Channapatna By-Election: ಚನ್ನಪಟ್ಟಣದಲ್ಲಿ ಬೆಟ್ಟಿಂಗ್ ಭರಾಟೆ; ಕೋಟಿ ರೂಪಾಯಿ, ಜಮೀನು,ಕುರಿ, ಕೋಳಿ ಬಾಜಿ
ರಾಮನಗರ, ನವೆಂಬರ್ 19: ರಾಜ್ಯದ ಮೂರು ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆ ಮುಗಿದಿದೆ. ಆದರೆ ಫಲಿತಾಂಶಕ್ಕೆ ಇನ್ನೂ ಮೂರು ದಿನಗಳು ಬಾಕಿ ಇರುವುದರಿಂದ ಸೋಲು - ಗೆಲುವಿನ ಲೆಕ್ಕಾಚಾರ ಜೋರಾಗಿದ್ದು, ಮುಖ್ಯವಾಗಿ ಚನ್ನಪಟ್ಟಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಬೆಟ್ಟಿಂಗ್ ಭರಾಟೆ ತೀವ್ರವಾಗಿದೆ. ರಾಮನಗರ ಮಾತ್ರವಲ್ಲದೆ, ಅಕ್ಕ- ಪಕ್ಕದ ಜಿಲ್ಲೆಗಳಲ್ಲಿಯೂ ಚಟುವಟಿಕೆ ಜೋರಾಗಿದೆ.
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಹೈವೋಲ್ವೇಜ್ ಕಣವಾಗಿದ್ದು, ಚನ್ನಪಟ್ಟಣದ ಫಲಿತಾಂಶದ ಮೇಲೆ ಎಲ್ಲಾರ ಕಣ್ಣು ನೆಟ್ಟಿದೆ. ಸದ್ಯದ ಬೆಟ್ಟಿಂಗ್ ಟ್ರೆಂಡ್ ಪ್ರಕಾರ ಸ್ಥಳೀಯ ಬುಕ್ಕಿಗಳಿಗೆ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಹಾಗೂ ಹೊರಗಿನವರಿಗೆ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಫೇವರಿಟ್ ಆಗಿದ್ದಾರೆ.

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಯಾವ ಪಕ್ಷದ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ ಎಂಬ ಬಗ್ಗೆ ಬೆಟ್ಟಿಂಗ್ ಪ್ರಿಯರು ರಾಜಕೀಯ, ಮಾಧ್ಯಮ ಹಾಗೂ ಸಮೀಕ್ಷೆ ಮೂಲಗಳನ್ನು ಆಧರಿಸಿ ಅಭ್ಯರ್ಥಿಗಳ 'ಗೆಲುವಿನ ಅದೃಷ್ಟದ ಮೇಲೆ ಕೋಟಿವರೆಗೆ ಹೂಡಿಕೆ ಮಾಡುತ್ತಿದ್ದಾರೆ. ಕೆಲವೆಡೆ ಜಮೀನು, ಕುರಿ, ಕೋಳಿ ಮಟ್ಟಕ್ಕೂ ಬಾಜಿ ಕಟ್ಟಲಾಗುತ್ತಿದೆ.
'ಸಮಬಲದ ಪೈಪೋಟಿಯಲ್ಲಿ ಗೆಲುವಿನ ಅಂದಾಜು ಸವಾಲಾಗಿದೆ' ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ, ಚುನಾವಣಾ ಪ್ರಚಾರದ ವೇಳೆ ಸಚಿವ ಜಮೀರ್ ಅಹಮದ್ ಖಾನ್, ಎಚ್.ಡಿ. ಕುಮಾರಸ್ವಾಮಿ ಮತ್ತು ಎಚ್.ಡಿ. ದೇವೇಗೌಡರ ಕುರಿತು ಆಡಿದ ಮಾತುಗಳಿಂದ ಲಾಭದಷ್ಟೇ ನಷ್ಟವೂ ಆಗಿದೆ. ಸಿ ಪಿ ಯೋಗೇಶ್ವರ್ ಗೆಲ್ಲುವ ವಿಶ್ವಾಸವಿತ್ತು. ಆದರೆ, ಜಮೀರ್ ಅವರ ಹೇಳಿಕೆ ಕಾಂಗ್ರೆಸ್ ಅಭ್ಯರ್ಥಿ ಸಿ ಪಿ ಯೋಗೇಶ್ವರ್ ಅವರ ಸೋಲಿಗೆ ಕಾರಣವಾಗಲಿದೆ ಎಂಬ ಮಾತುಗಳು ಕೇಳಿ ಬಂದಿದ್ದು, ನಿಖಿಲ್ ಕುಮಾರಸ್ವಾಮಿ ಅವರ ಗೆಲುವಿನ ಮೇಲೆ ಭರ್ಜರಿ ಬೆಟ್ಟಿಂಗ್ ನಡೆಯುತ್ತಿದೆ ಎಂದು ಹೇಳಲಾಗಿದೆ.
