ECI ಅವ್ಯವಸ್ಥೆ ಹೊಣೆ ಪಿಎಂ, ಗೃಹ ಸಚಿವರು ಹೊರಬೇಕು: ದಲಿತರ ಬಲಿಪಶು ಹೇಳಿಕೆಗೆ ಶಿವರಾಜ್ ತಂಗಡಗಿ ಗರಂ
ಕೊಪ್ಪಳ: ಕೇಂದ್ರ ಚುನಾವಣಾ ಆಯುಕ್ತರ ರಾಜೀನಾಮೆ ಮಾತ್ರವೇ ಸಾಲದು. ಚುನಾವಣಾ ವ್ಯವಸ್ಥೆಯ ಮೇಲೆಯೇ ಅನುಮಾನ, ಪ್ರಶ್ನೆಗಳು ಮೂಡಿರುವ ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಒತ್ತಾಯಿಸಿದರು. ಜೊತೆಗೆ ಜ್ಞಾನೇಶ್ ಕುಮಾರ್ ದಲಿತ ವಿಚಾರವಾಗಿ ಬಿಜೆಪಿ ನಾಯಕರಿಗೆ ತಿರುಗೇಟು ಕೊಟ್ಟರು.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಕೊಪ್ಪಳ ಜಿಲ್ಲಾ ಕಾಂಗ್ರೆಸ್ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಯಿತು. ಇದರಲ್ಲಿ ಪಾಲ್ಗೊಂಡು ಸಚಿವರು ಮಾತನಾಡಿದರು. ಎಸ್‌ಐಆರ್ (ವಿಶೇಷ ತೀವ್ರ ಮತದಾರರ ಪರಿಷ್ಕರಣೆ) ಪ್ರಕ್ರಿಯೆ ಸೇರಿದಂತೆ ಚುನಾವಣಾ ವ್ಯವಸ್ಥೆಯ ಕುರಿತು ಗಂಭೀರ ಅನುಮಾನಗಳು ಮೂಡಿವೆ. ಈ ಹಿನ್ನೆಲೆ ಪ್ರಧಾನಿ, ಕೇಂದ್ರ ಗೃಹ ಸಚಿವರು ಹೊಣೆ ಹೊತ್ತು ರಾಜೀನಾಮೆ ನೀಡಬೇಕು.

ಎಸ್‌ಐಆರ್ ಹೆಸರಿನಲ್ಲಿ ಅರ್ಹ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕುವ ಆತಂಕವಿದೆ. ಕಾಂಗ್ರೆಸ್ ಮತದಾರರ ಹೆಸರುಗಳನ್ನು ಉದ್ದೇಶಪೂರ್ವಕವಾಗಿ ತೆಗೆದು ಹಾಕಲಾಗುತ್ತಿದೆ ಎಂಬ ಆರೋಪಗಳನ್ನು ನಾವು ಹಿಂದಿನಿಂದಲೂ ಮಾಡುತ್ತಾ ಬಂದಿದ್ದೇವೆ. ಬಿಜೆಪಿ ಶಾಸಕರೊಬ್ಬರು ತಮಗೆ ಬೇಡವಾದ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದು ಹಾಕುವಂತೆ ಪತ್ರ ಬರೆದಿರುವುದು ಈ ಕುರಿತು ಮತ್ತಷ್ಟು ಪ್ರಶ್ನೆಗಳನ್ನು ಹುಟ್ಟು ಹಾಕಿದೆ ಎಂದು ಹೇಳಿದರು.
ಪ್ರಜಾಪ್ರಭುತ್ವದ ಹಕ್ಕು ಕಸಿಯುವ ಪ್ರಯತ್ನ
ಮತ ಕಳವು ಎಂದರೆ ಕೇವಲ ಒಂದು ಮತವನ್ನು ಕಸಿಯುವುದಲ್ಲ. ಅದು ಪ್ರಜಾಪ್ರಭುತ್ವದ ಹಕ್ಕನ್ನೇ ಕಸಿಯುವ ಪ್ರಯತ್ನ. ಚುನಾವಣಾ ಆಯೋಗ ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕು. ಕೇಂದ್ರ ಸರ್ಕಾರದ ಪ್ರಭಾವಕ್ಕೆ ಒಳಗಾಗಿ ಕಾರ್ಯ ನಿರ್ವಹಿಸುವಂತಾಗಬಾರದು.
