ಹೈಕಮಾಂಡ್ ಸೂಚನೆ ಬಳಿಕ ಸಂಪುಟ ವಿಸ್ತರಣೆ, ಪುನಾರಚನೆ: ಸಿಎಂ ಬಸವರಾಜ ಬೊಮ್ಮಾಯಿ
ಬೆಂಗಳೂರು, ಮಾ.13: ಸಚಿವ ಸಂಪುಟವನ್ನು ವಿಸ್ತರಣೆ ಮಾಡುವ ಪ್ರಸ್ತಾಪ ಇದೆ. ಆದರೆ, ಹೈಕಮಾಂಡ್ ನಾಯಕರು ಯಾವಾಗ ಸೂಚನೆ ಕೊಡುತ್ತಾರೋ ಆಗ ವಿಸ್ತರಣೆ ಆಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಸಂಪುಟ ವಿಸ್ತರಣೆ, ಸಂಪುಟ ಪುನಾರಚನೆ ಆಗುತ್ತದೆ. ಆದರೆ, ಪಕ್ಷದ ವರಿಷ್ಠರು ಇನ್ನೂ ಸೂಚನೆ ನೀಡಿಲ್ಲ. ಸೂಕ್ತ ಸೂಚನೆಗಳು ಬಂದ ಬಳಿಕ ದೆಹಲಿಗೆ ಹೋಗಿ ಈ ಬಗ್ಗೆ ಅಂತಿಮಗೊಳಿಸಲಾಗುವುದು ಎಂದು ಅವರು ಭಾನುವಾರ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.
ನಮ್ಮ ಪಕ್ಷವನ್ನು ಬಿಟ್ಟು ಯಾರೂ ಹೊರ ಹೋಗುವುದಿಲ್ಲ. ಬೇರೆ ಪಕ್ಷಗಳಿಂದ ಬರುವವರ ಬಗ್ಗೆ ನೀವೆ ಕಾದು ನೋಡಿ. ಬಿಜೆಪಿ ಕಾರ್ಯಕಾರಣಿ ಸಭೆ ಮಾ.30 ಮತ್ತು 31ರಂದು ನಡೆಯುತ್ತದೆ. ಪ್ರಮುಖ ನಾಯಕರುಗಳ ರಾಜ್ಯ ಪ್ರವಾಸ, ಮುಂದಿನ ಚುನಾವಣೆಗಳಿಗೆ ತಯಾರಿ ಸೇರಿದಂತೆ ಹಲವು ವಿಷಯಗಳನ್ನು ಚರ್ಚಿಸಿ ಅಂತಿಮಗೊಳಿಸಲಾಗುವುದು ಎಂದು ಬೊಮ್ಮಾಯಿ ಹೇಳಿದರು.

ಅವಧಿಪೂರ್ವ ಚುನಾವಣೆ ಇಲ್ಲ:
ರಾಜ್ಯದಲ್ಲಿ ಅವಧಿ ಪೂರ್ವ ಚುನಾವಣೆಗೆ ಹೋಗುವ ಯಾವುದೇ ಆಲೋಚನೆಗಳು ಇಲ್ಲ, ಈ ಬಗ್ಗೆ ಚರ್ಚೆಯೂ ಆಗಿಲ್ಲ. ಇದೆಲ್ಲವೂ ಊಹಾಪೋಹ ಮತ್ತು ಕೆಲವರ ಸೃಷ್ಟಿ ಮಾತ್ರ. ಐದು ವರ್ಷದ ಅಧಿಕಾರ ಪೂರ್ಣಗೊಳಿಸಿಯೇ ಚುನಾವಣೆಗೆ ಹೋಗಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದರು.

ನವೀನ್ ಮೃತದೇಹ ತರುವ ಪ್ರತ್ನ ನಡೆಯುತ್ತಿದೆ:
ಉಕ್ರೇನ್‌ನಲ್ಲಿ ಮೃತಪಟ್ಟಿರುವ ಹಾವೇರಿಯ ವಿದ್ಯಾರ್ಥಿ ನವೀನ್ ಮೃತದೇಹವನ್ನು ತರುವ ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದರು.
ಸದ್ಯ ಉಕ್ರೇನ್‌ನಲ್ಲಿ ಬಾಂಬಿಂಗ್ ನಡೆಯುತ್ತಿದೆ. ಬಾಂಬಿಂಗ್ ಸ್ಥಗಿತಗೊಂಡ ಬಳಿಕ ಏರ್‌ಲಿಫ್ಟ್ ಮಾಡಲಾಗುವುದು. ಉಕ್ರೇನ್‌ನಲ್ಲಿರುವ ಭಾರತೀಯರ ಸ್ಥಳಾಂತರ ಅಂತಿಮ ಹಂತಕ್ಕೆ ಬಂದಿದೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.












Click it and Unblock the Notifications