Government Employee: ಖಾಲಿ ಹುದ್ದೆ ಭರ್ತಿ, ಮೀಸಲಾತಿ, ಸರ್ಕಾರಿ ನೌಕರರ ಬೇಡಿಕೆಗಳು
ಬೆಂಗಳೂರು, ಫೆಬ್ರವರಿ 20: ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಫೆಬ್ರವರಿ 21ರ ಶುಕ್ರವಾರ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ. ಈ ಸಭೆಯಲ್ಲಿ ಯಾವ ವಿಷಯಗಳನ್ನು ಮಂಡಿಸಬೇಕು, ಸರ್ಕಾರದ ಮುಂದೆ ಯಾವ ಬೇಡಿಕೆಗಳನ್ನು ಇಡಬೇಕು ಎಂದು ಸರ್ಕಾರಿ ನೌಕರರ ಸಂಘ ತಯಾರಾಗಿದೆ. ಸರ್ಕಾರಿ ನೌಕರರ ಬೇಡಿಕೆಗಳ ಈಡೇರಿಕೆಯ ಕುರಿತು ಮಾರ್ಚ್ 7ರಂದು ಮಂಡಿಸುವ ಬಜೆಟ್‌ನಲ್ಲಿ ಹಣಕಾಸು ಸಚಿವರು ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ತೀರ್ಮಾನ ಕೈಗೊಳ್ಳಲಿದ್ದಾರೆಯೇ? ಕಾದು ನೋಡಬೇಕಿದೆ.
ಈಗಾಗಲೇ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಚರ್ಚಿಸಬೇಕಾದ ಬೇಡಿಕೆಗಳನ್ನು ಸಿದ್ಧಗೊಳಿಸಲಾಗಿದೆ. ಈ ಬೇಡಿಕೆಗಳ ಪಟ್ಟಿಯನ್ನು ವಿವಿಧ ಇಲಾಖೆಗಳಿಗೆ ಕಳಿಸಲಾಗಿದೆ. ಈ ಕುರಿತು ಸಭೆಗೆ ಅಗತ್ಯ ಮಾಹಿತಿಯನ್ನು ಒದಗಿಸುವಂತೆ ನಿರ್ದೇಶನವನ್ನು ಕೊಡಲಾಗಿದೆ.

ಬೇಡಿಕೆಗಳ ಪಟ್ಟಿ
* ಪರಿಚ್ಛೇದ 371(ಜೆ) ಮೀಸಲಾತಿಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದು. ರಾಜ್ಯದ ಹಿಂದುಳಿದ 7 ಜಿಲ್ಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಇಲಾಖೆಗಳ ನೇಮಕಾತಿ/ ಮುಂಬಡ್ತಿಯಲ್ಲಿ ಶೇ. 80 ಹಾಗೂ ರಾಜ್ಯ ವ್ಯಾಪ್ತಿ ಶೇ 8 ಮೀಸಲಾತಿಯಡಿಯಲ್ಲಿ ನೇಮಕಾತಿ ಮತ್ತು ಮುಂಬಡ್ತಿಗಳನ್ನು ಮಾಡಲು ಸರ್ಕಾರ ಆದೇಶ ಹೊರಡಿಸಿರುತ್ತದೆ. ಹಲವು ಇಲಾಖೆಗಳಲ್ಲಿ 371(ಜೆ) ಪ್ರಾದೇಶಿಕ ಮತ್ತು ರಾಜ್ಯ ವ್ಯಾಪ್ತಿ ವೃಂದದ ಹುದ್ದೆಗಳನ್ನು ಗುರುತಿಸಿ ಆದೇಶ ಹೊರಡಿಸಿರುವುದಿಲ್ಲ.
