ಸಂಪುಟ ವಿಸ್ತರಣೆ; ಕೊನೆ ಕ್ಷಣದಲ್ಲಿ ಹೈಕಮಾಂಡ್ ಕೊಟ್ಟ ಟ್ವಿಸ್ಟ್!
ಬೆಂಗಳೂರು, ಫೆಬ್ರವರಿ 06 : ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸಂಪುಟ ವಿಸ್ತರಣೆಗೆ ದೊಡ್ಡ ತಿರುವು ಸಿಕ್ಕಿದೆ. ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದ ಮೂಲ ಬಿಜೆಪಿ ಶಾಸಕರಿಗೆ ನಿರಾಸೆಯಾಗಿದೆ. ಹೈಕಮಾಂಡ್ ಕೊನೆ ಕ್ಷಣದಲ್ಲಿ ನೀಡಿದ ಸೂಚನೆ ಯಡಿಯೂರಪ್ಪ ಪಾಲಿಗೆ ಬಿಸಿತುಪ್ಪವಾಗಿದೆ.
ಗುರುವಾರ ಬೆಳಗ್ಗೆ ರಾಜಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ 10 ಶಾಸಕರು ಯಡಿಯೂರಪ್ಪ ಸಂಪುಟಕ್ಕೆ ಸೇರ್ಪಡೆಗೊಳ್ಳಲಿದ್ದಾರೆ. ಸಂಪುಟ ಸೇರುವ ಎಲ್ಲಾ ಶಾಸಕರು ಕಾಂಗ್ರೆಸ್ ಮತ್ತು ಜೆಡಿಎಸ್‌ನಿಂದ ಬಂದು ಉಪ ಚುನಾವಣೆಯಲ್ಲಿ ಗೆದ್ದು 'ಅರ್ಹ' ಎನಿಸಿಕೊಂಡವರು.
ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದ ಮೂಲ ಬಿಜೆಪಿ ಶಾಸಕರಿಗೆ ನಿರಾಸೆಯಾಗಿದೆ. 10 ಅರ್ಹ ಶಾಸಕರ ಜೊತೆ ಮೂವರು ಮೂಲ ಬಿಜೆಪಿಗರು ಪ್ರಮಾಣ ವಚನ ಸ್ವೀಕಾರ ಮಾಡಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ಕೊನೆ ಕ್ಷಣದಲ್ಲಿ ಹೈಕಮಾಂಡ್ ಇದಕ್ಕೆ ತಡೆ ನೀಡಿದೆ.
ಸಂಪುಟ ಸೇರಬೇಕು ಎಂಬ ಮೂಲ ಬಿಜೆಪಿ ಶಾಸಕರ ನಡುವಿನ ಪೈಪೋಟಿ, ಮಾಧ್ಯಮಗಳ ಮುಂದೆ ನೀಡಿರುವ ಹೇಳಿಕೆಗಳು, ವಿವಿಧ ಶಾಸಕರ ಸಭೆಗಳು ಎಲ್ಲವನ್ನೂ ಗಮನಿಸಿರುವ ಹೈಕಮಾಂಡ್ ಮೂಲ ಬಿಜೆಪಿ ಶಾಸಕರು ಈಗ ಸಂಪುಟ ಸೇರುವುದು ಬೇಡ ಎಂದು ಹೇಳಿದೆ.

ಸಂಪುಟ ಸೇರುವ ಶಾಸಕರ ಪಟ್ಟಿ
ಗುರುವಾರ ಬೆಳಗ್ಗೆ 10.30ಕ್ಕೆ ಸಂಪುಟ ದರ್ಜೆ ಸಚಿವರಾಗಿ ಎಸ್. ಟಿ. ಸೋಮಶೇಖರ್, ರಮೇಶ್ ಜಾರಕಿಹೊಳಿ, ಆನಂದ್ ಸಿಂಗ್, ಕೆ. ಸುಧಾಕರ್, ಬೈರತಿ ಬಸವರಾಜ, ಶಿವರಾಂ ಹೆಬ್ಬಾರ್, ಬಿ. ಸಿ. ಪಾಟೀಲ್, ಕೆ. ಗೋಪಾಲಯ್ಯ, ನಾರಾಯಣ ಗೌಡ, ಶ್ರೀಮಂತ ಪಾಟೀಲ್ ಬಿ. ಎಸ್. ಯಡಿಯೂರಪ್ಪ ಸಂಪುಟವನ್ನು ಸೇರುತ್ತಿದ್ದಾರೆ.

