'Beer: ಬಿಯರ್ ತಯಾರಿಕೆಯ ಜಾಗತಿಕ ಕಂಪನಿ ಜತೆ ಕರ್ನಾಟಕ ಒಪ್ಪಂದ: ₹350 ಕೋಟಿ ಹೂಡಿಕೆ'
ಬೆಂಗಳೂರು, ಜೂನ್ 22: ಕರ್ನಾಟಕಕ್ಕೆ ಬಂಡವಾಳ ಹೂಡಿಕೆ ಆಕರ್ಷಿಸುವ ಉದ್ದೇಶದಿಂದ ರಾಜ್ಯದ ಉನ್ನತ ಮಟ್ಟದ ನಿಯೋಗದ ನೇತೃತ್ವ ವಹಿಸಿರುವ ಕೈಗಾರಿಕೆ ಸಚಿವ ಎಂಬಿ ಪಾಟೀಲ್ ಅವರು ಡೆನ್ಮಾರ್ಕ್‌ಗೆ ಭೇಟಿ ನೀಡಿದ್ದಾರೆ. ಅಲ್ಲಿನ ಜಾಗತಿಕ ಕಂಪನಿ ಕಾರ್ಲ್ಸ್‌ಬರ್ಗ್ ಗ್ರೂಪ್ ಸಿಇಒ ಜಾಕೊಬ್ ಆರಪ್ ಆ್ಯಂಡರ್ಸನ್ ಅವರೊಂದಿಗೆ ಮಾತುಕತೆ ನಡೆಸಿ ನೂರಾರು ಕೋಟಿ ರೂಪಾಯಿ ಹೂಡಿಕೆ ತರಲುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಂಗಳೂರಿನಲ್ಲಿ ಕಳೆದ ಫೆಬ್ರುವರಿಯಲ್ಲಿ ನಡೆದಿದ್ದ ಜಾಗತಿಕ ಹೂಡಿಕೆದಾರ ಸಮಾವೇಶದಲ್ಲಿ ಕಂಪನಿಯು ಸಹಿ ಹಾಕಿದ್ದ ₹350 ಕೋಟಿ ಹೂಡಿಕೆ ಒಪ್ಪಂದದ ಪ್ರಗತಿ ಪರಿಶೀಲಿಸಿದರು. ಅದರನ್ವಯ ಇಂದು ಬಿಯರ್ ಮತ್ತು ಇತರ ಪಾನೀಯ ತಯಾರಿಸುವ ಡೆನ್ಮಾರ್ಕ್‌ನ ಜಾಗತಿಕ ಕಂಪನಿ ಕಾರ್ಲ್ಸ್‌ಬರ್ಗ್ ಗ್ರೂಪ್ ಕರ್ನಾಟಕ ಮಹತ್ವದ ಒಡಂಬಡಿಕೆ ಮಾಡಿಕೊಂಡಿದೆ. ರಾಜ್ಯದಲ್ಲಿ ₹350 ಕೋಟಿ ಬಂಡವಾಳ ಹೂಡಿಕೆ ಆಗಲಿದೆ ಎಂದು ಅವರು ತಿಳಿಸಿದರು.

ಕಾರ್ಲ್ಸ್‌ಬರ್ಗ್ ಸೇರಿದಂತೆ ಕೆಕೆ ವಿಂಡ್ ಸೊಲುಷನ್ಸ್, ನೊವೊನೆಸಿಸ್, ನೊವೊ ನಾರ್ಡಿಸ್ಕ್, ಡೆನ್ಮಾರ್ಕ್ ಕೈಗಾರಿಕಾ ಒಕ್ಕೂಟ (ಡಿಐ) ಮತ್ತು ಭಾರತ ಹಾಗೂ ಡೆನ್ಮಾರ್ಕ್ ವಾಣಿಜ್ಯೋದ್ಯಮ ಸಂಘ (ಐಡಿಸಿಸಿ) ಜೊತೆ ಸರಣಿ ಸಭೆ ನಡೆಸಿದರು. ಕರ್ನಾಟಕದಲ್ಲಿ ಬಂಡವಾಳ ಹೂಡಿಕೆಗೆ ಇರುವ ಸಾಕಷ್ಟು ಅವಕಾಶಗಳನ್ನು ಅವರು ಅಲ್ಲಿನ ಉದ್ಯಮಿಗಳಿಗೆ ತಿಳಿಸಿದರು.
ತಯಾರಿಕೆ ವಿಸ್ತರಣೆಗೆ ಸಚಿವರ ಮನವಿ
ಕರ್ನಾಟಕದಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಪ್ಲಾಟ್‌ಫಾರ್ಮ್ ಸಿಸ್ಟಮ್ಸ್ ವಿಭಾಗದಲ್ಲಿ ತಮ್ಮ ಉತ್ಪನ್ನಗಳ ತಯಾರಿಕೆಯನ್ನು ಮತ್ತಷ್ಟು ವಿಸ್ತರಣೆ ಮಾಡುವಂತೆ ಎಂ.ಬಿ. ಪಾಟೀಲ ಅವರು, ಕೆಕೆ ವಿಂಡ್ ಸೊಲುಷನ್ಸ್‌ಗೆ ಮನವಿ ಮಾಡಿಕೊಂಡರು. ರಾಜ್ಯದಲ್ಲಿ ಅಸ್ತಿತ್ವಕ್ಕೆ ಬರುತ್ತಿರುವ ಜ್ಞಾನ, ಯೋಗಕ್ಷೇಮ ಮತ್ತು ನಾವೀನ್ಯತೆ (ಕ್ವಿನ್ ಸಿಟಿ) ಯೋಜನೆಯಲ್ಲಿ ಭಾಗಿಯಾಗಲು ನೊವೊನೆಸಿಸ್ ಆಸಕ್ತಿ ವ್ಯಕ್ತಪಡಿಸಿದೆ. ರಾಜ್ಯದಲ್ಲಿನ ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಕಂಪನಿಯ ತಯಾರಿಕಾ ಸಾಮರ್ಥ್ಯ ವಿಸ್ತರಿಸಲು ಸಚಿವರು ಕರೆ ನೀಡಿದರು.
ಔಷಧಿ ತಯಾರಿಕೆಯ ಜಾಗತಿಕ ಪ್ರಮುಖ ಕಂಪನಿ ನೊವೊ ನಾರ್ಡಿಸ್ಕ್ ಜೊತೆಗಿನ ಸಭೆಯಲ್ಲಿ ಸಚಿವ ಪಾಟೀಲ್ ಅವರು ರಾಜ್ಯದಲ್ಲಿ ತಯಾರಿಕಾ ಘಟಕ ಸ್ಥಾಪಿಸಲು ಮನವಿ ಮಾಡಿದರು. ವಾಣಿಜ್ಯ ಬಾಂಧವ್ಯ ವೃದ್ಧಿಸಲು ಬೆಂಗಳೂರಿನಲ್ಲಿ ಕಚೇರಿ ಆರಂಭಿಸಲು ಸಚಿವ ಪಾಟೀಲ ಅವರು 'ಐಡಿಸಿಸಿ'ಗೆ ಆಹ್ವಾನ ನೀಡಿದರು. ರೋಡ್‌ಷೋನಲ್ಲಿ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಎಸ್. ಸೆಲ್ವಕುಮಾರ್ ಮತ್ತಿತರರು ಪಾಲ್ಗೊಂಡು ಯಶಸ್ವಿಗೊಳಿಸಿದರು.












Click it and Unblock the Notifications