ಸಿಇಟಿಯಲ್ಲಿ ಪಠ್ಯೇತರ ಪ್ರಶ್ನೆ, ಸಮಿತಿ ರಚನೆಯಲ್ಲಿ ಹಸ್ತಕ್ಷೇಪ ಮಾಡದ ಕೋರ್ಟ್
ಬೆಂಗಳೂರು, ಜುಲೈ 16: ಏಪ್ರಿಲ್‌ನಲ್ಲಿ ನಡೆದ ಕರ್ನಾಟಕ ಸಿಇಟಿ ಪರೀಕ್ಷೆ-2024ರಲ್ಲಿ ಕೇಳಲಾದ ಪಠ್ಯೇತರ ಪ್ರಶ್ನೆಗಳನ್ನು ಪರಿಶೀಲಿಸಲು ರಾಜ್ಯ ಸರ್ಕಾರ ರಚಿಸಿರುವ ಸಮಿತಿಯಲ್ಲಿ ಹಸ್ತಕ್ಷೇಪ ಮಾಡಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ.
ಬೆಂಗಳೂರಿನ ದಾಸರಹಳ್ಳಿ ತನ್ಮಯ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ಸುನೀಲ್ ದತ್ ಯಾದವ್ ಅವರ ಏಕಸದಸ್ಯ ಪೀಠ ಅರ್ಜಿ ಇತ್ಯರ್ಥಪಡಿಸಿ ಆದೇಶಿಸಿದೆ.
ನ್ಯಾಯಾಲಯದ ಆದೇಶವೇನು?: ದಾಖಲೆಗಳನ್ನು ಪರಿಶೀಲಿಸಿದ ಹಾಗೂ ವಾದ ಪ್ರತಿವಾದ ಆಲಿಸಿದ ನ್ಯಾಯಪೀಠ, ಸರ್ಕಾರದ ಈ ನಿರ್ಧಾರವೂ ತಜ್ಞರ ಅಭಿಪ್ರಾಯದಿಂದ ರೂಪಗೊಂಡಿದೆ. ಈ ಹಿನ್ನೆಲೆ ನ್ಯಾಯಾಲಯ ಇದರ ಸಿಂಧುತ್ವವನ್ನು ಪ್ರಶ್ನಿಸುವಲ್ಲಿ ಮಧ್ಯ ಪ್ರವೇಶಿಸಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಹೇಳಿದೆ. ಅಲ್ಲದೆ, ಭವಿಷ್ಯದಲ್ಲಿ ಇಂತಹ ತಪ್ಪುಗಳು ಮರುಕಳಿಸದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (ಕೆಇಎ), ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

ಈ ಬಾರಿಯ ಸಿಇಟಿ ಪರೀಕ್ಷೆಯಲ್ಲಿ ಸುಮಾರು 3 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರು. ಪರೀಕ್ಷೆಯ ಅನುಸಾರ, ಸಿಇಟಿಯ ಪಠ್ಯಕ್ರಮದ ಹೊರತಾಗಿ ಹಲವು ಪಠ್ಯೇತರ ಪ್ರಶ್ನೆಗಳು ಕೇಳಲಾಗಿತ್ತಿ. ಈ ಬಗ್ಗೆ ವಿದ್ಯಾರ್ಥಿಗಳ ಪೋಷಕರು ಮತ್ತು ಶಿಕ್ಷಕರು ದೂರಿದ್ದರು.
ಈ ದೂರಿನ ಅನ್ವಯ ಸರ್ಕಾರವು ಸಮಿತಿಯನ್ನು ರಚಿಸಿತ್ತು. ಪಠ್ಯಕ್ರಮದಿಂದ ಹೊರಗಿರುವ ಪ್ರಶ್ನೆಗಳನ್ನು ಕೇಳಿರುವ ಸಂಬಂಧ ಕೇಳಿಬಂದ ದೂರುಗಳನ್ನು ಪರಿಗಣಿಸಿದ ನಂತರ ರಾಜ್ಯ ಸರ್ಕಾರ ಈ ಕ್ರಮ ತೆಗೆದುಕೊಂಡಿದೆ. ಹಾಗಾಗಿ ಅರ್ಜಿದಾರರ ಮನವಿಯನ್ನು ಮಾನ್ಯ ಮಾಡಲು ಪೀಠ ನಿರಾಕರಿಸಿದೆ. ಪ್ರಸ್ತುತ ವರ್ಷಕ್ಕೆ ಸಂಬಂಧಿಸಿದಂತೆ ಆ ನಿಟ್ಟಿನಲ್ಲಿ ಯಾವುದೇ ನಿರ್ದೇಶನವನ್ನು ರವಾನಿಸುವುದು ಪ್ರಾಯೋಗಿಕವಾಗಿರುವುದಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ಅರ್ಜಿದಾರರ ವಾದವೇನು?: ಅರ್ಜಿದಾರರು, ತಾನು ದ್ವಿತೀಯ ಪಿಯುಸಿ ಸಿಬಿಎಸ್ ಪಠ್ಯಕ್ರಮದಲ್ಲಿ ವ್ಯಾಸಂಗ ಮಾಡಿದ್ದು, ಈ ಬಾರಿ ನಡೆದ ಸಿಇಟಿ ಪರೀಕ್ಷೆಯಿಂದಾಗಿ ವಿದ್ಯಾರ್ಥಿಯಾದ ನನಗೆ ಅನೇಕ ರೀತಿಯಲ್ಲಿ ಗೊಂದಲ ಉಂಟಾಗಿದೆ.
