CET 2024; ಅರ್ಜಿ ಸಲ್ಲಿಕೆ ಬಗ್ಗೆ ಕೆಇಎ ಕೆಲವು ಸ್ಪಷ್ಟನೆಗಳು
ಬೆಂಗಳೂರು, ಜನವರಿ 21: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಸಿಇಟಿ 2024ರ ಪರೀಕ್ಷೆ ದಿನಾಂಕವನ್ನು ಘೋಷಣೆ ಮಾಡಿದೆ. ಪರೀಕ್ಷೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ಅಭ್ಯರ್ಥಿಗಳಿಗೆ ಕೆಲವು ಸ್ಪಷ್ಟನೆಗಳನ್ನು ಕೆಇಎ ನೀಡಿದೆ.
ಸಿಇಟಿ ಪರೀಕ್ಷೆಗೆ ಅರ್ಜಿಗಳನ್ನು ಸಲ್ಲಿಕೆ ಮಾಡುತ್ತಿರುವ ಅಭ್ಯರ್ಥಿಗಳು ಕೆಲವು ಸ್ಪಷ್ಟನೆಗಳನ್ನು ಕೇಳಿದ್ದರು. ಆದ್ದರಿಂದ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕರು ಸ್ಪಷ್ಟನೆ ನೀಡಿದ್ದಾರೆ. ಸಿಇಟಿ 2024 ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕೋರಿರುವ ಮಾಹಿತಿಗೆ ಸ್ಪಷ್ಟನೆ ಎಂಬ ವಿಷಯವನ್ನು ಇದು ಒಳಗೊಂಡಿದೆ.

ಸ್ಪಷ್ಟನೆಗಳು ಏನು?
* ಮಾಜಿ ಸೈನಿಕರ ಪ್ರಮಾಣ ಪತ್ರವನ್ನು ಪಡೆಯಲು ಸಿಇಟಿ ಅರ್ಜಿ ಸಂಖ್ಯೆ ಅಥವಾ ತಮ್ಮ ಆರ್ಮಿ ಸಂಖ್ಯೆಯನ್ನು ಸೇವಾ ಸಿಂಧು ಪೋರ್ಟಲ್‌ನಲ್ಲಿ ನಮೂದಿಸಿ ಮಾಜಿ ಸೈನಿಕರ ಪ್ರಮಾಣ ಪತ್ರವನ್ನು ಪಡೆಯಬಹುದು.
* ಕರ್ನಾಟಕದಲ್ಲಿ ಏಳು ವರ್ಷ ವ್ಯಾಸಂಗ ಮಾಡಿರುವ ಅಭ್ಯರ್ಥಿಗಳು 10ನೇ ತರಗತಿ ತೇರ್ಗಡೆಯಾಗಿದ್ದಲ್ಲಿ 11ನೇ ಮತ್ತು 12ನೇ ತರಗತಿಗಳ ವ್ಯಾಸಂಗ ಪ್ರಮಾಣ ಪತ್ರವನ್ನು ಅಪ್‌ಲೋಡ್ ಮಾಡುವ ಅವಶ್ಯಕತೆ ಇರುವುದಿಲ್ಲ.
ಮೇಲಿನ ಎಲ್ಲಾ ದಾಖಲೆಗಳು ಸ್ಯಾಟ್ಸ್ ಡೇಟಾಬೇಸ್‌ನಿಂದ ಬಂದಿದ್ದಲ್ಲಿ ಯಾವುದೇ ದಾಖಲಾತಿಗಳನ್ನು ಅಪ್‌ಲೋಡ್ ಮಾಡುವ ಅವಶ್ಯಕತೆ ಇರುವುದಿಲ್ಲ.
* ಧಾರ್ಮಿಕ/ ಭಾಷಾ ಅಲ್ಪಸಂಖ್ಯಾತ ಮೀಸಲಾತಿ ಕೋರುವ ಅಭ್ಯರ್ಥಿಗಳು ಒಂದರಿಂದ 10ನೇ ತರಗತಿಯವರೆಗೆ ವ್ಯಾಸಂಗ ಮಾಡಿರುವ ದಾಖಲಾತಿಗಳನ್ನು ಸಲ್ಲಿಸಬೇಕು.