ಜೆಡಿಎಸ್, ಕಾಂಗ್ರೆಸ್‌ನಿಂದ ಬಂದವರು
ಸಂಪುಟ ಸೇರುತ್ತಿರುವ ಎಲ್ಲಾ 10 ಶಾಸಕರು ಕಾಂಗ್ರೆಸ್ ಮತ್ತು ಜೆಡಿಎಸ್‌ನಿಂದ ಬಿಜೆಪಿಗೆ ಬಂದವರು. ಮೈತ್ರಿ ಸರ್ಕಾರವಿದ್ದಾಗ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಅನರ್ಹರಾದವರು. ಸುಪ್ರೀಂಕೋರ್ಟ್‌ನಲ್ಲಿ ಸ್ಪೀಕರ್ ಆದೇಶ ಪ್ರಶ್ನೆ ಮಾಡಿ, ಉಪ ಚುನಾವಣೆ ಕಣಕ್ಕಿಳಿದು 'ಅರ್ಹ'ರೆಂದು ಎನಿಸಿಕೊಂಡವರು. ಒಂದು ಅರ್ಥದಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣರಾದವರು.

ಯಡಿಯೂರಪ್ಪ ಏನು ಹೇಳಿದ್ದರು?
ಸಂಪುಟ ವಿಸ್ತರಣೆ ಬಗ್ಗೆ ಮಾತನಾಡಿದ್ದ ಯಡಿಯೂರಪ್ಪ, "10+3 ಶಾಸಕರು ಸಂಪುಟ ಸೇರಲಿದ್ದಾರೆ" ಎಂದು ಹೇಳಿದ್ದರು. ಆದರೆ, ಹೈಕಮಾಂಡ್ ಮೂವರು ಮೂಲ ಬಿಜೆಪಿ ಶಾಸಕರು ಸಂಪುಟ ಸೇರುವುದಕ್ಕೆ ತಡೆ ನೀಡಿದೆ. ಆದ್ದರಿಂದ, ಗುರುವಾರ 10 ಶಾಸಕರು ಮಾತ್ರ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.

ಹೈಕಮಾಂಡ್ ಪೋನ್ ಕರೆ
ಕಲಬುರಗಿಯಲ್ಲಿ ಸಾಹಿತ್ಯ ಸಮ್ಮೇಳನದಲ್ಲಿದ್ದ ಯಡಿಯೂರಪ್ಪಗೆ ಕರೆ ಮಾಡಿದ್ದ ಹೈಕಮಾಂಡ್ ನಾಯಕರು 10 ಶಾಸಕರು ಮಾತ್ರ ಸಂಪುಟ ಸೇರಲಿ. ಬಳಿಕ ದೆಹಲಿಗೆ ಬನ್ನಿ ಚರ್ಚೆ ನಡೆಸೋಣ ಎಂಬ ಸಂದೇಶ ನೀಡಿದರು. ಆದ್ದರಿಂದ, ಬೆಂಗಳೂರಿಗೆ ಆಗಮಿಸಿದ ತಕ್ಷಣ ಯಡಿಯೂರಪ್ಪ 10 ಶಾಸಕರು ಸಂಪುಟ ಸೇರಲಿದ್ದಾರೆ ಎಂದು ಘೋಷಣೆ ಮಾಡಿದರು. ರಾಜಭವನಕ್ಕೆ ನೂತನ ಸಚಿವರ ಪಟ್ಟಿಯನ್ನು ಕಳಿಸಿದರು.

6 ಸ್ಥಾನಗಳು ಬಾಕಿ ಉಳಿಯಲಿವೆ
ಗುರುವಾರದ ಸಂಪುಟ ವಿಸ್ತರಣೆ ಬಳಿಕ ಯಡಿಯೂರಪ್ಪ ಸಂಪುಟದಲ್ಲಿ 6 ಸಚಿವ ಸ್ಥಾನಗಳು ಖಾಲಿ ಉಳಿಯಲಿವೆ. ಜೂನ್‌ನಲ್ಲಿ ಮೂಲ ಬಿಜೆಪಿ ಶಾಸಕರಿಗೆ ಸಚಿವ ಸ್ಥಾನವನ್ನು ನೀಡಿ ಸಂಪುಟಕ್ಕೆ ಸೇರಿಸಿಕೊಳ್ಳುವ ನಿರೀಕ್ಷೆ ಇದೆ.












Click it and Unblock the Notifications