KSRTC: ಕೆಎಸ್ಆರ್‌ಟಿಸಿ ಸಿಬ್ಬಂದಿಗೆ ಗುಡ್‌ನ್ಯೂಸ್ ಕೊಟ್ಟ ಸಚಿವರು
ಬೆಂಗಳೂರು, ಡಿಸೆಂಬರ್ 09: ಕರ್ನಾಟಕದ ಸಾರಿಗೆ ನೌಕರರ ಒಕ್ಕೂಟ ಡಿಸೆಂಬರ್ 31ರಿಂದ ಮುಷ್ಕರ ನಡೆಸಲು ಚಿಂತನೆ ನಡೆಸಿದೆ. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸಾರಿಗೆ ನೌಕರರ ಸಂಘಟನೆಗಳ ಜೊತೆ ಸಭೆಯನ್ನು ನಡೆಸಿದ್ದು, ನೌಕರರಿಗೆ ಹಲವು ಭರವಸೆಗಳನ್ನು ನೀಡಿದ್ದಾರೆ. ಇಲಾಖೆಯ ವಿವಿಧ ಹುದ್ದೆಗಳ ನೇಮಕಾತಿ ಕುರಿತು ಸಹ ಮಾತನಾಡಿದ್ದಾರೆ. ಬೆಳಗಾವಿ ಚಲೋ ನಡೆಸಿ, ನೌಕರರು ಮುಷ್ಕರ ನಡೆಸಲು ನೋಟಿಸ್ ನೀಡುವುದು ಸಹ ಸರಿಯಲ್ಲ ಎಂದು ಸಚಿವರು ಹೇಳಿದ್ದಾರೆ.
ಸಾರಿಗೆ ಇಲಾಖೆಯ ಸಿಬ್ಬಂದಿಗಳು ಹಲವು ವರ್ಷಗಳಿಂದ ನಗದು ರಹಿತ ಆರೋಗ್ಯ ಸೇವೆಯನ್ನು ಒದಗಿಸಬೇಕು ಎಂದು ಬೇಡಿಕೆ ಇಟ್ಟಿದ್ದರು. ಈಗಾಗಲೇ ಕರ್ನಾಟಕದ ಸರ್ಕಾರಿ ನೌಕರರಿಗೆ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಇದೆ. ಸರ್ಕಾರಿ ನೌಕರರು ಮತ್ತು ಅವಲಂಬಿತ ಕುಟುಂಬ ಸದಸ್ಯರಿಗೆ ಯೋಜನೆಯಡಿ ಅನುಕೂಲವಾಗುತ್ತದೆ.

ಸಚಿವ ರಾಮಲಿಂಗಾ ರೆಡ್ಡಿ, "ಸಾರಿಗೆ ಸಿಬ್ಬಂದಿಗಳ ಹಲವು ವರ್ಷಗಳ ಬೇಡಿಕೆಯಾದ ನಗದು ರಹಿತ ಆರೋಗ್ಯ ಸೇವೆಗೆ ಶೀಘ್ರದಲ್ಲೇ ಚಾಲನೆ ನೀಡಲಾಗುತ್ತದೆ" ಎಂದು ಹೇಳಿದ್ದಾರೆ. ಈ ಮೂಲಕ ಸಿಬ್ಬಂದಿಗಳಿಗೆ ಗುಡ್‌ನ್ಯೂಸ್ ಕೊಟ್ಟಿದ್ದಾರೆ.
ನೌಕರರಿಗೆ ಸಚಿವರು ನೀಡಿದ ಭರವಸೆಗಳು: ಸಾರಿಗೆ ನೌಕರರ ಸಂಘಟನೆಗಳ ಜೊತೆ ಮಾತುಕತೆ ನಡೆಸಲಾಗಿದೆ. ಅವರ ಹಲವು ಬೇಡಿಕೆಗಳನ್ನು ಈಡೇರಿಸಲು ಕ್ರಮ ಕೈಗೊಳ್ಳಲಾಗಿದೆ. ಇಂತಹ ಸಂದರ್ಭದಲ್ಲಿ ನೌಕರರು ಬೆಳಗಾವಿ ಚಲೋ ನಡೆಸಿ, ಮುಷ್ಕರಕ್ಕೆ ನೋಟಿಸ್ ನೀಡುವುದು ಸರಿಯಲ್ಲ. ಸಂಘಟನೆಗಳ ಇತರ ಬೇಡಿಕೆಗಳ ಕುರಿತು ಸಹ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ ಎಂದು ಸಚಿವರು ಹೇಳಿದ್ದಾರೆ.
