Karnataka Next CM: ಸಿದ್ದರಾಮಯ್ಯ ಅಭಿಮಾನಿಗಳಿಂದ ಈಡುಗಾಯಿ ಒಡೆದು ಪೂಜೆ! ಡಿಕೆಶಿ ಪರ ನಂಜಾವಧೂತ ಶ್ರೀ..
ಬೆಂಗಳೂರು, ನವೆಂಬರ್ 28: ಕರ್ನಾಟಕದ ಸಿಎಂ ಸ್ಥಾನ ಬದಲಾವಣೆ ವಿಚಾರವಾಗಿ ನಡೆಯುತ್ತಿರುವ ಬೆಳವಣಿಗೆಯಿಂದ ದೇಶವೇ ರಾಜ್ಯ ರಾಜಕಾರಣದತ್ತ ತಿರುಗಿ ನೋಡುವಂತಾಗಿದೆ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪರ ಸ್ವಾಮೀಜಿಗಳು ನಿಂತಿದ್ದಾರೆ. ಇತ್ತ ಸಿಎಂ ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದುವರಿಯಬೇಕೆಂದು ರಾಜ್ಯದ ವಿವಿಧ ಕಡೆಗಳಲ್ಲಿ ದೇವಸ್ಥಾನಗಳಲ್ಲಿ ಸಿದ್ದರಾಮಯ್ಯನವರ ಅಭಿಮಾನಿಗಳು ಈಡುಗಾಯಿ ಒಡೆದು ವಿಶೇಷ ಪೂಜೆ ಸಲ್ಲಿಸಿದ್ದು ಕಂಡು ಬಂತು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಈ ಬಾರಿ ಪೂರ್ಣಾವಧಿವರೆಗೂ ಸಿಎಂ ಸ್ಥಾನದಲ್ಲಿ ಮುಂದವರಿಯಬೇಕು. ಆ ಸ್ಥಾನಕ್ಕೆ ಅವರೇ ಸೂಕ್ತ. ನಾಯಕತ್ವ ಬದಲಾವಣೆ ಬೇಡ ಎಂದು ರಾಜ್ಯ ಕಲಬುರಗಿ, ಚಿಕ್ಕಮಗಳೂರು ಸೇರಿದಂತೆ ವಿವಿಧೆಡೆ ದೇವಸ್ಥಾನದಲ್ಲಿ ಅಭಿಮಾನಿಗಳು ಪೂಜೆ ನೆರವೇರಿಸಿದ್ದಾರೆ. ಅವರ ಭಾವಚಿತ್ರ ಹಿಡಿದು ಪೂಜೆ ಸಲ್ಲಿಸಿ ಘೋಷಣೆ ಕೂಗಿದ್ದಾರೆ.

ಚಿಕ್ಕಮಗಳೂರಿನ ಗಣಪತಿ ದೇವಸ್ಥಾನ ಹಾಗೂ ಕಲ್ಯಾಣ ಕರ್ನಾಟಕದ ಕಲಬುರಗಿಯ ಪ್ರಮುಖ ಶ್ರಿ ಶರಣಬಸವೇಶ್ವರ ದೇವಸ್ಥಾನದಲ್ಲಿ ಅಭಿಮಾನಿಗಳು, ಸಿದ್ದರಾಮಯ್ಯ ಬೆಂಬಲಿಗರು ಈಡುಗಾಯಿ ಒಡೆದು ದೇವರಲ್ಲಿ ಪ್ರಾರ್ಥಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಅಧಿಕಾರದಲ್ಲಿ ಮುಂದುವರಿಯುವಂತೆ ಬೇಡಿಕೊಂಡಿದ್ದಾರೆ. ಈ ಪೂಜೆ ಅಭಿಯಾನ ರಾಜ್ಯದ ಇತರ ಭಾಗಗಳಿಗೆ ವಿಸ್ತರಿಸಿದರೂ ಅಚ್ಚರಿ ಇಲ್ಲ.