ಜಿಲ್ಲಾ ಮತ್ತು ವಿಭಾಗೀಯ ಮಟ್ಟದ ನೇಮಕಾತಿ ಮತ್ತು ಮುಂಬಡ್ತಿ ಪ್ರಕ್ರಿಯೆಯಲ್ಲಿ 371(ಜೆ) ಮೀಸಲಾತಿ ನಿಯಮಗಳು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುತ್ತಿಲ್ಲ. 371(ಜೆ) ಪ್ರಾದೇಶಿಕ ಮತ್ತು ರಾಜ್ಯ ವ್ಯಾಪ್ತಿ ವೃಂದದ ಶೇಕಡವಾರು ಮೀಸಲಾತಿ ಗುರುತಿಸುವಲ್ಲಿ ವಿಳಂಬವಾಗಿರುವುದರಿಂದ ಅರ್ಹ ನೌಕರರು ಮುಂಬಡ್ತಿಯಿಂದ ವಂಚಿತರಾಗುತ್ತಿದ್ದಾರೆ. ಆದ್ದರಿಂದ, 371(ಜೆ) ಮೀಸಲಾತಿಯ ಪರಿಣಾಮಕಾರಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸೂಕ್ತ ಆದೇಶ ಹೊರಡಿಸಲು ಬೇಡಿಕೆ.
* ಕೃಷಿ ಇಲಾಖೆಯ ಪ್ರಥಮ ದರ್ಜೆ ಸಹಾಯಕರು, ದ್ವಿತೀಯ ದರ್ಜೆ ಸಹಾಯಕರು ಹಾಗೂ ಬೆರಳಚ್ಚುಗಾರರ ಹುದ್ದೆಗಳನ್ನು ರೈತ ಸಂಪರ್ಕ ಕೇಂದ್ರಗಳಿಗೆ ಮರು ಹೊಂದಾಣಿಕೆ ಮಾಡುವ ಪ್ರಸ್ತಾವನೆಯನ್ನು ಕೈಬಿಡುವುದು. ತಾಂತ್ರಿಕ ನೈಪುಣ್ಯತೆ ಇಲ್ಲದ ಹಾಗೂ ಸೂಕ್ತ ತರಬೇತಿ ಇಲ್ಲದ ಲಿಪಿಕ ವೃಂದದ ನೌಕರರನ್ನು ರೈತ ಸಂಪರ್ಕ ಕೇಂದ್ರಗಳಿಗೆ ಹುದ್ದೆ ಸಮೇತ ವರ್ಗಾಯಿಸುವುದು ಅವೈಜ್ಞಾನಿಕವಾಗಿರುತ್ತದೆ. ರೈತ ಸಂಪರ್ಕ ಕೇಂದ್ರಗಳಿಗೆ ಇಲಾಖೆಯ ಪದವೀಧರರು ಮತ್ತು ತರಬೇತಿ ಪಡೆದ ತಾಂತ್ರಿಕ ಅಧಿಕಾರಿ/ ಸಿಬ್ಬಂದಿಗಳನ್ನು ನೇಮಿಸುವುದು ಸೂಕ್ತವಾಗಿರುವುದರಿಂದ ಲಿಪಿಕ ವರ್ಗದ ಹುದ್ದೆಗಳನ್ನು ಮರು ಹೊಂದಾಣಿಕೆ ಮಾಡುವ ಪ್ರಸ್ತಾವನೆಯನ್ನು ಕೈಬಿಡಬೇಕು.
* ಖಾಲಿ ಹುದ್ದೆಗಳನ್ನು ಭರ್ತಿ ಹಾಗೂ ರಾಜ್ಯದ ಜನಸಂಖ್ಯೆಗನುಗುಣವಾಗಿ ಹೊಸದಾಗಿ ಹುದ್ದೆಗಳನ್ನು ಸೃಜಿಸುವುದು. ಸರ್ಕಾರವು ಹಲವು ವರ್ಷಗಳ ಹಿಂದೆ ರಾಜ್ಯದ ಜನಸಂಖ್ಯೆ 5 ಕೋಟಿ ಇದ್ದ ಸಂದರ್ಭದಲ್ಲಿ 7.79 ಲಕ್ಷ ಹುದ್ದೆಗಳನ್ನು ಮಂಜೂರು ಮಾಡಿತ್ತು. ಈ ಪೈಕಿ ಸುಮಾರು 2.70 ಲಕ್ಷ ಹುದ್ದೆಗಳು ನಿವೃತ್ತಿಯಿಂದಾಗಿ ಖಾಲಿ ಇದ್ದು, ಖಾಲಿ ಹುದ್ದೆಗಳ ಕಾರ್ಯಭಾರವನ್ನು ಹಾಲಿ ಅಧಿಕಾರಿ/ ನೌಕರರೇ ನಿರ್ವಹಿಸಬೇಕಾಗಿರುವುದರಿಂದ ಸಹಜವಾಗಿಯೇ ನೌಕರರ ಮೇಲೆ ಕಾರ್ಯಭಾರದ ಒತ್ತಡ ಹೆಚ್ಚಿದ್ದು, ನೌಕರರು ಮಾನಸಿಕ ಹಾಗೂ ದೈಹಿಕ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ.
