HD Kumaraswamy: ಕಣ್ಣೀರಿಗೆ ಕಾರಣ ಹೇಳಿದ ಹೆಚ್‌ಡಿ ಕುಮಾರಸ್ವಾಮಿ
ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಕಣ್ಣೀರಿನ ಕಥೆ ಚನ್ನಪಟ್ಟಣ ಉಪಚುನಾವಣೆಯಲ್ಲಿ ಕಾಂಗ್ರೆಸ್ ವಾಗ್ದಾಳಿಗೆ ಅಸ್ತ್ರವಾಗಿದೆ. ಪ್ರಚಾರದ ವೇಳೆ ಚನ್ನಪಟ್ಟಣ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಕಣ್ಣೀರು ಹಾಕಿದ್ದು ಕಾಂಗ್ರೆಸ್ ಇದನ್ನು ಚುನಾವಣೆಯ ಗಿಮಿಕ್ ಎಂದಿದೆ. ಸಚಿವ ಜಮೀರ್ ಅಹ್ಮದ್, ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ ಸೇರಿದಂತೆ ಹಲವಾರು ಕಾಂಗ್ರೆಸ್ ನಾಯಕರು ದಳಪತಿಗಳ ಕಣ್ಣೀರಿಗೆ ವ್ಯಂಗ್ಯವಾಡಿದ್ದಾರೆ. ಇದಕ್ಕೆ ಹೆಚ್‌ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.
'ನಾನು ಹಲವಾರು ಬಾರಿ ಕಣ್ಣೀರು ಹಾಕಿದ್ದೇನೆ. ಅದು ಜನರ ಸಮಸ್ಯೆ ನೋಡಿ ಕಣ್ಣೀರು ಹಾಕಿದ್ದು, ಜನರ ಸಮಸ್ಯೆ ಕಂಡಾಗ ಮಾತೃ ಹೃದಯ ಇದ್ದವರಿಗೆ ಕಣ್ಣೀರು ಬರುತ್ತದೆ. ಕಟುಕರಿಗೆ ಯಾವ ಕಣ್ಣೀರು ಬರಲ್ಲ' ಎಂದು ಕುಮಾರಸ್ವಾಮಿ ಕಾಂಗ್ರೆಸ್‌ಗೆ ತಿರುಗೇಟು ಕೊಟ್ಟಿದ್ದಾರೆ.

ಬಲಿಪಾಡ್ಯಮಿಯ ಪರ್ವದಿನವಾದ ಇಂದು ಮೈಸೂರಿನ ಚಾಮುಂಡೇಶ್ವರಿ ದರ್ಶನ ಪಡೆದ ಕುಮಾರಸ್ವಾಮಿ ಅವರು ಬಳಿಕ ಸುತ್ತೂರು ಮಠಕ್ಕೆ ಭೇಟಿ ನೀಡಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಕಟುಕರಿಗೆ ಕಣ್ಣೀರು ಬರಲ್ಲ. ರಾಜಕಾರಣದಲ್ಲಿ ಕಟುಕರಿದ್ದಾರೆ. ಭಯ ಭಕ್ತಿ ಇಲ್ಲದವರ ಕಣ್ಣಲ್ಲಿ ನೀರು ಬರುವುದಿಲ್ಲ' ಎಂದು ಕುಟುಕಿದ್ದಾರೆ.
ಚನ್ನಪಟ್ಟಣ ಉಪಚುನಾವಣೆಗೆ ಕಾಂಗ್ರೆಸ್ ಹಾಗೂ ಮೈತ್ರಿ ಪಕ್ಷಗಳು ಅಬ್ಬರದ ಪ್ರಚಾರ ಆರಂಭಿಸಿವೆ. ಅದರಲ್ಲೂ ವಿಶೇಷವಾಗಿ ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವೆ ಆರೋಪ ಪ್ರತ್ಯಾರೋಪಗಳು ಹೆಚ್ಚಾಗಿವೆ. ಕುಮಾರಸ್ವಾಮಿ ಹಾಗೂ ನಿಖಿಲ್ ಕಣ್ಣೀರು ಚುನಾವಣೆಯ ಗಿಮಿಕ್ ಎಂದು ಕಾಂಗ್ರೆಸ್ ಪಕ್ಷದ ನಾಯಕರು ಪ್ರಚಾರದ ವೇಳೆ ಪ್ರಸ್ತಾಪಿಸುತ್ತಾ ಮತದಾರರ ಗಮನ ಸೆಳೆಯುತ್ತಿದ್ದಾರೆ.