ಡಿಕೆ ಶಿವಕುಮಾರ್ ಸಿಎಂ ಆಗಲಿ: ನಂಜಾವಧೂತ ಸ್ವಾಮೀಜಿ
ನೆನ್ನೆಯಷ್ಟೇ ಒಕ್ಕಲಿಗ ಶ್ರೀಗಳು ಆದಿಚುಂಚನಗಿರಿ ಮಠದ ಮಠಾಧೀಶರಾದ ನಿರ್ಮಲಾನಂದನಾಥ ಸ್ವಾಮೀಜಿಗಳು ಡಿಕೆ ಶಿವಕುಮಾರ್ ಅವರಿಗೆ ಸಿಎಂ ಸ್ಥಾನದ ಅವಕಾಶ ಸಿಗಬೇಕು. ಪಕ್ಷಕ್ಕಾಗಿ ಅವರು ಸಾಕಷ್ಟು ಹೋರಾಟ ಮಾಡಿದ್ದಾರೆ. ಹುಟ್ಟು ಹೋರಾಟಗಾರ. ಪಕ್ಷ ಅಧಿಕಾರಕ್ಕೆ ತರುವಲ್ಲಿ ಶ್ರಮಿಸಿದ್ದಾರೆ. ಮುಂದಿನ 2.5 ವರ್ಷಗಳ ಅವಧಿಗೆ ಹೈಕಮಾಂಡ್ ಡಿಕೆ ಶಿವಕುಮಾರ್ ಅವರನ್ನೇ ಸಿಎಂ ಮಾಡಬೇಕು. ಈ ಮೂಲಕ ಗೊಂದಲ ಬಗೆಹರಿಸಬೇಕು ಎಂದು ಹೈಕಮಾಂಡ್‌ಗೆ ಆಗ್ರಹಿಸಿದ್ದರು.
ಇದರ ಬೆನ್ನಲ್ಲೆ ಇಂದು ಡಿಕೆ ಶಿವಕುಮಾರ್ ಅವರನ್ನು ಶಿರಾದ ಪಟ್ಟನಾಯಕನಹಳ್ಳಿ ಗುರುಗುಂಡ ಬ್ರಹ್ಮೇಶ್ವರ ಮಠದ ನಂಜಾವಧೂತ ಸ್ವಾಮೀಜಿ ಭೇಟಿ ಮಾಡಿದರು. ರಾಜ್ಯದ ಮುಖ್ಯಮಂತ್ರಿ ಸ್ಥಾನ ಡಿಕೆ ಶಿವಕುಮಾರ್ ಅವರಿಗೆ ಸಿಗಬೇಕು. ಅವರು ಪಕ್ಷಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಸಾಕಷ್ಟು ಕಷ್ಟಗಳು ಎದುರಾದರೂ ಎದೆಗುಂದದೆ ಪಕ್ಷ ಕಟ್ಟಿದ್ದಾರೆ. ಅವರ ಪಟ್ಟ ನೋವು ಅಷ್ಟಿಷ್ಟಲ್ಲ. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಕುಟುಂಬಕ್ಕೆ ನಿಷ್ಠೆ ಮೆರೆದಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ಸಹಯೋಗದಲ್ಲಿ ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ತರುವಲ್ಲಿ ಅವರ ನೀಡಿದ ಕೊಡುಗೆ ಮರೆಯಲಾಗುವುದಿಲ್ಲ. ಮೊದಲ ಅವಧಿಯಲ್ಲೇ ಡಿಕೆಶಿ ಅವರು ಸಿಎಂ ಆಗುತ್ತಾರೆ ಎನ್ನಲಾಗಿತ್ತು. ಆದರೆ ಹಿರಿಯರಾದ ಸಿದ್ದರಾಮಯ್ಯ ಅವರಿಗೆ ಬಿಟ್ಟು ಕೊಡಲಾಯಿತು. ಆ ವೇಳೆ ಹೈಕಮಾಂಡ್ ನೀಡದ್ದ ಮಾತಿನಂತೆ ನಡೆದುಕೊಳ್ಳಬೇಕು. ಡಿಕೆ ಶಿವಕುಮಾರ್ ಅವರಿಗೆ ಸಿಎಂ ಸ್ಥಾನ ಕಲ್ಪಿಸಿಕೊಡಬೇಕೆಂದು ಅವರು ತಿಳಿಸಿದರು.












Click it and Unblock the Notifications