ಹೊರಗುತ್ತಿಗೆ/ ಗುತ್ತಿಗೆ ನೌಕರರ ಸೇವೆಯಿಂದ ಪ್ರಾಮಾಣಿಕ ಹಾಗೂ ಗುಣಮಟ್ಟದ ಸೇವೆಯನ್ನು ನಿರೀಕ್ಷಿಸಲು ಸಾಧ್ಯವಾಗುತ್ತಿಲ್ಲ ಹಾಗೂ ಈ ರೀತಿಯ ಸೇವೆಯಿಂದ ಪ್ರಾಮಾಣಿಕ ಸರ್ಕಾರಿ ನೌಕರರು ಸಾರ್ವಜನಿಕರ ನಿಂಧನೆಗೆ ಗುರಿಯಾಗುತ್ತಿದ್ದಾರೆ. ಅಲ್ಲದೆ, ಜನಸಾಮಾನ್ಯರಿಗೆ ಸರ್ಕಾರದ ಜನಪರ ಯೋಜನೆಗಳನ್ನು ಸಕಾಲದಲ್ಲಿ ತಲುಪಿಸಲು ಸಾಧ್ಯವಾಗುತ್ತಿಲ್ಲ. ಸುಗಮ ಆಡಳಿತ ದೃಷ್ಟಿಯಿಂದ ಪ್ರಸ್ತುತ ರಾಜ್ಯದ ಜನಸಂಖ್ಯೆಗೆ ಅನುಗುಣವಾಗಿ ಹುದ್ದೆಗಳನ್ನು ಸೃಜನೆ ಮಾಡುವುದರ ಜೊತೆಗೆ ಖಾಲಿ ಹುದ್ದೆಗಳನ್ನು ಹಂತ-ಹಂತವಾಗಿ ಭರ್ತಿ ಮಾಡಲು ಬೇಡಿಕೆ.
* ಕಾರ್ಯಭಾರ ಕಡಿಮೆ ಇದ್ದು, ಮಂಜೂರಾದ ಹುದ್ದೆಗಳು ಹೆಚ್ಚಾಗಿದ್ದಲ್ಲಿ ಅಂತಹ ಹೆಚ್ಚುವರಿ ಹುದ್ದೆಗಳನ್ನು ಕಾರ್ಯಭಾರ ಹೆಚ್ಚಾಗಿರುವ ಇಲಾಖೆಗಳಿಗೆ ಸ್ಥಳಾಂತರ/ ಮರುವಿನ್ಯಾಸಗೊಳಿಸಬೇಕಾದ ಸಂದರ್ಭದಲ್ಲಿ ರಾಜ್ಯ ಮಟ್ಟದ ಅಧಿಕಾರಿಗಳಿಗೆ ಇರುವ ಅಧಿಕಾರವನ್ನು ಸರಳೀಕರಿಸಿ ಸಂಬಂಧಿಸಿದ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಅಧಿಕಾರ ವಿಕೇಂದ್ರೀರಿಸಿ ಅವಶ್ಯ ಮಾರ್ಗಸೂಚಿಗಳನ್ನು ಹೊರಡಿಸುವುದು.
* ಹೊಸದಾಗಿ ನೇಮಕ ಹೊಂದಿದ ಹಾಗೂ ಮುಂಬಡ್ತಿ ಹೊಂದಿದ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಪರಿಣಾಮಕಾರಿ ಸೇವೆಗಾಗಿ ಕಾಲ ಕಾಲಕ್ಕೆ ಸೇವಾ ವಿಷಯಗಳ ಕುರಿತು ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡುವುದು.












Click it and Unblock the Notifications