ಕೊನೆಯ ಕ್ಷಣದ ವರೆಗೆ ತಲೆನೋವೇ ಆಗಿರುವ ಸಂಪುಟ ವಿಸ್ತರಣೆ
ಬೆಂಗಳೂರು, ಜೂನ್ 06: ಇಂದು ಮಧ್ಯಾಹ್ವ 2:12 ಕ್ಕೆ ಹೊಸ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಆದರೆ ಈ ವರೆಗೆ ಎರಡೂ ಪಕ್ಷಗಳಲ್ಲಿ ಗೊಂದಲಗಳ ನಿವಾರಣೆ ಆಗಿಲ್ಲ.
ಪ್ರಮಾಣ ವಚನ ಸ್ವೀಕರಕ್ಕೆ ಕೆಲವೇ ಗಂಟೆಗಳು ಉಳಿದಿರುವಾಗಲೂ ಕೂಡ ಪರಮೇಶ್ವರ್, ಸಿಎಂ ಕುಮಾರಸ್ವಾಮಿ ಅವರಂತಹಾ ಹಿರಿಯ ನಾಯಕರುಗಳು ಸಂಪುಟ ವಿಸ್ತರಣೆ ಸಂಬಂಧಿಸಿದ ಮಾಧ್ಯಮಗಳ ಪ್ರಶ್ನೆಗಳಿಗೆ ನುಣುಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆಂದರೆ ಸಂಪುಟ ವಿಸ್ತರಣೆಯಲ್ಲಿ ಪಕ್ಷದಲ್ಲಿ ಒಮ್ಮತವಿಲ್ಲ ಎಂಬುದಕ್ಕೆ ಸ್ಪಷ್ಟ ಉದಾಹರಣೆ ಇದು.
ಜೆಡಿಎಸ್ 12 ಖಾತೆ ಹಾಗೂ ಕಾಂಗ್ರೆಸ್ 22 ಖಾತೆಗಳನ್ನು ಹಂಚಿಕೊಂಡಿವೆ ಆದರೆ ಎರಡೂ ಪಕ್ಷಗಳು ಎಲ್ಲಾ ಸ್ಥಾನವನ್ನು ತುಂಬಿಕೊಳ್ಳದೆ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗುತ್ತಿವೆ. ಇದಕ್ಕೆ ಪ್ರಮುಖ ಕಾರಣ ಎರಡೂ ಪಕ್ಷಗಳಿಗೆ ಕಾಡುತ್ತಿರುವ ಬಂಡಾಯದ ಭಯ.

ಎರಡೂ ಪಕ್ಷಗಳ ಅತ್ಯಂತ ಪ್ರಮುಖ ನಾಯಕರುಗಳೇ ಸಚಿವ ಸ್ಥಾನಕ್ಕೆ ರಚ್ಚೆ ಹಿಡಿದಿದ್ದು ಈ ರೀತಿಯ ಗೊಂದಲಗಳಿಗೆ ಮುಖ್ಯ ಕಾರಣ ಎನ್ನಬಹುದು. ಎತ್ತೇ ಕೆಸರಿಗಳಿದರೆ ಎಮ್ಮೆ ಇಳಿಯದೇ ಇರುತ್ತದೆಯೇ. ದೊಡ್ಡ ನಾಯಕರೇ ರಚ್ಚೆ ಹಿಡಿದಮೇಲೆ ಸಣ್ಣ-ಪುಟ್ಟ ನಾಯಕರೂ ಸಚಿವ ಸ್ಥಾನಕ್ಕಾಗಿ ಅರ್ಜಿಗಳನ್ನು ಹಾಕಿ ಸಂಪುಟ ವಿಸ್ತರಣೆಯನ್ನು ಮತ್ತಷ್ಟು ಗೊಂದಲದ ಗೂಡಾಗಿ ಮಾಡಿದರು.
ಮೈತ್ರಿ ಸರ್ಕಾರದ ಸಮಸ್ಯೆಗಳಲ್ಲಿ ಇದೂ ಒಂದು. ಮೈತ್ರಿ ಸರ್ಕಾರದಲ್ಲಿ ಆಕಾಂಕ್ಷಿಗಳು ಹೆಚ್ಚು ಆದರೆ ಅವಕಾಶಗಳು ಕಡಿಮೆ ಹಾಗಾಗಿ ಸಚಿವ ಸ್ಥಾನ ಹಂಚಿಕೆ ಎಂಬುದು ಇಲ್ಲಿ ಸದಾ ಕಬ್ಬಿಣದ ಕಡಲೆ. ಒಮ್ಮೊಮ್ಮೆ ಯೋಗ್ಯರಿಗೆ ಅವಕಾಶ ಸಿಗದೇ ಅಯೋಗ್ಯರಿಗೆ ಪರಿಸ್ಥತಿಗೆ ಸಿಲುಕಿ ಮಣೆ ಹಾಕಲೇ ಬೇಕಾಗುತ್ತದೆ.
ಎರಡೂ ಪಕ್ಷದ ಮುಖಂಡರುಗಳಿಗೆ ತಮ್ಮ ಶಾಸಕರ ಮೇಲೆ ಹಿಡಿತ ಕಡಿಮೆ ಆದಂತೆಯೂ ಕಾಣುತ್ತಿದೆ. ಜೆಡಿಎಸ್‌ನಲ್ಲಿಯಂತೂ ದೇವೇಗೌಡರ ಮಾನಸ ಪುತ್ರ ಶರವಣ ಅವರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಲವರು ಮಂತ್ರಿ ಸ್ಥಾನ ನೀಡದಿದ್ದರೆ ಪಕ್ಷ ಬಿಡುವುದಾಗಿ ಬೆದರಿಸಿದ್ದಾರೆ ಎಂಬ ಸುದ್ದಿಯೂ ಇದೆ.
'ಖಾತೆ ಹಂಚಿಕೆ ಮುಗಿಯುವುದರೊಳಗೆ ಸರ್ಕಾರ ಉರುಳಿ ಬೀಳುತ್ತದೆ' ಎಂದು ಯಡಿಯೂರಪ್ಪ ಅವರು ಹೇಳಿದ್ದರು. ಈಗ ನೋಡಿದರೆ ಎರಡೂ ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಸ್ಪಷ್ಟವಾಗಿ ಕಾಣುತ್ತಿದೆ. ಈ ಎಲ್ಲಾ ಬೆಳವಣಿಗೆಗಳನ್ನು ಹತ್ತಿರದಿಂದ ಗಮನಿಸುತ್ತಿರುವ ಬಿಜೆಪಿ ಮನಸ್ಸಿನಲ್ಲೇ ಮಂಡಿಗೆ ತಿನ್ನುತ್ತಿರುವುದು ಖಂಡಿತ.












Click it and Unblock the Notifications