* ಅಭ್ಯರ್ಥಿಗಳು ಅಪ್‌ಲೋಡ್ ಮಾಡುವ ವ್ಯಾಸಂಗ ಪ್ರಮಾಣ ಪತ್ರಗಳು ಪರಿಶೀಲನೆಗೆ ಆನ್‌ಲೈನ್ ಮುಖಾಂತರ ಬಿಇಒ ಅಥವಾ ಡಿಡಿಪಿಯು ಕಛೇರಿಗೆ ಹೋಗುವ ಕಾರಣ ಕಾಲೇಜು/ ಶಾಲೆಗಳಿಂದ ವ್ಯಾಸಂಗ ಪ್ರಮಾಣ ಪತ್ರಗಳನ್ನು ಪಡೆದರೆ ಸಾಕು. ಬಿಇಒ ಅಥವಾ ಡಿಡಿಪಿಯುರವರ ಮೇಲು ಸಹಿ ಅವಶ್ಯಕತೆ ಇರುವುದಿಲ್ಲ.
ದಿನಾಂಕ 19/01/2024 ಸದರಿ ವಿಷಯಗಳ ಕುರಿತು ನೀಡಲಾಗಿರುವ ಸೂಚನೆಗಳನ್ನು ಹಿಂಪಡೆಯಲಾಗಿದೆ.
ಪರೀಕ್ಷೆ ದಿನಾಂಕ ಬದಲು; ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಸಿಇಟಿ 2024ರ ಪರೀಕ್ಷೆಯನ್ನು ಏಪ್ರಿಲ್ 20 ಮತ್ತು 21ರಂದು ನಿಗದಿ ಮಾಡಿತ್ತು. ಬಳಿಕ ವೇಳಾಪಟ್ಟಿಯನ್ನು ಪರಿಷ್ಕರಣೆ ಮಾಡಿದೆ. ಈಗ ಪರೀಕ್ಷೆಗಳು ಏಪ್ರಿಲ್ 18, 19 ಮತ್ತು 20ರಂದು ನಡೆಯಲಿದೆ.
ಸಿಇಟಿ ಪರೀಕ್ಷೆ 2024ಕ್ಕೆ ಅರ್ಜಿಗಳನ್ನು ಸಲ್ಲಿಕೆ ಮಾಡಲು 10/2/2024ರ ರಾತ್ರಿ 11.59 ಕೊನೆಯ ದಿನಾಂಕವಾಗಿದೆ. ಅರ್ಜಿ ಶುಲ್ಕವನ್ನು ಪಾವತಿ ಮಾಡಲು 14/2/2024 ಕೊನೆಯ ದಿನ. ಏಪ್ರಿಲ್ 7ರಂದು ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.
ಏಪ್ರಿಲ್ 18ರಂದು ಬೆಳಗ್ಗೆ 10.30 ರಿಂದ ಜೀವಶಾಸ್ತ್ರ, ಮಧ್ಯಾಹ್ನ 2.30ರಿಂದ ಗಣಿತ, ಏಪ್ರಿಲ್ 19ರಂದು ಬೆಳಗ್ಗೆ 10.30ರಿಂದ ಭೌತಶಾಸ್ತ್ರ ಮತ್ತು ಮಧ್ಯಾಹ್ನ ರಸಾಯನ ಶಾಸ್ತ್ರ ಪರೀಕ್ಷೆಗಳನ್ನು ತಲಾ 60 ಅಂಕಗಳಿಗೆ ನಡೆಸಲಾಗುತ್ತದೆ.
ಹೊರನಾಡು ಮತ್ತು ಗಡಿನಾಡು ಕನ್ನಡಿಗ ವಿದ್ಯಾರ್ಥಿಗಳಿಗೆ ಏಪ್ರಿಲ್ 20ರಂದು ಬೆಂಗಳೂರು, ಬೀದರ್, ಬೆಳಗಾವಿ, ಬಳ್ಳಾರಿ, ವಿಜಯಪುರ ಮತ್ತು ಮಂಗಳೂರು ಕೇಂದ್ರಗಳಲ್ಲಿ ಕನ್ನಡ ಭಾಷಾ ಪರೀಕ್ಷೆಯನ್ನು ನಡೆಸಲಾಗುತ್ತದೆ.
ಅರ್ಜಿಗಳನ್ನು ತುಂಬುವ ವಿಧಾನ, ಪರೀಕ್ಷೆಯ ಕುರಿತು ಇತರ ಮಾಹಿತಿಗಾಗಿ ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.












Click it and Unblock the Notifications