ತಮಿಳುನಾಡಿಗೆ ಕಾವೇರಿ ನೀರು; ಸುಪ್ರೀಂಗೆ ಕರ್ನಾಟಕದಿಂದ ಅರ್ಜಿ
ಬೆಂಗಳೂರು, ಆಗಸ್ಟ್ 20: ಈ ಬಾರಿ ನೈಋತ್ಯ ಮುಂಗಾರು ಮಳೆಯ ಕೊರತೆ ಅಂತರರಾಜ್ಯಗಳ ನಡುವಿನ ಜಲವಿವಾದಕ್ಕೆ ಮತ್ತೆ ಜೀವ ನೀಡಿದೆ. ಕಾವೇರಿ ನದಿ ನೀರು ಹರಿಸಲು ಕರ್ನಾಟಕಕ್ಕೆ ನಿರ್ದೇಶನ ನೀಡುವಂತೆ ಕೋರಿ ತಮಿಳುನಾಡು ಸುಪ್ರೀಂಕೋರ್ಟ್ ಮೊರೆ ಹೋಗಿದೆ.
ಮುಂಗಾರು ಮಳೆಯ ಕೊರತೆಯ ಕಾರಣ ಕೆಆರ್‌ಎಸ್ ಜಲಾಶಯ ಭರ್ತಿಯಾಗಿಲ್ಲ. ಆದರೆ ಡ್ಯಾಂನಿಂದ 15,576 ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಆದರೆ ತಮಿಳುನಾಡು ಸರ್ಕಾರ ಜೂನ್, ಜುಲೈ ಮತ್ತು ಆಗಸ್ಟ್ ತಿಂಗಳ ನೀರು ಬಿಡುಗಡೆಗಾಗಿ ಆಗ್ರಹಿಸಿದೆ.

ಕೆಆರ್‌ಎಸ್ ಜಲಾಶಯದ ಒಟ್ಟು ನೀರು ಸಂಗ್ರಹ ಸಾಮರ್ಥ್ಯ 49.45 ಟಿಎಂಸಿ ಅಡಿಯಾಗಿದೆ. ಡ್ಯಾಂನಲ್ಲಿ ಪ್ರಸ್ತುತ 29.43 ಟಿಎಂಸಿ ಅಡಿ ನೀರಿನ ಸಂಗ್ರಹವಿದೆ. ನೀರಿನ ಕೊರತೆಯ ನಡುವೆಯೇ ತನ್ನ ಪಾಲಿನ ನೀರಿಗಾಗಿ ತಮಿಳುನಾಡು ಬೇಡಿಕೆ ಇಟ್ಟಿದೆ.
ಸುಪ್ರೀಂಕೋರ್ಟ್‌ಗೆ ಅರ್ಜಿ; ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ ನಡೆಯಿತು. ಸಭೆಯಲ್ಲಿ ತಮಿಳುನಾಡು ಕಾವೇರಿ ನೀರಿಗಾಗಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಿರುವ ವಿಚಾರ ಚರ್ಚೆಯಾಯಿತು.
ಸಭೆಯ ಬಳಿಕ ಪತ್ರಿಕಾಗೋಷ್ಠಿ ನಡೆಸಿದ ಸಚಿವ ಎಚ್. ಕೆ. ಪಾಟೀಲ, "ಕಾವೇರಿ ನೀರು ಹರಿಸುವಂತೆ ಆದೇಶ ನೀಡಲು ಕೋರಿ ತಮಿಳುನಾಡು ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಗೆ ಪ್ರತಿಯಾಗಿ ಮನವಿ ಸಲ್ಲಿಕೆ ಮಾಡಲು ನಿರ್ಧರಿಸಲಾಗಿದೆ" ಎಂದು ಹೇಳಿದರು.
"ಈ ಪ್ರಕರಣದ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಲು ಸಭೆಗೆ ಅಡ್ವೊಕೇಟ್ ಜನರಲ್ ಅವರಿಗೂ ಆಹ್ವಾನ ನೀಡಲಾಗಿತ್ತು. ವಸ್ತುಸ್ಥಿತಿ ಆಧರಿಸಿ ಸೋಮವಾರವೇ ಸುಪ್ರೀಂಕೋರ್ಟ್‌ಗೆ ಅರ್ಜಿಯನ್ನು ಸಲ್ಲಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು" ಎಂದು ಸಚಿವರು ತಿಳಿಸಿದರು.
ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರದಲ್ಲಿ ಪ್ರತಿಪಕ್ಷಗಳ ಟೀಕೆ, ಪ್ರತಿಭಟನೆಗಳ ಬಗ್ಗೆ ಮಾತನಾಡಿದ ಸಚಿವರು, "ಕಾವೇರಿ ನದಿ ನೀರು ವಿವಾದಕ್ಕೆ ಸಂಬಂಧಿಸಿದಂತೆ ಸರ್ವಪಕ್ಷಗಳ ಸಭೆಯನ್ನು ನಡೆಸುವುದಾಗಿ ಮುಖ್ಯಮಂತ್ರಿಗಳು ಈಗಾಗಲೇ ಹೇಳಿದ್ದಾರೆ. ಯಾರೂ ಸಹ ಹೋರಾಟ, ಪ್ರತಿಭಟನೆ ನಡೆಸುವ ಅಗತ್ಯವಿಲ್ಲ" ಎಂದರು.
