Liquor: ಹೊಸ ಅಬಕಾರಿ ನೀತಿ: ಮತ್ತಷ್ಟು ಕೈಗೆಟುಕುವ ದರಕ್ಕೆ ಅಗ್ಗದ ಮದ್ಯ, ಪ್ರೀಮಿಯಂ ಬ್ರ್ಯಾಂಡ್‌ಗಳು ದುಬಾರಿ
ಬೆಂಗಳೂರು: ರಾಜ್ಯದ ಮದ್ಯ ಪ್ರಿಯರಿಗೆ ಸರ್ಕಾರವು ಸಿಹಿ ಮತ್ತು ಕಹಿ ಎರಡೂ ಸುದ್ದಿಯನ್ನು ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಬಜೆಟ್‌ನಲ್ಲಿ ಘೋಷಿಸಿದಂತೆ, ರಾಜ್ಯ ಅಬಕಾರಿ ಸುಂಕದ ನೀತಿಯಲ್ಲಿ ಮಹತ್ವದ ಬದಲಾವಣೆಗಳನ್ನು ತರಲಾಗಿದ್ದು, ಇದಕ್ಕಾಗಿ ಕರಡು ಮಸೂದೆಯನ್ನು ಪ್ರಕಟಿಸಲಾಗಿದೆ. ಹೊಸ ನಿಯಮದ ಪ್ರಕಾರ, ಕಡಿಮೆ ಬೆಲೆಯ ಮದ್ಯದ ದರದಲ್ಲಿ ಇಳಿಕೆಯಾಗಲಿದ್ದರೆ, ದುಬಾರಿ ಬೆಲೆಯ ಮದ್ಯದ ದರ ಮತ್ತಷ್ಟು ಏರಿಕೆಯಾಗಲಿದೆ.
ಸರ್ಕಾರವು ಈ ಸಂಬಂಧ ಶನಿವಾರ ಕರಡು ಅಧಿಸೂಚನೆಯನ್ನು ಹೊರಡಿಸಿದೆ. ಈ ಹೊಸ ನೀತಿಗೆ ಸಾರ್ವಜನಿಕರು ಅಥವಾ ಆಕ್ಷೇಪಣೆ ಸಲ್ಲಿಸಲು 7 ದಿನಗಳ ಕಾಲಾವಕಾಶ ನೀಡಲಾಗಿದೆ. ಈ ಅವಧಿಯ ನಂತರ ಆಕ್ಷೇಪಣೆಗಳನ್ನು ಪರಿಶೀಲಿಸಿ, ಅಬಕಾರಿ ಸುಂಕದ ಹೊಸ ದರಪಟ್ಟಿ ಅಧಿಕೃತವಾಗಿ ಜಾರಿಗೆ ಬರಲಿದೆ.

ಸ್ಲ್ಯಾಬ್‌ಗಳ ಸಂಖ್ಯೆ ಕಡಿತ
ಸ್ತುತ ಜಾರಿಯಲ್ಲಿರುವ 16 ಮದ್ಯದ ಬೆಲೆ ಸ್ಲ್ಯಾಬ್‌ಗಳನ್ನು ಕೇವಲ 8 ಸ್ಲ್ಯಾಬ್‌ಗಳಿಗೆ ಇಳಿಸಲು ಸರ್ಕಾರ ನಿರ್ಧರಿಸಿದೆ. ಇದರಿಂದಾಗಿ ಮದ್ಯದ ಬೆಲೆ ನಿಗದಿಯಲ್ಲಿ ಹೆಚ್ಚಿನ ಪಾರದರ್ಶಕತೆ ಬರಲಿದೆ ಎಂದು ನಿರೀಕ್ಷಿಸಲಾಗಿದೆ. ಮೊದಲ ಸ್ಲ್ಯಾಬ್ ಅಡಿಯಲ್ಲಿ ಬರುವ ಮದ್ಯಕ್ಕೆ ವಿಧಿಸಲಾಗುತ್ತಿದ್ದ ಹೆಚ್ಚುವರಿ ಅಬಕಾರಿ ಸುಂಕವನ್ನು 297 ರೂ.ಗಳಿಂದ ಕೇವಲ 50 ರೂ.ಗಳಿಗೆ ಇಳಿಸಲಾಗಿದೆ. ಇದರಿಂದಾಗಿ ಕಡಿಮೆ ಬೆಲೆಯ ಮದ್ಯದ ದರದಲ್ಲಿ ಗಣನೀಯ ಇಳಿಕೆಯಾಗಲಿದೆ.
