ಜಾತಿ ಗಣತಿ ಪರ ವಿರೋಧ ಚರ್ಚೆ; ವರದಿ ಕೊಡುವ ಮುನ್ನವೇ ವಿರೋಧ ಏಕೆ?: ಸಿದ್ದರಾಮಯ್ಯ ಹೇಳಿದಿಷ್ಟು
ಬೆಂಗಳೂರು, ನವೆಂಬರ್ 22 :ಜಾತಿ ಜನಗಣತಿ ಪಡೆಯದಿರುವಂತೆ ಒಕ್ಕಲಿಗರ ಸಂಘ ಮನವಿ ಸಲ್ಲಿಸಿದ್ದು, ವರದಿ ಕೊಡುವ ಮುನ್ನವೇ ಏಕೆ ವಿರೋಧಿಸುತ್ತಿದ್ದೀರಿ ಎಂದು ಹೇಳಿದ್ದೇನೆ. ಜಾತಿ ಜನಗಣತಿ ವರದಿ ಇನ್ನೂ ನಮ್ಮ ಕೈ ಸೇರಿಲ್ಲ. ಕೊಟ್ಟ ಮೇಲೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಮೂಲಪ್ರತಿ ಕಾಣೆಯಾಗಿದೆ ಎಂದು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಬಗ್ಗೆ ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಈ ಬಗ್ಗೆ ನನಗೆ ತಿಳಿದಿಲ್ಲ ಎಂದರು. ನನ್ನನ್ನು ಭೇಟಿಯಾಗಿ ವರದಿ ಸಲ್ಲಿಸುತ್ತಾರೆ. ಅಲ್ಲಿಯವರೆಗೆ ಅವಧಿ ವಿಸ್ತರಣೆ ಮಾಡಿ ಎಂದು ಮನವಿ ಮಾಡಿದ್ದರು ಎಂದು ಹೇಳಿದರು.

ವರದಿ ಯಾವಾಗ ಕೊಡುತ್ತಾರೋ ಅಲ್ಲಿಯವರೆಗೆ ಅವಧಿ ವಿಸ್ತರಣೆಯಾಗುತ್ತದೆ. 162 ಕೋಟಿ ಖರ್ಚು ಮಾಡಿ ವರದಿ ತಯಾರಿಸಲಾಗಿದೆ. ವರದಿ ಬಂದ ನಂತರ ಅವರ ಸಂಶಯಗಳ ನಿವಾರಣೆಯಾಗಲಿದೆಯೋ ಇಲ್ಲವೋ ನೋಡೋಣ. ವರದಿಯಲ್ಲಿ ಏನಿದೆ ಎಂದು ತಿಳಿದಿಲ್ಲ. ಡಿಸೆಂಬರ್ ನಲ್ಲಿ ವರದಿ ಸಲ್ಲಿಸುವ ನಿರೀಕ್ಷೆ ಇದೆ ಎಂದರು.
ಅಪೌಷ್ಠಿಕತೆ ಸೂಚ್ಯಂಕದಲ್ಲಿ ಗುಜರಾತ್ ರಾಜ್ಯ ಮತ್ತು ಭಾರತದ ಸೂಚ್ಯಂಕ ಏರಿಕೆ ಆಗುತ್ತಲೇ ಇದೆ. ಏಕೆ ಹೀಗಾಯ್ತು ಎಂದು ತನ್ನನ್ನು ತಾನು ವಿಶ್ವಗುರು ಎಂದು ಕರೆದುಕೊಳ್ಳುವ ಪ್ರಧಾನಮಂತ್ರಿ ಮೋದಿಯವರು ಉತ್ತರಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.
ಗುಜರಾತ್ ಮಾದರಿ, ಗುಜರಾತ್ ಮಾದರಿ ಎನ್ನುವವರು ಗುಜರಾತ್ ಅಪೌಷ್ಠಿಕತೆ ಸೂಚ್ಯಂಕದಲ್ಲಿ ಮೇಲಕ್ಕೆ ಏರುತ್ತಿರುವುದು ಏಕೆ ಎನ್ನುವುದಕ್ಕೆ ಉತ್ತರಿಸಬೇಕು. ಗುಜರಾತ್ ನ ಈ ಸ್ಥಿತಿ ಮಾದರಿ ಆಗಲು ಸಾಧ್ಯವೇ ಎಂದು ರಾಷ್ಟ್ರೀಯ ಕುಟುಂಬ ಮತ್ತು ಆರೋಗ್ಯ ಸಮೀಕ್ಷೆ 4 ಮತ್ತು 5 ರಲ್ಲಿ ಇರುವ ಅಂಕಿ ಅಂಶಗಳನ್ನು ತುಲನೆ ಮಾಡಿ ಲೇವಡಿ ಮಾಡಿದರು.
ಬಡತನ-ದಾರಿದ್ರ್ಯ-ಅನಕ್ಷರತೆ ಹೋಗದೆ ಎಲ್ಲರಿಗೂ ಉತ್ತಮ ಆರೋಗ್ಯ ಸಿಗುವುದಿಲ್ಲ. ಆದ್ದರಿಂದ ಈ ಮೂರು ಪಿಡುಗುಗಳಿಗೆ ಚಿಕಿತ್ಸೆ ಕೊಡುವುದು ನಮ್ಮ ಸರ್ಕಾರದ ಪ್ರಥಮ ಆಧ್ಯತೆಯಾಗಿದೆ.
ಪ್ರತಿಯೊಬ್ಬರ ಮನೆ ಬಾಗಿಲಿಗೆ ಆರೋಗ್ಯದ ಸವಲತ್ತು ತಲುಪಿಸುವುದು ನಮ್ಮ ಸರ್ಕಾರದ ಗುರಿಯಾಗಿದೆ. ಇದಕ್ಕಾಗಿ ಸರ್ಕಾರ ಅಗತ್ಯವಿದ್ದಷ್ಟು ಹಣ ನೀಡಲು ಸಿದ್ದವಿದೆ ಎಂದರು.
ಮಹಿಳಾ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಇಬ್ಬರೂ ಸೇರಿ ನಮ್ಮ ರಾಜ್ಯದ ಮಕ್ಕಳು ಮತ್ತು ಪ್ರತಿಯೊಬ್ಬರೂ ಅತ್ಯಂತ ಆರೋಗ್ಯವಂತರಾಗುವಂತೆ ಇನ್ನಷ್ಟು ಹೆಚ್ಚೆಚ್ಚು ಶ್ರಮಿಸಿ ಸರ್ಕಾರದ ಗುರಿಯನ್ನು ಸಾಧಿಸಿ ತೋರಿಸಬೇಕು ಎಂದು ಕರೆ ನೀಡಿದರು












Click it and Unblock the Notifications