ಇನ್ನೂ ಚನ್ನಪಟ್ಟಣ ಉಪಚುನಾವಣೆಯಲ್ಲಿ ಯಾರೇ ಗೆದ್ದರೂ ಕೂದಲೆಳೆಯಷ್ಟೇ ಅಂತರವಿರಲಿದೆ. ಕಾಂಗ್ರೆಸ್ ಗಿಂತ ಬಿಜೆಪಿ, JDS ಕೆಲಸ ಚನ್ನಪಟ್ಟಣದಲ್ಲಿ ಬಹಳಷ್ಟು ವರ್ಕೌಟ್ ಆಗಿದೆ ಎಂದು ಸಿ ಪಿ ಯೋಗೇಶ್ವರ್ ಹೇಳುವ ಮೂಲಕ ಸೋಲಿನ ಸುಳಿವು ಕೊಟ್ಟಿದ್ದಾರೆ. ಅಲ್ಲದೇ ಜಮಿರ್ ಅಹಮ್ಮದ್ ಖಾನ್ ಕರಿಯ ಕುಮಾರಸ್ವಾಮಿ ಹಾಗೂ ಮುಸ್ಲಿಂರೆಲ್ಲಾ ಪೈಸೆ ಪೈಸೆ ಕೂಡಿ ಹಾಕಿ ಹೆಚ್ ಡಿ ದೇವೇಗೌಡ ಅವರ ಕುಟುಂಬವನ್ನೇ ಖರೀದಿ ಮಾಡುತ್ತೇವೆ ಎಂಬ ಹೇಳಿಕೆಗಳು ಸೋಲಿಗೆ ಕಾರಣವಾಗಬಹುದು ಎನ್ನುವ ಅರ್ಥದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ ಪಿ ಯೋಗೇಶ್ವರ್ ಹೇಳಿದ್ದಾರೆ. ಯೋಗೇಶ್ವರ್ ಈ ಮಾತು ಬೆಟ್ಟಿಂಗ್ ಲೆಕ್ಕಾಚಾರ ಬದಲಿಸಿರುವುದು ನಿಜ.
ಕಾಂಗ್ರೆಸ್ ಅಭ್ಯರ್ಥಿ ಸಿ ಪಿ ಯೋಗೇಸ್ವರ್ ಅವರು ಚುನಾವಣಾ ಫಲಿತಾಂಶಕ್ಕೆ ಮುಂಚೆಯೇ ಸೋಲು ಒಕೊಂಡಿದ್ದಾರೆ ಎಂಬ ಸಂದೇಶವನ್ನು ಅವರ ಮಾತುಗಳು ಕೇಳಿ ಬಂದಿದೆ. ಹಾಗಾಗಿ ಮಂಡ್ಯ, ಮೈಸೂರು, ಹಾಸನ, ಬೆಂಗಳೂರು ಸೇರಿದಂತೆ ಹೊರಗಿನ ಹೆಚ್ಚಿನವರು ನಿಖಿಲ್ ಕುಮಾರಸ್ವಾಮಿ ಪರ ಬೆಟ್ಟಿಂಗ್ ಕಟ್ಟುತ್ತಿದ್ದಾರೆ ಎಂದು ಸ್ಥಳೀಯ ರಾಜಕೀಯ ಮುಖಂಡರೊಬ್ಬರು ತಿಳಿಸಿದರು.