ಪ್ರೀಮಿಯಂ ಮದ್ಯಕ್ಕೆ ಹೆಚ್ಚಿನ ಹೊರೆ
ದುಬಾರಿ ಅಥವಾ ಪ್ರೀಮಿಯಂ ಮದ್ಯದ ಮೇಲಿನ ಸುಂಕವನ್ನು ಹೆಚ್ಚಿಸಲಾಗಿದೆ. 5,001 ರೂ.ಗಿಂತ ಹೆಚ್ಚಿನ ಬೆಲೆಯ ಮದ್ಯಕ್ಕೆ ವಿಧಿಸಲಾಗುತ್ತಿದ್ದ ಹೆಚ್ಚುವರಿ ಸುಂಕವನ್ನು 1,600 ರೂ.ನಿಂದ 3,700 ರೂ.ಗೆ ಏರಿಸಲಾಗಿದೆ. ಅಂದರೆ, ದುಬಾರಿ ಮದ್ಯದ ಮೇಲೆ ಸುಮಾರು 2,100 ರೂ.ಗಳಷ್ಟು ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ.
ಬಿಯರ್ ಪ್ರಿಯರಿಗೂ ದರ ವ್ಯತ್ಯಾಸ
ಬಿಯರ್ ಮೇಲೆ ವಿಧಿಸಲಾಗುವ ಸುಂಕದ ದರಗಳಲ್ಲೂ ಬದಲಾವಣೆ ಮಾಡಲಾಗಿದೆ. ಒಂದು ಲೀಟರ್ ಶುದ್ಧ ಆಲ್ಕೋಹಾಲ್ ಮೇಲೆ ವಿಧಿಸುವ ಹೆಚ್ಚುವರಿ ಸುಂಕವನ್ನು ಬೆಲೆಗೆ ಅನುಗುಣವಾಗಿ ಮೂರು ಹಂತಗಳಲ್ಲಿ (800 ರೂ., 1,400 ರೂ. ಮತ್ತು 2,700 ರೂ.) ನಿಗದಿಪಡಿಸಲಾಗಿದೆ. ರಾಜ್ಯ ಸರ್ಕಾರವು ಮದ್ಯದ ಮೇಲಿನ ತೆರಿಗೆ ಸ್ಲ್ಯಾಬ್‌ಗಳನ್ನು ಪುನರ್ ರಚಿಸುವ ಮೂಲಕ ಅಬಕಾರಿ ನೀತಿಯಲ್ಲಿ ಕ್ರಾಂತಿಕಾರಿ ಬದಲಾವಣೆಗೆ ಮುಂದಾಗಿದೆ.
ಹೊಸ ನೀತಿಯಲ್ಲಿ ಬ್ರಾಂಡಿ, ವಿಸ್ಕಿ, ಜಿನ್ ಮುಂತಾದ ಮದ್ಯಗಳಲ್ಲಿ ಇರುವ 'ಶುದ್ಧ ಆಲ್ಕೋಹಾಲ್' (Pure Alcohol) ಪ್ರಮಾಣವನ್ನು ಆಧರಿಸಿ ಸುಂಕ ವಿಧಿಸುವ ಹೊಸ ಪದ್ಧತಿಯನ್ನು ಪ್ರಸ್ತಾಪಿಸಲಾಗಿದೆ. ಪ್ರತಿ ಒಂದು ಲೀಟರ್ ಶುದ್ಧ ಆಲ್ಕೋಹಾಲ್‌ಗೆ ಸುಮಾರು ₹1,000 ಅಬಕಾರಿ ಸುಂಕ ವಿಧಿಸುವ ಯೋಜನೆಯೂ ಇದೆ.
ಗೋವಾ ಅಥವಾ ಮಹಾರಾಷ್ಟ್ರದಂತಹ ನೆರೆರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಮದ್ಯದ ದರ ಹೆಚ್ಚಿತ್ತು. ಅಗ್ಗದ ಮದ್ಯದ ದರ ಇಳಿಸುವುದರಿಂದ ಅಕ್ರಮ ಮದ್ಯ ಮಾರಾಟ ತಡೆಯುವುದು ಸರ್ಕಾರದ ಉದ್ದೇಶ. ಅಲ್ಲದೆ ಪ್ರೀಮಿಯಂ ಮದ್ಯದ ಮೇಲೆ ಹೆಚ್ಚಿನ ಸುಂಕ ವಿಧಿಸುವ ಮೂಲಕ ಸರ್ಕಾರದ ಬೊಕ್ಕಸಕ್ಕೆ ಹೆಚ್ಚಿನ ಆದಾಯ ತರುವುದು ಮತ್ತೊಂದು ಗುರಿ.












Click it and Unblock the Notifications