CP Yogeshwar: ರಾಜೀನಾಮೆ ಕೊಟ್ಟ ಸಿಪಿ ಯೋಗೇಶ್ವರ ವಿರುದ್ಧ ಪುತ್ರಿ 'ನಿಶಾ' ಸಮರ
ಬೆಂಗಳೂರು, ಅಕ್ಟೋಬರ್ 22: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಯಿಂದ ಟಿಕೆಟ್ ಸಿಗುವುದು ಅನುಮಾನ ವಿಚಾರ ಗೊತ್ತಾಗುತ್ತಿದ್ದಂತೆ ಮಾಜಿ ಸಚಿವ, ಪ್ರಬಲ ಟಿಕೆಟ್ ಆಕಾಂಕ್ಷಿ ಸಿ.ಪಿ.ಯೋಗೇಶ್ವರ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪಕ್ಷೇತರ ಸ್ಪರ್ಧೆಗೆ ಮುಂದಾಗಿರುವ ಅವರ ವಿರುದ್ಧ ಪುತ್ರಿ ನಿಶಾ ಯೋಗೇಶ್ವರ ಅವರು ಸಮರ ಸಾರಿದ್ದಾರೆ. ಎಲ್ಲವನ್ನು ಬಯಲು ಮಾಡುತ್ತೇನೆ ಎಂದು ಪಣ ತೊಟ್ಟಿದ್ದಾರೆ.
ಹೌದು, ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರವಾಗಿ ಚುನಾವಣೆಗೆ ನಿಲ್ಲಲು ತಯಾರಿ ನಡೆಸಿರುವ ಸಿ.ಪಿ ಯೋಗೇಶ್ವರ ಅವರು ಪುತ್ರಿ ನಿಶಾ ಅವರಿಂದಲೇ ಸಂಕಷ್ಟ ಎದುರಿಸುವಂತಾಗಿದೆ. ರಾಜೀನಾಮೆ ಕೊಡುತ್ತಿದ್ದಂತೆ ತಂದೆ ಸಿಪಿ ಯೋಗೇಶ್ವರ ಅವರ ವಿರುದ್ಧ ಬಹಿರಂಗವಾಗಿ ವಿಡಿಯೋ ಮಾಡಿದ್ದಾರೆ. ಆದರೆ ಎಲ್ಲೂ ತಂದೆಯ ಹೆಸರು ಪ್ರಸ್ತಾಪಿಸದೇ ಕೆಲವು ಅಂಶಗಳನ್ನು ಮಾತನಾಡಿದ್ದಾರೆ.

ತಂದೆ ವಿರುದ್ಧ ಸೋಮವಾರ ಸಾಮಾಜಿಕ ಜಾಲತಾಣಗಳಲ್ಲಿ ನಿಶಾ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಲ್ಲವನ್ನು ಬೆಳಕಿಗೆ ತರುತ್ತೇನೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಜೀವನದ ಸತ್ಯ ಜನರ ಮುಂದಿಡುವೆ: ನಿಶಾ
ನಾನು ರಾಜಕೀಯಕ್ಕೆ ಬರಬಾರದು ಎಂದು ತಡೆದರು. ಉತ್ತಮ ವಿದ್ಯಾಭ್ಯಾಸ ಮಾಡದಂತೆ, ಸಮಾಜ ಸೇವೆ ಮಾಡದಂತೆ ನನ್ನು ತಡೆಯಲಾಯಿತು. ಇಷ್ಟದ ಯಾವ ರಂಗದಲ್ಲೂ ಮುಂದೆ ಬರದಂತೆ ಮಾಡಿದರು. ಜೀವನದಲ್ಲಿ ಯಾವೊಂದು ಹಂತದಲ್ಲಿಯೂ ಮುಂದೆ ಬರಲು ಬಿಡದಂತೆ ಮಾಡಿದರೂ. ನನ್ನ ಜೀವನ ಸತ್ಯ, ಅದರ ಕುರಿತು ಹಲವು ಅಂಶಗಳನ್ನು ಜನರು ಮುಂದಿಡುತ್ತೇನೆ ಎಂದು ತಂದೆ ವಿರುದ್ಧ ನಿಶಾ ಅವರು ಗುಡುಗಿದ್ದಾರೆ.

ಈ ಹಿಂದೆ ವಿಧಾನಸಭಾ ಚುನಾವಣೆಯಲ್ಲಿ ತಂದೆ ಸಿಪಿ ಯೋಗೇಶ್ವರ ಪರ ನಿಶಾ ಅವರು ಭರ್ಜರಿ ಪ್ರಚಾರ ನಡೆಸಿದ್ದರು. ಅದಾಗಿ ಕೆಲವು ದಿವಸಗಳಲ್ಲಿಯೇ ಇಬ್ಬರು ಮಧ್ಯೆ ಮನಸ್ತಾಪ ಶುರುವಾಗಿತ್ತು. ಇದು ಸಹ ಸಾಕಷ್ಟು ಚರ್ಚೆ ಆಗಿತ್ತು. ಅದಾಗುತ್ತಿದ್ದಂತೆ ಲೋಕಸಭಾ ಚುನಾವಣೆ ಹೊತ್ತಿಗೆ ನಿಶಾ ಯೋಗೇಶ್ವರ ಅವರು, ಕಾಂಗ್ರೆಸ್ ಪಕ್ಷ ಸೇರಿಕೊಂಡರು.
ಕ್ಷೇತ್ರದಲ್ಲಿ ತಂದೆ ಇಮೇಜ್‌ಗೆ ಡ್ಯಾಮೇಜ್
ಇದೀಗ ಪಕ್ಷೇತರವಾಗಿ ಚನ್ನಪಟ್ಟಣದಲ್ಲಿ ಸ್ಪರ್ಧಿಸುತ್ತಿರುವ ಸಿ.ಪಿ ಯೋಗೇಶ್ವರ ವಿರುದ್ಧ ಮಗಳೇ ತಿರುಗಿ ಬಿದ್ದಿದ್ದಾರೆ. ಕ್ಷೇತ್ರದಲ್ಲಿ ತಂದೆ ಇಮೇಜ್ ಡ್ಯಾಮೇಜ್ ಮಾಡಲು ಸಜ್ಜಾಗಿದ್ದಾರೆ ಎನ್ನಲಾಗಿದೆ. ಸದ್ಯ ಚುನಾವಣೆ ಸಂದರ್ಭವಾಗಿದ್ದರಿಂದ ಕಾಂಗ್ರೆಸ್‌ಗೆ ಅಪ್ಪ ಮಗಳ ಜಗಳ ವರದಾನವಾಗುವ ಸಾಧ್ಯತೆ ಇದೆ..












Click it and Unblock the Notifications