ಪಠ್ಯೇತರ ಪ್ರಶ್ನೆಗಳನ್ನು ಶ್ರೇಯಾಂಕ ಪ್ರಕಟಣೆ ವೇಳೆ ಪರಿಗಣಿಸುವುದಿಲ್ಲ ಎಂದು ಈ ಮೊದಲೇ ತಿಳಿದಿದ್ದರೆ ಆ ಪ್ರಶ್ನೆಗಳಿಗೆ ನೀಡುವ ಸಮಯವನ್ನು ಇತರ ಪ್ರಶ್ನೆಗಳಿಗೆ ಉತ್ತರಿಸಲು ವಿನಿಯೋಗಿಸುತ್ತಿದ್ದೆ. 4 ವಿಷಯಗಳಲ್ಲಿ ಹೊರತಾದ ಪ್ರಶ್ನೆಗಳು ಪ್ರಮುಖವಾಗಿದ್ದು ಸಾಕಷ್ಟು ಸಮಯವನ್ನು ನೀಡಿರುವುದಾಗಿ ಪೀಠದ ಗಮನಕ್ಕೆ ತಂದರು.
ಅಲ್ಲದೆ, ಸಿಇಟಿ ಪರೀಕ್ಷೆಯಲ್ಲಿ ಕೇಳಲಾದ 180 ಪ್ರಶ್ನೆಗಳನ್ನು ಒಳಗೊಂಡಂತೆ ಸಿದ್ಧಪಡಿಸಿದ ಶ್ರೇಯಾಂಕ ಪಟ್ಟಿಯನ್ನು ಆಧರಿಸಿ ಎಂಜಿನಿಯರಿಂಗ್ ಸೀಟುಗಳಿಗೆ ಕೌನ್ಸೆಲಿಂಗ್ ನಡೆಸಲು ಕೆಇಎಗೆ ನಿರ್ದೇಶನ ನೀಡಬೇಕೆಂದು. ಪಿಯುಸಿ ಪತ್ರಿಕೆಗಳಿಗಿಂತ ಸಿಬಿಎಸ್ ಈ ಪತ್ರಿಕೆಗಳ ಕಷ್ಟದ ಮಟ್ಟವನ್ನು ಪರಿಗಣಿಸಿ ಶ್ರೇಯಾಂಕ ಪಟ್ಟಿಯನ್ನು ಲೆಕ್ಕಾಚಾರ ಮಾಡುವಾಗ ಅವರಿಗೆ ಹೆಚ್ಚಿನ ಅಂಕಗಳನ್ನು ಒದಗಿಸಲು ಸೂಚನೆ ನೀಡಬೇಕು ಎಂದು ಮನವಿ ಮಾಡಿದ್ದರು.
ಈ ವೇಳೆ ರಾಜ್ಯ ಸರ್ಕಾರದ ಪರ ವಕೀಲರು, ಪಠ್ಯಕ್ರಮವನ್ನು ಈಗಾಗಲೇ ವಿದ್ಯಾರ್ಥಿಗಳಿಗೆ ತಿಳಿಸಲಾಗಿದ್ದು, ಅದರಂತೆ ಪ್ರಶ್ನೆಗಳನ್ನು ಹೊರಗಿಡುವ ಕ್ರಮವನ್ನು ಆಶ್ರಯಿಸಲಾಗಿದೆ ಎಂದು ಅರ್ಜಿದಾರರ ವಾದವನ್ನು ಬಲವಾಗಿ ತಳ್ಳಿಹಾಕಿದ್ದರು.












Click it and Unblock the Notifications