ಉಪ ಚುನಾವಣೆ ಕುರಿತು ಯೋಗೇಶ್ವರ್ ಮಾತುಗಳಲ್ಲಿರುವ ವಾಸ್ತವ ಅಲ್ಲಗಳೆಯಲು ಸಾಧ್ಯವಿಲ್ಲ. ಆದರೆ, ಹಿಂದಿನ ಚುನಾವಣೆಗಳಲ್ಲೂ ಅವರು ಸೋಲು ಒಪ್ಪಿಕೊಂಡಂತಹ ಮಾತುಗಳನ್ನಾಡಿದ್ದರು. ಅವರ ಬೆಂಬಲಿಗರು ಯೋಗೇಶ್ವರ್ ಗೆಲ್ಲುತ್ತಾರೆಂಬ ಅತೀವ ವಿಶ್ವಾಸದಲ್ಲಿ ಬೆಟ್ಟಿಂಗ್ ಕಟ್ಟುತ್ತಿದ್ದಾರೆ.
ಕ್ಷೇತ್ರದಲ್ಲಿ ಜಾತಿವಾರು ಮತ ಹಂಚಿಕೆಯ ಚರ್ಚೆ ಬಿರುಸುಗೊಂಡಿದೆ. ವಾಟ್ಸ್ ಆ್ಯಪ್ ಗ್ರೂಪ್‌ಗಳಲ್ಲಿ ಜಾತಿವಾರು ಮತ ಹಂಚಿಕೆಯ ಪಟ್ಟಿ ಹರಿದಾಡುತ್ತಿದೆ. ಯಾವ ಬೂತ್, ಮತಗಟ್ಟೆಯಲ್ಲಿ ಯಾರಿಗೆ ಎಷ್ಟು ಮತ ಬಂದಿವೆ ಎಂಬ ಪಟ್ಟಿಗಳು ಹರಿದಾಡುತ್ತಿವೆ. ಇದನ್ನು ಆಧರಿಸಿಯೇ ಅಭ್ಯರ್ಥಿಗಳ ಗೆಲುವನ್ನು ತೀರ್ಮಾನಿಸಿ ಹಲವರು ಬೆಟ್ಟಿಂಗ್ ಕಟ್ಟುತ್ತಿದ್ದಾರೆ ಎಂದು ಸ್ಥಳೀಯ ರಾಜಕೀಯ ಕಾರ್ಯಕರ್ತರು ಹೇಳಿದ್ದಾರೆ ಎಂದು ತಿಳಿದು ಬಂದಿದೆ.
ಯೂಟ್ಯೂಬ್, ಫೇಸ್‌ಬುಕ್‌ನಲ್ಲಿ ಕೆಲವರು ಫಲಿತಾಂಶದ ಕುರಿತು ಹರಿಬಿಟ್ಟಿರುವ ಬಸವ ಭವಿಷ್ಯ, ಗಿಣಿ ಭವಿಷ್ಯದಲ್ಲೂ ನಿಖಿಲ್ ಹೆಸರೇ ಮೊದಲ ಸ್ಥಾನದಲ್ಲಿದೆ. ಕೆಲ ಮತಗಟ್ಟೆ ಸಮೀಕ್ಷೆಯಲ್ಲೂ ನಿಖಿಲ್ ಮುಂದಿದ್ದಾರೆ. ಶಾಸ್ತ್ರ-ಸಮೀಕ್ಷೆ ನಂಬುವವರು ನಿಖಿಲ್ ಪರವಾಗಿಯೇ ಬೆಟ್ಟಿಂಗ್ ಹಾಕುತ್ತಿದ್ದಾರೆ. ಸದ್ಯ ನಿಖಿಲ್ ಅವರೇ ಟ್ರೆಂಡಿಂಗ್ ನಲ್ಲಿದ್ದಾರೆ ಎಂದು ಹೇಳಲಾಗಿದೆ.












Click it and Unblock the Notifications