ಆನ್‌ಲೈನ್ ಪರೀಕ್ಷೆಯಲ್ಲಿ ಅಕ್ರಮ ಕೇಸ್ : ಐಐಎಂಬಿಯ 9 ವಿದ್ಯಾರ್ಥಿಗಳಿಗೆ ಹೈಕೋರ್ಟ್ ರಿಲೀಫ್..!
ಬೆಂಗಳೂರು.ಫೆ.5; ಆನ್‌ಲೈನ್ ಮೂಲಕ ನಡೆದ ಪರೀಕ್ಷೆಯಲ್ಲಿ ಅಕ್ರಮ ಎಸಗಲಾಗಿದೆ ಎಂಬ ಆರೋಪ ಎದುರಿಸುತ್ತಿದ್ದ ಬೆಂಗಳೂರಿನ ಭಾರತೀಯ ನಿರ್ವಹಣಾ ಸಂಸ್ಥೆ (ಐಐಎಂ-ಬಿ)ಯ ಆರು ವಿದ್ಯಾರ್ಥಿಗಳಿಗೆ ಹೈಕೋರ್ಟ್ ಡೊಡ್ಡ ರಿಲೀಫ್ ನೀಡಿದೆ.
ಅಲ್ಲದೆ, ನ್ಯಾಯಾಲಯ ವಿದ್ಯಾರ್ಥಿಗಳಿಗೆ ಮೃದು (ಲೀನಿಯಂಟ್ ) ಶಿಕ್ಷೆ ನೀಡುವಂತೆ ಸಂಸ್ಥೆಗೆ ಸೂಚಿಸಿದೆ. 2021ರ ಆಗಸ್ಟ್ ನಲ್ಲಿ ಆನ್ ಲೈನ್ ಮೂಲಕ ನಡೆದ ಮೊದಲ ಟರ್ಮ್ ಪರೀಕ್ಷೆಯಲ್ಲಿ ವಂಚನೆ ಎಸಗಿದ್ದ ಈ ಒಂಬತ್ತು ವಿದ್ಯಾರ್ಥಿಗಳಿಗೆ ಶೂನ್ಯ ಅಂಕ ನೀಡುವಂತೆ ಆದೇಶಿಸಿದೆ.
ಏಕಸದಸ್ಯಪೀಠದ ಆದೇಶ ಪ್ರಶ್ನಿಸಿ ಐಐಎಂ-ಬಿ ಸಲ್ಲಿಸಿದ್ದ ಮೇಲ್ಮನವಿಯನ್ನು ಆಲಿಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾ. ಸೂರಜ್ ಗೋವಿಂದರಾಜ್ ಅವರಿದ್ದ ವಿಭಾಗೀಯಪೀಠ ಈ ಆದೇಶ ನೀಡಿದೆ.

ಅಲ್ಲದೆ, ಈ ಪ್ರಕರಣದಲ್ಲಿ ವಿದ್ಯಾರ್ಥಿಗಳಿಗೆ ನೀಡಿರುವ ಪರಿಹಾರವನ್ನು ಇಂತಹುದೇ ಪ್ರಕರಣಗಳಲ್ಲಿ ಪ್ರಿಸಿಡೆಂಟ್ ಮಾಡಿಕೊಳ್ಳಬಾರದು ಮತ್ತು ಪರೀಕ್ಷಾ ಅಕ್ರಮಗಳಲ್ಲಿ ತೊಡಗುವಂತಹ ವಿದ್ಯಾರ್ಥಿಗಳ ವಿರುದ್ಧ ಅಯಾ ವರ್ಷ ಅಯಾ ಪ್ರಕರಣಗಳನ್ನು ಆಧರಿಸಿ ಕ್ರಮ ಕೈಗೊಳ್ಳಲು ಐಐಎಂಬಿ ಸ್ವತಂತ್ರವಾಗಿದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
"ಏಕಸದಸ್ಯಪೀಠ ನೀಡಿರುವ ಆದೇಶದಲ್ಲಿ ಯಾವುದೇ ತಪ್ಪಿಲ್ಲ, 9 ವಿದ್ಯಾರ್ಥಿಗಳಿಗೆ ಏಕಾಏಕಿ ಉಚ್ಛಾಟನೆಯಂತಹ ಕಠಿಣ ಶಿಕ್ಷೆ ವಿಧಿಸುವ ಮುನ್ನ ಅವರಿಗೆ ತಮ್ಮ ಅಹವಾಲು ಹೇಳಿಕೊಳ್ಳಲು ಅವಕಾಶ ನೀಡಿಲ್ಲ ಎಂದು ಏಕಸದಸ್ಯಪೀಠ ಹೇಳಿರುವುದು ಸರಿ ಇದೆ. ಹಾಗಾಗಿ ಆ ಆದೇಶದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ''ಎಂದು ಆದೇಶದಲ್ಲಿ ತಿಳಿಸಲಾಗಿದೆ.
