Cauvery Dispute; ದೆಹಲಿಯಲ್ಲಿ ಕಾಂಗ್ರೆಸ್ ಸರ್ಕಾರ ನಾಟಕ ಆರಂಭಿಸಿದೆ!

ಬೆಂಗಳೂರು, ಸೆಪ್ಟೆಂಬರ್ 20; ಕಾವೇರಿ ನದಿ ನೀರಿನ ವಿಚಾರದಲ್ಲಿ ಕರ್ನಾಟಕದ ಪ್ರತಿಪಕ್ಷ ಬಿಜೆಪಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಟೀಕೆ ಮಾಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾವೇರಿ ನೀರಿನ ಹಂಚಿಕೆ ವಿಚಾರದಲ್ಲಿ ಮುಂದಿನ ಕಾನೂನು ಹೋರಾಟದ ಕುರಿತು ಚರ್ಚಿಸಲು ನವದೆಹಲಿಯಲ್ಲಿ ಸಭೆ ನಡೆಯುತ್ತಿದೆ.

ಬುಧವಾರ ಕರ್ನಾಟಕ ಬಿಜೆಪಿ ಟ್ವೀಟ್ ಮಾಡಿದ್ದು, 'ತಮಿಳುನಾಡಿನ ಸಿಎಂ ಜೊತೆ ಡಿಸಿಎಂ ಡಿ. ಕೆ. ಶಿವಕುಮಾರ್ ಮಾಡಿದ್ದು ಕೇವಲ ರಾಜಕೀಯ. ಜಲಾಶಯದ ಬಹುಪಾಲು ನೀರನ್ನು ಹರಿಬಿಟ್ಟು, ಈಗ ತಮ್ಮ ತಪ್ಪುಗಳನ್ನು ಮುಚ್ಚಿ ಹಾಕಲು ಮತ್ತೊಬ್ಬರ ಮೇಲೆ ಗೂಬೆ ಕೂರಿಸುವ ಯತ್ನವನ್ನು ಡಿಸಿಎಂ ಡಿ. ಕೆ. ಶಿವಕುಮಾರ್ ಮಾಡುತ್ತಿದ್ದಾರೆ' ಎಂದು ಆರೋಪ ಮಾಡಿದೆ.

Cauvery Dispute Karnataka BJP Tweet Against DK Shivakumar

ದೆಹಲಿಯಲ್ಲಿ ನಾಟಕ; ಬಿಜೆಪಿ ತನ್ನ ಟ್ವೀಟ್‌ನಲ್ಲಿ, 'ಆಪ್ತ ಸ್ನೇಹಿತ ತಮಿಳುನಾಡಿನ ಸಿಎಂ ಎಂ. ಕೆ. ಸ್ಟಾಲಿನ್‌ರವರ ಮುಲಾಜಿಗೆ ಬಿದ್ದು, ಬೇಕಾಬಿಟ್ಟಿಯಾಗಿ ಕಾವೇರಿಯ ನೀರನ್ನು ತಮಿಳುನಾಡಿಗೆ ಬಿಟ್ಟು, ಕೆಆರ್‌ಎಸ್‌ ಜಲಾಶಯವನ್ನು ಬರಿದು ಮಾಡಿರುವ ಕಾಂಗ್ರೆಸ್ ಸರ್ಕಾರ, ಈಗ ದೆಹಲಿಯಲ್ಲಿ ಭೇಟಿ ಎಂಬ ಬೃಹನ್ನಾಟಕ ಆರಂಭಿಸಿದೆ' ಎಂದು ಟೀಕಿಸಿದೆ.

'ಆರಂಭದಲ್ಲಿಯೇ ರಾಜ್ಯದ ವಾಸ್ತವ ಸ್ಥಿತಿಯನ್ನು ತಮಿಳುನಾಡಿನ ಸಿಎಂ ಗೆ ವಿವರಿಸುವ ಎಲ್ಲಾ ಅವಕಾಶಗಳಿದ್ದರೂ, ಅದಾವುದನ್ನು ಮಾಡದೇ ತಮಿಳುನಾಡಿನ ಸಿಎಂ ಜೊತೆ ಡಿಸಿಎಂ ಡಿ. ಕೆ. ಶಿವಕುಮಾರ್ ಮಾಡಿದ್ದು ಕೇವಲ ರಾಜಕೀಯ' ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.