ಸಚಿವ ರಾಮಲಿಂಗಾ ರೆಡ್ಡಿ, "ಸಂಸ್ಥೆಗೆ ಇತ್ತೀಚೆಗೆ 5800 ಹೊಸ ಬಸ್‌ಗಳು ಸೇರ್ಪಡೆಯಾಗಿವೆ., 10 ಸಾವಿರ ಹೊಸ ನೇಮಕಾತಿ ನಡೆಯಬೇಕಿದೆ. ಹಲವು ಕಾರ್ಮಿಕ ಸ್ನೇಹಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿನ ಭವಿಷ್ಯ ನಿಧಿ, ಡೀಸೆಲ್ ಬಾಕಿ, ಉಪಧನ, ನಿವೃತ್ತ ನೌಕರರ ಬಾಕಿ ಸೇರಿ 5900 ಕೋಟಿ ರೂ. ಸಾಲ ಬಾಕಿ ಉಳಿದಿರುವ ಕಾರಣ ಸಾರಿಗೆ ಸಂಸ್ಥೆಗಳನ್ನು ಸಹಜ ಸ್ಥಿತಿಗೆ ತರಲು ಕಾಲಾವಕಾಶ ಬೇಕಿದೆ" ಎಂದು ತಿಳಿಸಿದ್ದಾರೆ.
ಕೆಎಸ್ಆರ್‌ಟಿಸಿ ಆಫೀಸರ್ಸ್ ವೆಲ್‌ಫೇರ್ ಅಸೋಸಿಯೇಷನ್ ಹಾಗೂ ಸೂಪರ್ ವೈಸರಿ ಸ್ಟಾಫ್ ಅಸೋಸಿಯೇಷನ್ಸ್ ಬೆಳಗಾವಿ ಚಲೋಗೆ ಕೈ ಜೋಡಿಸಿಲ್ಲ ಹಾಗೂ ಮುಷ್ಕರಕ್ಕೆ ಸಹ ಆಸಕ್ತಿ ತೋರಿಸುತ್ತಿಲ್ಲ. ಸಿಬ್ಬಂದಿಗಳ ಬೇಡಿಕೆ ಈಡೇರಿಸಲು ಹಲವು ಕ್ರಮ ಕೈಗೊಳ್ಳಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಬೆಳಗಾವಿ ಚಲೋ ನಡೆಸಿ, ಮುಷ್ಕರದ ನೋಟಿಸ್ ಕೊಡುವುದು ಸರಿಯಲ್ಲ ಎಂದು ಕಾರ್ಮಿಕರಿಗೆ ಮನವಿ ಮಾಡಲಾಗಿದೆ.
ಸರ್ಕಾರ ನೀಡಿರುವ ಭರವಸೆಗಳು
* ಭವಿಷ್ಯನಿಧಿ ಮತ್ತು ಡೀಸೆಲ್ ಬಾಕಿ ಹಣ ಪಾವತಿಗಾಗಿ ಸರ್ಕಾರ ಗ್ಯಾರಂಟಿ ನೀಡಿದೆ. 2000 ಕೋಟಿ ರೂ. ಸಾಲ ನೀಡಿದೆ.
* ಸಿಬ್ಬಂದಿಗಳ ವರ್ಗಾವಣೆ, ಅಂತರ ನಿಗಮ ವರ್ಗಾವಣೆ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.
* ಪರಿಷ್ಕೃತ ವೇತನ ಶ್ರೇಣಿಯಲ್ಲಿ ಸೇವಾ ವಿಮುಕ್ತಿ ಹೊಂದಿದ ನೌಕರರ ಉಪಧನ ಮತ್ತು ಗಳಿಕೆ ರಜೆ ನಗದೀಕರಣ ವ್ಯತ್ಯಾಸದ ಮೊತ್ತ ಪಾವತಿಸಲು 224 ಕೋಟಿ ರೂ. ನೀಡಲು ಆದೇಶವನ್ನು ಹೊರಡಿಸಲಾಗಿದೆ, ಅಧಿವೇಶನದ ಬಳಿಕ ಹಣ ಬಿಡುಗಡೆಯಾಗಲಿದೆ.












Click it and Unblock the Notifications