೂ.50,000 ಪರಿಹಾರ ನೀಡಲಾಗುವುದು. ಘಟನೆಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು, ಸಂತ್ರಸ್ತರ ನೆರವಿಗೆ ನಿಲ್ಲುವಂತೆ ಸೂಚಿಸಿದ್ದೇನೆ. ಈ ಬಗ್ಗೆ ತನಿಖೆ ನಡೆಸಿ, ಅಪಘಾತಕ್ಕೆ ಕಾರಣ ಪತ್ತೆ ಮಾಡಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಘಟನೆಯಲ್ಲಿ ಗಾಯಗೊಂಡವರು ಆದಷ್ಟು ಶೀಘ್ರ ಗುಣಮುಖರಾಗಲಿ ಹಾಗೂ ಮೃತರ ಆತ್ಮಕ್ಕೆ ಶಾಂತಿ ಲಭಿಸಲಿ ಎಂದು ಮತ್ತೊಮ್ಮೆ ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.

ಚಿತ್ರದುರ್ಗ ಬಳಿ ಸಂಭವಿಸಿದ ಲಾರಿ ಮತ್ತು ಬಸ್ ನಡುವಿನ ಅಪಘಾತದಲ್ಲಿ ಹಲವು ಪ್ರಯಾಣಿಕರು ಸಜೀವ ದಹನವಾದ ಘೋರ ದುರಂತದ ಸುದ್ದಿ ಕೇಳಿ ಎದೆ ನಡುಗಿತು. ಕ್ರಿಸ್ಮಸ್ ರಜೆಯಲ್ಲಿ ಊರಿಗೆ ತೆರಳುತ್ತಿದ್ದವರ ಪ್ರಯಾಣ ಈ ರೀತಿ ದುರಂತದಲ್ಲಿ ಕೊನೆಗೊಂಡಿರುವುದು ವಿಷಾದನೀಯ. ಅಪಘಾತದ ಬಗ್ಗೆ ಸೂಕ್ತ ತನಿಖೆ ನಡೆಸಿ, ಕಾರಣವನ್ನು ಪತ್ತೆಹಚ್ಚಲಾಗುವುದು. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಅಪಘಾತದಲ್ಲಿ ಮಡಿದ ಕುಟುಂಬಸ್ಥರ ದುಃಖದಲ್ಲಿ ನಾನೂ ಭಾಗಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಇನ್ನು ಭೀಕರ ಅಪಘಾತದಲ್ಲಿ ಬಸ್ ನಲ್ಲಿ 15 ಮಹಿಳೆಯರು, 14 ಪುರುಷರು ಪ್ರಯಾಣಿಸುತ್ತಿದ್ದ ಮಾಹಿತಿ ಲಭ್ಯವಾಗಿದೆ. ಮಂಜುನಾಥ್, ಸಂಧ್ಯಾ, ಶಶಾಂಕ್, ದಿಲೀಪ್, ಪ್ರೀತಿಶ್ವರನ್, ವಿ.ಬಿಂದು, ಕೆ.ಕವಿತಾ, ಅನಿರುದ್ಧ್ ಬೆನರ್ಜಿ, ಅಮೃತಾ, ಇಶಾ, ಸೂರಜ್, ಮಾನಸ, ಮಿಲನಾ, ಹೇಮರಾಜ್ ಕುಮಾರ್, ಕಲ್ಪನಾ ಪ್ರಜಾಪತಿ, ಎಂ.ಶಶಿಕಾಂತ್, ವಿಜಯ್ ಭಂಡಾರಿ, ನವ್ಯಾ, ಅಭಿಷೇಕ್, ಹೆಚ್.ಕಿರಣ್ ಪಾಲ್, ಎಂ.ಕೀರ್ತನ್ ಎಂದು ತಿಳಿದು ಬಂದಿದೆ.
ಇನ್ನೂ ಚಿತ್ರದುರ್ಗದಲ್ಲಿ ಸಂಭವಿಸಿದ ಈ ಘಟನೆ ಕುರಿತು ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವರಾದ ಹೆಚ್ ಡಿ ಕುಮಾರಸ್ವಾಮಿ ಅವರು ಬೇಸರ ವ್ಯಕ್ತಪಡಿಸಿದ್ದು, ಚಿತ್ರದುರ್ಗದ ಸಮೀಪ ಖಾಸಗಿ ಬಸ್ʼವೊಂದು ಅಪಘಾತಕ್ಕೆ ತುತ್ತಾಗಿ ಬೆಂಕಿ ಹೊತ್ತಿ ಉರಿದು ಹಲವರು ಧಾರುಣ ಸಾವನ್ನಪ್ಪಿರುವ ಸುದ್ದಿ ತಿಳಿದು ತೀವ್ರ ಆಘಾತವಾಯಿತು. ಈ ದುರಂತದಲ್ಲಿ ಇನ್ನೂ ಹೆಚ್ಚಿನ ಸಾವು-ನೋವು ಆಗದಿರಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ದುರಂತದಲ್ಲಿ ಜೀವ ಚೆಲ್ಲಿದವರಿಗೆ ದೇವರು ಚಿರಶಾಂತಿ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಹಾಗೂ ಅವರ ಚಿಕಿತ್ಸೆಗೆ ರಾಜ್ಯ ಸರಕಾರ ಎಲ್ಲಾ ವ್ಯವಸ್ಥೆಗಳನ್ನು ಕೈಗೊಳ್ಳಲಿ. ಅಗಲಿದವರ ಕುಟುಂಬದವರಿಗೆ ನನ್ನ ತೀವ್ರ ಸಂತಾಪಗಳು ಎಂದು ತಿಳಿಸಿದ್ದಾರೆ.
ಚಿತ್ರದುರ್ಗದಲ್ಲಿ ಸಂಭವಿಸಿದ ಬಸ್ ಅಗ್ನಿ ದುರಂತದ ಬಗ್ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ರಾಷ್ಟ್ರಪತಿ ಮುರ್ಮು ಅವರು ತಮ್ಮ ಪೋಸ್ಟ್ ನಲ್ಲಿ, ಕರ್ನಾಟಕದ ಚಿತ್ರದುರ್ಗದಲ್ಲಿ ಸಂಭವಿಸಿದ ಬಸ್ ಅಗ್ನಿ ದುರಂತದಿಂದ ತೀವ್ರ ದುಃಖಿತನಾಗಿದ್ದೇನೆ. ದುಃಖತಪ್ತ ಕುಟುಂಬಗಳಿಗೆ ನನ್ನ ಹೃತ್ಪೂರ್ವಕ ಸಂತಾಪಗಳು. ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.












Click it and Unblock the Notifications