ಇವಿಎಂ ಹಾಗೂ ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಸಾರ್ವಜನಿಕರಲ್ಲಿ ಮೂಡಿರುವ ಅನುಮಾನಗಳಿಗೆ ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗ ಪಾರದರ್ಶಕವಾಗಿ ಉತ್ತರಿಸಬೇಕು. ಚುನಾವಣಾ ವ್ಯವಸ್ಥೆಯ ವಿಶ್ವಾಸಾರ್ಹತೆಯನ್ನು ಕಾಪಾಡುವ ಜವಾಬ್ದಾರಿ ಕೇಂದ್ರ ಸರ್ಕಾರದ್ದಾಗಿದೆ ಎಂದು ತಿಳಿಸಿದರು.
ರಾಮನ ಹೆಸರಿನಲ್ಲಿ ಅಧಿಕಾರಕ್ಕೆ ಬಂದು ರಾಮನ ಹುಂಡಿಗೆ ಕೈ ಹಾಕಿದರು
ಸೋಲಿನ ಭೀತಿಯಿಂದ ಮತ ಕಳವು ಮಾಡುವ ಪರಿಸ್ಥಿತಿಗೆ ಬಿಜೆಪಿ ಬಂದಿದೆ. ರಾಮನ ಹೆಸರಿನಲ್ಲಿ ಅಧಿಕಾರಕ್ಕೆ ಬಂದವರು ರಾಮನ ಹುಂಡಿಗೆ ಕೈ ಹಾಕಿದ್ದಾರೆ. ಮುಂದೆ ರಾಮನನ್ನೇ ಬಿಜೆಪಿಗರು ಕದ್ದರು ಅಚ್ಚರಿಪಡಬೇಕಿಲ್ಲ. ಬಿಜೆಪಿಯವರು ಇವರು ನಿಜವಾದ ಕಳ್ಳರು. ಅಭಿವೃದ್ಧಿ ಕುರಿತು ಮಾತನಾಡಲು ವಿಷಯವಿಲ್ಲದೇ ಬಿಜೆಪಿಯವರು ಪಾದಯಾತ್ರೆ ಇನ್ನಿತರ ವಿಚಾರಗಳನ್ನು ಮುಂದಿಟ್ಟುಕೊಂಡು ಜನರ ಗಮನ ಬೇರೆಡೆ ಸೆಳೆಯುತ್ತಿದ್ದಾರೆ ಎಂದು ಸಚಿವರು ಟೀಕಿಸಿದರು.
ಜ್ಞಾನೇಶ್ ದಲಿತರಾದ್ರೆ, ಬಿ.ನಾಗೇಂದ್ರ ಏನು?
ಬಿಜೆಪಿ ಸಂಸದ ಗೋವಿಂದ ಕಾರಜೋಳ ಅವರು ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ಅವರು ದಲಿತರು ಎಂಬ ಕಾರಣಕ್ಕೆ ಕಾಂಗ್ರೆಸ್ ಆರೋಪ ಮಾಡುತ್ತಿದೆ ಎಂದು ಹೇಳಿರುವುದು ಸರಿಯಲ್ಲ ಎಂದಿದ್ದಾರೆ. ಹಾಗಾದರೆ ಬಿ. ನಾಗೇಂದ್ರ ಅವರು ಏನು? ಅವರನ್ನು ರಾಜೀನಾಮೆ ನೀಡುವಂತೆ ಒತ್ತಾಯಿಸಿದ್ದೇಕೆ? ಎಂದು ಸಚಿವರು ತಿರುಗೇಟು ಕೊಟ್ಟರು.
ದೇಶಕ್ಕೆ ಅಪಚಾರ ಮಾಡಿದವರನ್ನು ರಕ್ಷಿಸಿ, ಯಾವುದೇ ತಪ್ಪು ಮಾಡದ ದಲಿತರನ್ನು ಬಲಿಪಶು ಮಾಡಲಾಗಿದೆ ಎಂಬ ಆರೋಪಗಳಿಗೆ ಬಿಜೆಪಿ ಉತ್ತರ ನೀಡಬೇಕು ಎಂದು ಆಗ್ರಹಿಸಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳಿಂದ ಬಡವರು ನೆಮ್ಮದಿಯಿಂದ ಬದುಕುತ್ತಿದ್ದಾರೆ. ಜನಪರ ಆಡಳಿತ ಮತ್ತು ಅಭಿವೃದ್ಧಿ ಕುರಿತು ಮಾತನಾಡಲು ಬಿಜೆಪಿ ಬಳಿ ವಿಷಯವಿಲ್ಲ. ಮುಂದಿನ ದಿನಗಳಲ್ಲಿ ದೇಶದ ಜನರು ಬಿಜೆಪಿಗೆ ತಕ್ಕ ರಾಜಕೀಯ ಉತ್ತರ ನೀಡಲಿದ್ದಾರೆ ಎಂದು ಸಚಿವ ಶಿವರಾಜ್ ತಂಗಡಗಿ ಹೇಳಿದರು.


Click it and Unblock the Notifications