ಚುನಾವಣೆ ಬಂದರೆ ಸಾಕು ಹೆಚ್‌ಡಿ ಕುಮಾರಸ್ವಾಮಿಗೆ ಕಣ್ಣೀರು ಬರುತ್ತದೆ. ಆದರೀಗ ಮಗ ನಿಖಿಲ್ ಕುಮಾರಸ್ವಾಮಿಗೂ ಕೂಡ ಕಣ್ಣೀರು ಬರುತ್ತಿದೆ ಎಂದು ಕೈ ನಾಯಕರು ಲೇವಾಡಿ ಮಾಡಿದ್ದರು. ಇದಕ್ಕೆ ಕುಮಾರಸ್ವಾಮಿ ಪ್ರತಿಕ್ರಿಯಿಸಿ 'ಕಾಂಗ್ರೆಸ್‌ನಲ್ಲಿ ಕಟುಕರು ಇದ್ದಾರೆ ಹೀಗಾಗಿ ಕಣ್ಣೀರು ಬರಲ್ಲ' ಎಂದು ಏಟಿಗೆ ತಿರುಗೇಟು ಕೊಟ್ಟಿದ್ದಾರೆ.
ಪ್ರಚಾರಕ್ಕೂ ಮುನ್ನ ನಿತ್ಯ ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಿರುವ ಹೆಚ್‌ಡಿ ಕುಮಾರಸ್ವಾಮಿ ಮಗನ ಗೆಲುವಿಗೆ ಪ್ರಾರ್ಥನೆ ಮಾಡುತ್ತಿದ್ದಾರೆ. ಅತ್ತ ನಿಖಿಲ್ ಪರ ಹಿರಿಯ ಬಿಜೆಪಿ ನಾಯಕರು ಪ್ರಚಾರದ ಅಖಾಡಕ್ಕೆ ಇಳಿಯುತ್ತಿದ್ದಾರೆ. ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡ ಹಾಗೂ ಕುಮಾರಸ್ವಾಮಿ ಅವರ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ನಿಖಿಲ್ ಪ್ರಚಾರದಲ್ಲಿ ತೊಡಗಿದ್ದಾರೆ.
ಇತ್ತ ಕಾಂಗ್ರೆಸ್, ಜೆಡಿಎಸ್ ನ ಕುಟುಂಬ ರಾಜಕಾರಣ ಹಾಗೂ ಜೆಡಿಎಸ್ ಸಿಂಪತಿ ಗೇಮ್ ಕಾರ್ಡ್ ಪ್ಲೇ ಮಾಡುತ್ತಿದೆ ಎಂದು ದೂರಿದೆ. ಕಾಂಗ್ರೆಸ್ ಗ್ಯಾರಂಟಿಗಳ ಜೊತೆಗೆ ಸಿಪಿ ಯೋಗೇಶ್ವರ್ ಮತದಾರರ ಬಳಿ ಮತಯಾಚನೆ ಮಾಡುತ್ತಿದ್ದಾರೆ. ನವೆಂಬರ್ 13ಕ್ಕೆ ರಾಜ್ಯದ ಶಿಗ್ಗಾಂವಿ, ಸಂಡೂರು ಹಾಗೂ ಚನ್ನಪಟ್ಟಣ ಉಪಚುನಾವಣೆ ನಡೆಯಲಿದ್ದು, 23 ನವೆಂಬರ್ ಮತ ಎಣಿಕೆಯಾಗಲಿದೆ. ಒಟ್ಟಿನಲ್ಲಿ ಚನ್ನಪಟ್ಟಣ ಈ ಬಾರಿ ಹೈವೋಲ್ಟೇಜ್ ಕ್ಷೇತ್ರವಾಗಿದ್ದು ಗೆಲುವು ಯಾರಿಗೆ ಎನ್ನುವ ಕುತೂಹಲ ಮೂಡಿದೆ.












Click it and Unblock the Notifications