ಡಿ. ಕೆ. ಶಿವಕುಮಾರ್ ಪ್ರತಿಕ್ರಿಯೆ; ತಮಿಳುನಾಡು ಸರ್ಕಾರ ಸುಪ್ರೀಂಕೋರ್ಟ್ ಮೊರೆ ಹೋದ ಬಗ್ಗೆ ಜಲಸಂಪನ್ಮೂಲ ಸಚಿವ ಡಿ. ಕೆ. ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದರು. '15 ದಿನಗಳ ವರೆಗೆ ಪ್ರತಿದಿನ 10 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ತಮಿಳುನಾಡು ಸರ್ಕಾರವು ಕೋರ್ಟ್ ಮೊರೆ ಹೋಗಿದೆ ಆದರೆ ಈ ಬಾರಿ ರಾಜ್ಯದಲ್ಲಿ ವಾಡಿಕೆಯಷ್ಟು ಮಳೆಯಾಗಿಲ್ಲ. ಇದರಿಂದ ಜಲಾಶಯದಲ್ಲಿಯೂ ಸಮರ್ಪಕವಾಗಿ ನೀರು ಭರ್ತಿಯಾಗಿಲ್ಲ' ಎಂದು ಟ್ವೀಟ್ ಮಾಡಿದ್ದರು.
'ಈಗಾಗಲೇ ಸ್ವಲ್ಪ ನೀರು ತಮಿಳುನಾಡಿಗೆ ಹರಿಸಲಾಗಿದೆ. ಮಳೆ ಇಲ್ಲದ ಕಾರಣಕ್ಕೆ ನಮ್ಮಲ್ಲಿಯೂ ನೀರಿನ ಅಭಾವ ಇದೆ. ಎರಡು ರಾಜ್ಯಗಳ ರೈತರ ಹಿತ ಕಾಯಬೇಕು. ಆದರೆ ಸಮಪರ್ಕವಾದ ನೀರು ಇಲ್ಲದಿರುವುದರಿಂದ ಸಮಸ್ಯೆ ಎದುರಾಗುತ್ತಿದೆ. ಈ ವಿಚಾರದಲ್ಲಿ ರಾಜಕಾರಣ ಮಾಡುವುದರಲ್ಲಿ ಅರ್ಥವಿಲ್ಲ. ತಮಿಳುನಾಡು ಸರ್ಕಾರ ಎಂದಿನಂತೆ ನೀರಿಗಾಗಿ ಬೇಡಿಕೆಯನ್ನು ಇಟ್ಟಿದೆ. ಆದರೆ, ರಾಜ್ಯದಲ್ಲಿ ನಮ್ಮ ರೈತರಿಗೂ ನೀರಿನ ಅಗತ್ಯವಿದೆ' ಎಂದು ಹೇಳಿದ್ದರು.
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿಯೂ ಕರ್ನಾಟಕ ಮತ್ತು ತಮಿಳುನಾಡು ಪ್ರತಿನಿಧಿಗಳ ನಡುವೆ ವಾಗ್ವಾದ ನಡೆದಿತ್ತು. ಶುಕ್ರವಾರ ದೆಹಲಿಯಲ್ಲಿ ನಡೆದ ಸಭೆಯಲ್ಲಿ ಕರ್ನಾಟಕ ಸರ್ಕಾರವು ತಮಿಳುನಾಡು ಬೇಡಿಕೆಗೆ ಒಪ್ಪಿರಲಿಲ್ಲ, ಸಭೆಯಿಂದ ಹೊರ ನಡೆದಿತ್ತು.
ಕಾವೇರಿ ನ್ಯಾಯಾಧೀಕರಣದ ಅಂತಿಮ ಆದೇಶದ ಪ್ರಕಾರ ಜೂನ್, ಜುಲೈ ಮತ್ತು ಆಗಸ್ಟ್ ತಿಂಗಳಿನಲ್ಲಿ ಕರ್ನಾಟಕ ಸರ್ಕಾರ ತಮಿಳುನಾಡಿಗೆ 45 ಟಿಎಂಸಿ ಅಡಿ ನೀರು ಹರಿಸಬೇಕಿದೆ. ಆದರೆ ಕರ್ನಾಟಕ ಹರಿಸಿದ್ದು 6-7 ಟಿಎಂಸಿ ಅಡಿ ನೀರು ಮಾತ್ರ ಎಂದು ಸಭೆಯಲ್ಲಿ ತಮಿಳುನಾಡು ರಾಜ್ಯದ ಜಲಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿ ಸಭೆಯಲ್ಲಿ ಹೇಳಿದ್ದರು.
ಸಭೆಯಲ್ಲಿ ಪಾಲ್ಗೊಂಡಿದ್ದ ಕರ್ನಾಟಕದ ಜಲಸಂಪನ್ಮೂಲ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, "ರಾಜ್ಯದಲ್ಲಿ ಈ ವರ್ಷ ಮಳೆ ಕೊರತೆ ಉಂಟಾಗಿದೆ. ಕೆಆರ್‌ಎಸ್ ಜಲಾಶಯದಲ್ಲಿ ಈಗ 114 ಟಿಎಂಸಿ ಅಡಿಯಷ್ಟು ನೀರು ಇದೆ. ಡ್ಯಾ ತುಂಬದ ಕಾರಣ ಜೂನ್, ಜುಲೈ ತಿಂಗಳಿನಲ್ಲಿ ನಿಗದಿಪಡಿಸಿದಷ್ಟು ನೀರು ಹರಿಸಲು ಸಾಧ್ಯವಿಲ್ಲ" ಎಂದು ಸಭೆಗೆ ತಿಳಿಸಿದ್ದರು.












Click it and Unblock the Notifications