ಪರೇಶ್ ಮೇಸ್ತ ಸಾವಿನ ಪ್ರಕರಣ ಸಿಬಿಐ ತನಿಖೆಗೆ
ಬೆಂಗಳೂರು, ಡಿಸೆಂಬರ್ 13 : ರಾಜ್ಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿರುವ ಪರೇಶ್ ಮೇಸ್ತ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲಾಗುತ್ತದೆ. ಬಿಜೆಪಿ ನಾಯಕರು ಸಿಬಿಐ ಅಥವ ಎನ್‌ಐಎ ತನಿಖೆಗೆ ಒತ್ತಾಯಿಸಿದ್ದರು.
ಬುಧವಾರ ಬೆಂಗಳೂರಿನಲ್ಲಿ ಮಾತನಾಡಿದ ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರು ಈ ಕುರಿತು ಮಾಹಿತಿ ನೀಡಿದರು. 'ಪ್ರಕರಣದ ಸತ್ಯಾಂಶ ಹೊರಬರಲಿ ಎಂಬ ಕಾರಣಕ್ಕೆ ಸಿಬಿಐ ತನಿಖೆಗೆ ವಹಿಸಲಾಗುತ್ತದೆ' ಎಂದು ಹೇಳಿದರು.

'ಬಿಜೆಪಿಯವರ ಒತ್ತಾಯಕ್ಕೆ ಮಣಿದು ಪ್ರಕರಣವನ್ನು ಸಿಬಿಐಗೆ ವಹಿಸುತ್ತಿಲ್ಲ. ಪರೇಶ್ ಮೇಸ್ತ ತಂದೆ-ತಾಯಿ ಒತ್ತಾಯಕ್ಕೆ ಮಣಿದು ಸಿಬಿಐ ತನಿಖೆಗೆ ವಹಿಸಲಾಗುತ್ತಿದೆ' ಎಂದು ರಾಮಲಿಂಗಾ ರೆಡ್ಡಿ ಸ್ಪಷ್ಟಪಡಿಸಿದರು.
ಹೊನ್ನಾವರ ಮೂಲದ ಪರೇಶ್ ಮೇಸ್ತ ಶವ ಡಿಸೆಂಬರ್ 8ರಂದು ಕೆರೆಯಲ್ಲಿ ಪತ್ತೆಯಾಗಿತ್ತು. ಹೊನ್ನಾವರದಲ್ಲಿ ಗಲಭೆ ನಡೆದ ಬಳಿಕ ಪರೇಶ್ ಮೇಸ್ತ ಕಾಣೆಯಾಗಿದ್ದ. ಪರೇಶ್ ಮೇಸ್ತನನ್ನು ಕೊಲೆ ಮಾಡಲಾಗಿದೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದರು.

ಪರೇಶ್ ಮೇಸ್ತ ಸಾವು ಖಂಡಿಸಿ ಉತ್ತರ ಕನ್ನಡದಲ್ಲಿ ಭಾರೀ ಪ್ರತಿಭಟನೆಗಳು ನಡೆದಿದ್ದವು. ಕುಮಟಾ, ಶಿರಸಿಯಲ್ಲಿ ಹಿಂದೂಪರ ಸಂಘಟನೆಗಳ ಪ್ರತಿಭಟನೆ ವೇಳೆ ಹಿಂಸಾಚಾರ ನಡೆದಿತ್ತು.
ಹಿಂಸಾಚಾರದ ಹಿನ್ನಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಮೂರು ದಿನಗ ಕಾಲ ನಿಷೇಧಾಜ್ಞೆ ಹೇರಲಾಗಿದೆ. ಗುರುವಾರದ ತನಕ ಜಿಲ್ಲೆಯ ಎಲ್ಲಾ ತಾಲೂಕುಗಳ ವ್ಯಾಪ್ತಿಯಲ್ಲಿ ಸೆಕ್ಷನ್ 144 ಅನ್ವಯ ನಿಷೇಧಾಜ್ಞೆ ಇರುತ್ತದೆ.












Click it and Unblock the Notifications