"ವಿದ್ಯಾರ್ಥಿಗಳೆಲ್ಲಾ ಪ್ರತಿಷ್ಠಿತ ಸಂಸ್ಥೆಯ ವಿದ್ಯಾರ್ಥಿಗಳು, ಅವರ ಭವಿಷ್ಯ ಅಡಕತ್ತರಿಯಲ್ಲಿದೆ. ಹಾಗಾಗಿ ಅವರಿಗೆ ಒಂದು ಅವಕಾಶ ನೀಡಿ ತಪ್ಪು ತಿದ್ದಿಕೊಳ್ಳಲು ಅನುವು ಮಾಡಿಕೊಡಬೇಕು ಎಂದು ನ್ಯಾಯಪೀಠ ಹೇಳಿದೆ.
ಪ್ರಕರಣದ ಹಿನ್ನೆಲೆ:
ಐಐಎಂಬಿ ಸುಮಾರು 15 ಸ್ನಾತಕೋತ್ತರ ಕೋರ್ಸ್ (ಪಿಜಿಪಿ) ಮತ್ತು ಬುಸಿನೆಸ್ ಅನಲಿಟಿಕ್ಸ್ ನ ಪಿಜಿಪಿ ವಿದ್ಯಾರ್ಥಿಗಳು 2021ರ ಆಗಸ್ಟ್ ನಲ್ಲಿ ಆನ್ ಲೈನ್ ಮೂಲಕ ನಡೆದ ಮೊದಲ ಟರ್ಮ್ ಪರೀಕ್ಷೆ ವೇಳೆ ಒಂದು ವಾಟ್ಸಪ್ ಗ್ರೂಪ್ ರಚಿಸಿಕೊಂಡು, ಯಾರಿಗೂ ತಿಳಿಯದಂತೆ ಬೇರೊಂದು ಸಾಫ್ಟ್ ವೇರ್ ಬಳಿಸಿ ಮಾರ್ಕೆಟಿಂಗ್ ಮ್ಯಾನೇಜ್‌ಮೆಂಟ್ ವಿಷಯದ ಉತ್ತರಗಳನ್ನು ವಿನಿಮಯ ಮಾಡಿಕೊಂಡಿದ್ದರು. ಮೊಬೈಲ್ ಫೋನ್ ಗಳನ್ನು ಲಾಕ್ಡ್ ಮೋಡ್ ನಲ್ಲಿ ಇದನ್ನು ಮಾಡಿದ್ದರು.
ಅನಾಮಧೇಯರು ನೀಡಿದ ಸುಳಿವು ಆಧರಿಸಿ ವಿದ್ಯಾರ್ಥಿಗಳನ್ನು ವಿಚಾರಣೆಗೆ ಗುರಿಪಡಿಸಿದಾಗ ಆರಂಭದಲ್ಲಿ ಅವರು ಅಕ್ರಮ ಎಸಗಿರುವುದನ್ನು ತಳ್ಳಿ ಹಾಕಿದ್ದರು. ನಂತರ ಐಐಎಂಬಿ ಗೆ ಅವರು ಚೀಟ್ ಮಾಡಿರುವ ಕುರಿತು ಸಾಕ್ಷ್ಯ ಸಿಕ್ಕಾಗ, ವಿದ್ಯಾರ್ಥಿಗಳು ತಮ್ಮ ತಪ್ಪು ಒಪ್ಪಿಕೊಂಡು ಬೇಷರತ್ ಕ್ಷಮೆ ಕೋರಿದ್ದರು.
Recommended Video
ಈ ಪರೀಕ್ಷಾ ಅಕ್ರಮವನ್ನು ಗಂಭೀರವಾಗಿ ಪರಿಗಣಿಸಿದ್ದ ಐಐಎಂಬಿ 9 ವಿದ್ಯಾರ್ಥಿಗಳನ್ನು ಸಂಸ್ಥೆಯಿಂದ ಉಚ್ಛಾಟಿಸಿತ್ತು. ವಿದ್ಯಾರ್ಥಿಗಳು ಅದನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ದರು. ಆ ಬಗ್ಗೆ ವಿಚಾರಣೆ ನಡೆಸಿದ್ದ ಹೈಕೋರ್ಟ್ ಏಕ ಸದಸ್ಯಪೀಠ 2021ರ ಡಿ.20ರಂದು, ವಿದ್ಯಾರ್ಥಿಗಳನ್ನು ಉಚ್ಛಾಟಿಸಿದ್ದ ಐಐಎಂಬಿ ಆದೇಶ ರದ್ದುಗೊಳಿಸಿ, ವಿದ್ಯಾರ್ಥಿಗಳಿಗೆ ಮೃದು ಶಿಕ್ಷೆ ನೀಡಲು ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿ ಐಐಎಂಬಿ ಮೇಲ್ಮನವಿ ಸಲ್ಲಿಸಿತ್ತು.












Click it and Unblock the Notifications