ನಿತ್ಯಾನಂದ ಸ್ವಾಮಿಗೆ ಸಂಕಷ್ಟ; ಜಾಮೀನು ರದ್ದು ಮಾಡಲು ಅರ್ಜಿ
ಬೆಂಗಳೂರು, ಜನವರಿ 24 : ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಸ್ವಾಮಿಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ. ನಿತ್ಯಾನಂದ ಸ್ವಾಮಿ ಭಾರತ ಬಿಟ್ಟು ಪರಾರಿಯಾಗಿದ್ದು, ಈಗಾಗಲೇ ಇಂಟರ್ ಪೋಲ್ ಬ್ಲೂ ಕಾರ್ನರ್ ನೋಟಿಸ್ ಜಾರಿಗೊಳಿಸಿದೆ.
ಅತ್ಯಾಚಾರ ಆರೋಪ ಪ್ರಕರಣದಲ್ಲಿ ನಿತ್ಯಾನಂದ ಸ್ವಾಮಿಗೆ ನೀಡಿರುವ ಜಾಮೀನು ರದ್ದುಗೊಳಿಸಬೇಕು ಎಂದು ಲೆನಿನ್ ಕರುಪ್ಪನ್ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ರಾಮನಗರ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ಪ್ರಕರಣದ ವಿಚಾರಣೆಯನ್ನು ಬೇರೆ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಬೇಕು ಎಂದು ಅರ್ಜಿ ಸಲ್ಲಿಕೆಯಾಗಿದೆ.
ನಿತ್ಯಾನಂದ ಸ್ವಾಮಿ ಕಾರು ಚಾಲಕರಾಗಿದ್ದ ಲೆನಿನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಶುಕ್ರವಾರ ನ್ಯಾಯಾಲಯ ನಡೆಸಿತು. ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ಹಾ ಅವರಿದ್ದ ಏಕ ಸದಸ್ಯ ಪೀಠ ಸಿಐಡಿಗೆ ನೋಟಿಸ್ ಜಾರಿಗೊಳಿಸಿದೆ.
ಗುಜರಾತ್‌ನಲ್ಲಿರುವ ಆಶ್ರಮದಿಂದ ಇಬ್ಬರು ಬಾಲಕಿಯರು ನಾಪತ್ತೆಯಾದ ಪ್ರಕರಣದಲ್ಲಿಯೂ ನಿತ್ಯಾನಂದ ಆರೋಪಿ. ಗುಜರಾತ್ ಪೊಲೀಸರ ಮನವಿ ಮೇರೆಗೆ ಇಂಟರ್ ಪೋಲ್ ಆತನ ವಿರುದ್ಧ ಬ್ಲೂ ಕಾರ್ನರ್ ನೋಟಿಸ್ ಜಾರಿಗೊಳಿಸಿದೆ.

ಅರ್ಜಿಯಲ್ಲಿ ಮನವಿ ಏನು?
ನಿತ್ಯಾನಂದ ಸ್ವಾಮಿ ಜಾಮೀನು ಷರತ್ತುಗಳನ್ನು ಉಲ್ಲಂಘಸಿದ್ದಾನೆ. ನ್ಯಾಯಾಲಯದ ವಿಚಾರಣೆಗೆ ಹಾಜರಾಗುತ್ತಿಲ್ಲ. ಅವಧಿ ಮುಗಿದಿರುವ ಪಾಸ್ ಪೋರ್ಟ್ ಬಳಸಿಕೊಂಡು ದೇಶದಿಂದ ಪರಾರಿಯಾಗಿದ್ದಾನೆ. ಹೀಗಾಗಿ ಜಾಮೀನು ರದ್ದುಪಡಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ. ಹೈಕೋರ್ಟ್ ಅರ್ಜಿಯ ವಿಚಾರಣೆಯನ್ನು ಮುಂದೂಡಿದೆ.

ಭಕ್ತೆ ಮೇಲೆ ಅತ್ಯಾಚಾರ ಪ್ರಕರಣ
ಭಕ್ತೆಯ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣದಲ್ಲಿ ನಿತ್ಯಾನಂದ ಸ್ವಾಮಿ ಆರೋಪಿ. 2010ರಲ್ಲಿ ಅವರನ್ನು ಬಂಧಿಸಲಾಗಿತ್ತು. ಜಾಮೀನು ಪಡೆದು ಬಿಡುಗಡೆಗೊಂಡಿದ್ದಾರೆ. ಈ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಸುಪ್ರೀಂಕೋರ್ಟ್‌ನಲ್ಲಿಯೂ ನಿತ್ಯಾನಾಂದ ಸ್ವಾಮಿ ಕಾನೂನು ಹೋರಾಟ ನಡೆಸಿದ್ದಾರೆ. ಆದರೆ, ಪ್ರಕರಣದ ರದ್ದಾಗಿಲ್ಲ.

ವಿಚಾರಣೆಗೆ ಹಾಜರಾಗುತ್ತಿಲ್ಲ
ನಿತ್ಯಾನಂದ ಸ್ವಾಮಿ ಮತ್ತು ಆತನ ಮೂವರು ಶಿಷ್ಯರು ಸಹ ಈ ಪ್ರಕರಣದಲ್ಲಿ ಆರೋಪಿಗಳು. ರಾಮನಗರ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಗೆ ನಿತ್ಯಾನಂದ ಮತ್ತು ಅವರ ಶಿಷ್ಯರು ಗೈರಾಗಿದ್ದರು. ಇದನ್ನು ಆಧಾರವಾಗಿ ಇಟ್ಟುಕೊಂಡು ಜಾಮೀನು ಅರ್ಜಿಗೆ ವಜಾಗೊಳಿಸಲು ಮನವಿ ಸಲ್ಲಿಸಲಾಗಿದೆ.

ಪ್ರಕರಣವನ್ನು ವರ್ಗಾವಣೆ ಮಾಡಿ
ಲೆನಿನ್ ಹೈಕೋರ್ಟ್‌ಗೆ ಮತ್ತೊಂದು ಅರ್ಜಿ ಹಾಕಿದ್ದು, ರಾಮನಗರ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆ ವಿಳಂಬವಾಗುತ್ತಿದೆ. ಪ್ರಕರಣವನ್ನು ಮತ್ತೊಂದು ನ್ಯಾಯಾಲಯಕ್ಕೆ ವರ್ಗಾವಣೆ ಮಾಡಿ ಎಂದು ಮನವಿ ಮಾಡಿದ್ದಾರೆ.












Click it and Unblock the Notifications