'ತಮಿಳುನಾಡಿನ 1.8 ಲಕ್ಷ ಹೆಕ್ಟೇರ್ ಕುರುವೈ ಬೆಳೆಗೆ 32 ಟಿಎಂಸಿ ಮಾತ್ರ ಒದಗಿಸುವುದು ರಾಜ್ಯದ ಜವಾಬ್ದಾರಿ. ತಮಿಳುನಾಡಿನವರು ಈ ಬಾರಿ 7.8 ಲಕ್ಷ ಹೆಕ್ಟೇರ್‌ನಲ್ಲಿ ಕುರುವೈ ಬೆಳೆ ಬೆಳೆದಿದ್ದಾರೆ. ಅದಕ್ಕೆ ನೀರು ಬಿಡುವ ಜವಾಬ್ದಾರಿ ರಾಜ್ಯದ್ದಲ್ಲ ಎಂಬ ಅಂಶವನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮುಂದೆ ಸಮರ್ಥವಾಗಿ ಮಂಡಿಸದೇ, ಸಂಪೂರ್ಣ ಕಾಲಹರಣ ಮಾಡಿದರು' ಎಂದು ಬಿಜೆಪಿ ಆರೋಪಿಸಿದೆ.

'ಜಲಾಶಯದ ಬಹುಪಾಲು ನೀರನ್ನು ಹರಿಬಿಟ್ಟು ,ಈಗ ತಮ್ಮ ತಪ್ಪುಗಳನ್ನು ಮುಚ್ಚಿ ಹಾಕಲು ಮತ್ತೊಬ್ಬರ ಮೇಲೆ ಗೂಬೆ ಕೂರಿಸುವ ಯತ್ನವನ್ನು ಡಿಸಿಎಂ ಡಿ. ಕೆ. ಶಿವಕುಮಾರ್ ಮಾಡುತ್ತಿದ್ದಾರೆ. ಹುಟ್ಟಿನಿಂದ ಕಾವೇರಿ ನೀರು ಕುಡಿದಿರುವ ನಿಮಗೆ, ಡಿ. ಕೆ. ಶಿವಕುಮಾರ್ ಅವರಿಗೆ ಕಾವೇರಿ ವಿಚಾರದಲ್ಲಿ ರಾಜ್ಯದ ರೈತರಿಗೆ ನ್ಯಾಯ ಕೊಡಿಸಬೇಕೆಂಬ ಬದ್ಧತೆ ಇಲ್ಲದಂತೆ ಕಾಣುತ್ತಿದೆ' ಎಂದು ಬಿಜೆಪಿ ದೂರಿದೆ.

ಕಾನೂನು ತಜ್ಞರ ಜೊತೆ ಸಭೆ; ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸೋಮವಾರ ಕರ್ನಾಟಕಕ್ಕೆ ಮುಂದಿನ 15 ದಿನ ಪ್ರತಿದಿನ 5 ಸಾವಿರ ಕ್ಯುಸೆಕ್ ನೀರನ್ನು ತಮಿಳುನಾಡಿಗೆ ಹರಿಸಿ ಎಂದು ಆದೇಶಿಸಿದೆ.

ಸಭೆಯಲ್ಲಿ ತಮಿಳುನಾಡು ಸರ್ಕಾರ ಪ್ರತಿದಿನ 6,500 ಕ್ಯುಸೆಕ್ ಬಾಕಿಯನ್ನು ಒಳಗೊಂಡು ಮುಂದಿನ 15 ದಿನ ಒಟ್ಟು 12,500 ಕ್ಯುಸೆಕ್ ನೀರನ್ನು ಹರಿಸಬೇಕು ಎಂದು ವಾದ ಮಂಡಿಸಿತ್ತು. ತಮಿಳುನಾಡಿಗೆ ನೀರು ಹರಿಸದೇ ಕಾನೂನು ಹೋರಾಟ ನಡೆಸಲು ಕರ್ನಾಟಕ ತೀರ್ಮಾನಿಸಿದೆ.

