ಶಾಲಾ ಕಾಲೇಜುಗಳಲ್ಲಿ ಪ್ರತಿದಿನ ಸಂವಿಧಾನ ಓದುವುದು ಕಡ್ಡಾಯ: ಸಂಪುಟ ತೀರ್ಮಾನ
ಬೆಂಗಳೂರು, ಜೂನ್ 15: ಶಾಲೆ, ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಪ್ರತಿದಿನ ಸಂವಿಧಾನದ ಪೀಠಿಕೆ ಓದುವುದು ಕಡ್ಡಾಯ ಮಾಡಿ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಸಿ ಮಹದೇವಪ್ಪ ರಾಜ್ಯ ಸರ್ಕಾರದ ಮಹತ್ವದ ನಿರ್ಧಾರದ ಬಗ್ಗೆ ತಿಳಿಸಿದ್ದಾರೆ.
ಸಚಿವ ಸಂಪುಟ ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಾಲೆ, ಕಾಲೇಜು, ವಿವಿಗಳಲ್ಲಿ ಪ್ರತಿದಿನ ಸಂವಿಧಾನದ ಪೀಠಿಕೆ ಓದುವುದನ್ನು ಕಡ್ಡಾಯ ಮಾಡಲಾಗಿದೆ. ಸರ್ಕಾರಿ, ಖಾಸಗಿ ಶಾಲೆ, ಕಾಲೇಜುಗಳಲ್ಲಿ ಓದಬೇಕು. ಇದು ದೇಶದ ಜನರ ನೈತಿಕ ಮಟ್ಟವನ್ನು ಹೆಚ್ಚಿಸುತ್ತದೆ. ಆ ಕಾರಣದಿಂದ ವಿದ್ಯಾರ್ಥಿಗಳಿಗೆ ನೈತಿಕ ಜವಾಬ್ದಾರಿಗಳ ಬಗ್ಗೆ ಮಕ್ಕಳಿಗೆ ಅರಿವು ಮೂಡಲಿ ಎಂಬ ಕಾರಣಕ್ಕೆ ಪ್ರತಿ ಶಾಲೆಗಳಲ್ಲೂ ಸಂವಿಧಾನ ಓದಬೇಕು ಎಂದರು.

1949ರಲ್ಲಿ ನಾವೆಲ್ಲರೂ ಸಂವಿಧಾನ ಒಪ್ಪಿದ್ದೇವೆ. ಅದರಂತೆ ನಾವು ಪಾಲಿಸುತ್ತಾ ಬಂದಿದ್ದೇವೆ. ಸಂವಿಧಾನ ದೇಶದ 144 ಕೋಟಿ ಜನರ ಹಕ್ಕು ರಕ್ಷಿಸುತ್ತಿದೆ. ಎಲ್ಲಾ ಧರ್ಮಗಳು ಆಚಾರ, ವಿಚಾರಕ್ಕೆ ಅವಕಾಶವಿದೆ. ಸಹೋದರತ್ವಕ್ಕೆ ಒತ್ತು ನೀಡಿದೆ. ಸಂವಿಧಾನ ಮೂಲ ರಚನೆ ಉದ್ದೇಶ ಒಂದೇ ಇದೆ. ಆ ಕಾರಣ ನಾವು ಎಲ್ಲರೂ ಸಂವಿಧಾನವನ್ನು ಗೌರವಿಸಬೇಕು. ಹೀಗಾಗಿ ಶಾಲಾ ಕಾಲೇಜುಗಳಲ್ಲಿ ಸಂವಿಧಾನದ ಪೀಠಿಕೆ ಓದಬೇಕು. ಸರ್ಕಾರಿ ಕಚೇರಿ ಹಾಗೂ ಅರೆ ಸರ್ಕಾರಿ ಕಚೇರಿಗಳಲ್ಲಿ ಸಂವಿಧಾನದ ಪೀಠಿಕೆ ಹಾಕಬೇಕು ಎಂದು ಸಚಿವ ಹೆಚ್.ಸಿ ಮಹದೇವಪ್ಪ ಹೇಳಿದ್ದಾರೆ.
ಇನ್ನು ಇಂದಿನ ಸಚಿವ ಸಂಪುಟದಲ್ಲಿ ಬಿಜೆಪಿ ಅವಧಿಯಲ್ಲಿ ಮಾಡಿದ್ದ ಪಠ್ಯ ಪರಿಷ್ಕರಣೆಗೆ ಕೊಕ್ ನೀಡಲು ನಿರ್ಧರಿಸಿದ್ದಾರೆ. ಬಿಜೆಪಿ ಶಾಲಾ ಪಠ್ಯದಲ್ಲಿ ಸೇರಿಸಿದ್ದ ಹೆಡಗೆವಾರ್, ಚಕ್ರವರ್ತಿ ಸೂಲೆಬೆಲೆ, ವೀರ್ ಸಾವರ್ಕರ್ ಪಠ್ಯವನ್ನು ತೆಗೆಯಲಾಗಿದೆ. ಇನ್ನು ಜವಾಹರ್ ಲಾಲ್ ನೆಹರು, ಡಾ. ಬಿ.ಆರ್ ಅಂಬೇಡ್ಕರ್ ಹಾಗೂ ಸಾವಿತ್ರಿ ಭಾಯಿ ಪುಲೆ ಸೇರಿದಂತೆ ಕೆಲ ಪಠ್ಯಗಳನ್ನು ಸೇರ್ಪಡೆಗೆ ಸಂಪುಟ ಅನುಮೋದನೆ ನೀಡಿದೆ ಎನ್ನಲಾಗಿದೆ.












Click it and Unblock the Notifications