ಮತ್ತೊಂದು ಕಡೆ ಕರ್ನಾಟಕ ಕಾವೇರಿ ನೀರು ಹರಿಸುವಂತೆ ಸೂಚನೆ ನೀಡಬೇಕು ಎಂದು ತಮಿಳುನಾಡು ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಕೆ ಮಾಡಿರುವ ಅರ್ಜಿಯ ವಿಚಾರಣೆ ಸೆಪ್ಟೆಂಬರ್ 21ರ ಗುರುವಾರ ನಡೆಯಲಿದೆ.

ಇದಕ್ಕೂ ಮೊದಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್, ವಿವಿಧ ಖಾತೆಗಳ ಸಚಿವರು ನವದೆಹಲಿಯ ಖಾಸಗಿ ಹೋಟೆಲ್‌ನಲ್ಲಿ ಕಾವೇರಿ ವಿವಾದದ ಕಾನೂನು ಹೋರಾಟದ ಕುರಿತು ಕಾನೂನು ತಜ್ಞರ ಜೊತೆ ಬುಧವಾರ ಸಭೆಯನ್ನು ನಡೆಸಲಿದ್ದಾರೆ. ಇದಕ್ಕೂ ಮೊದಲು ರಾಜ್ಯದ ಸಂಸದರ ಜೊತೆ ಸಭೆ ಬೆಳಗ್ಗೆ ನಡೆದಿದೆ.

ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದು, 'ಕನ್ನಡ ನಾಡು, ನುಡಿ, ಜಲ, ಸಂಸ್ಕೃತಿ ಕಾಪಾಡುವ ವಿಚಾರದಲ್ಲಿ ಪಕ್ಷ ರಾಜಕಾರಣ ಪಕ್ಕಕ್ಕಿಟ್ಟು ನಾವೆಲ್ಲಾ ಒಂದು ಧ್ವನಿಯಾಗಿ ಗಟ್ಟಿ ನಿಲ್ಲಬೇಕು. ಸಂಕಷ್ಟ ಸೂತ್ರ ಸಿದ್ಧವಾಗದೇ ಇರುವುದರಿಂದ ಕಾವೇರಿ ನೀರು ಹಂಚಿಕೆ ಎನ್ನುವುದು ನಮ್ಮ ರಾಜ್ಯಕ್ಕೆ ಕ್ಲಿಷ್ಟಕರವಾಗಿ ಪರಿಣಮಿಸಿದೆ. ನೀರು ಬಿಡಬಾರದು ಎನ್ನುವ ಪ್ರಶ್ನೆ ಅಲ್ಲ. ಬಿಡಲು ನಮ್ಮಲ್ಲಿ ನೀರೇ ಇಲ್ಲ. ಕುಡಿಯುವ ನೀರಿಗೆ 33 ಟಿಎಂಸಿ, ಬೆಳೆ ರಕ್ಷಣೆಗೆ 70 ಟಿಎಂಸಿ, ಕೈಗಾರಿಕೆಗಳಿಗೆ 3 ಟಿಎಂಸಿ ಸೇರಿ ಒಟ್ಟು 106 ಟಿಎಂಸಿ ನೀರು ನಮಗೆ ಅನಿವಾರ್ಯವಾಗಿ ಬೇಕಿದೆ. ಈಗ ನಮ್ಮ ಬಳಿ ಇರುವುದು 53 ಟಿಎಂಸಿ ನೀರು ಮಾತ್ರ. ಹೀಗಾಗಿ ತಮಿಳುನಾಡಿಗೆ ಬಿಡಲು ನೀರೇ ಇಲ್ಲ' ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+