ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಹುದ್ದೆ ತಾತ್ಕಾಲಿಕವೇ? ಪ್ರಮುಖ ಲಿಂಗಾಯತ ನಾಯಕ ನೀಡಿದ ಮಹತ್ವದ ಸುಳಿವೇನು?
ಬೆಂಗಳೂರು, ನವೆಂಬರ್ 13: ನೂತನವಾಗಿ ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಜಿ ಮುಖ್ಯಮಂತ್ರಿ ಹಾಗೂ ಪ್ರಭಾವಿ ಲಿಂಗಾಯತ ನಾಯಕ ಬಿ ಎಸ್ ಯಡಿಯೂರಪ್ಪ ಅವರ ಪುತ್ರ ಬಿ ವೈ ವಿಜಯೇಂದ್ರ ಅವರನ್ನ ಬಿಜೆಪಿ ಹೈಕಮಾಂಡ್ ಆಯ್ಕೆ ಮಾಡಿದೆ. ಆದರೆ, ಬಿ ವೈ ವಿಜಯೇಂದ್ರ ಅವರಿಗೆ ಹೈಕಮಾಂಡ್ ಮಣೆ ಹಾಕಿದಕ್ಕೇ ಬಿಜೆಪಿ ಹಿರಿಯ ನಾಯಕರು ಪರೋಕ್ಷವಾಗಿ ಅಸಮಾಧಾನಗೊಂಡಿದ್ದಾರೆ. ಅಲ್ಲದೇ ಈ ಹುದ್ದೆ ತಾತ್ಕಾಲಿಕವೇ ಎನ್ನುವ ಚರ್ಚೆ ಶುರುವಾಗಿದೆ.
ಈ ಬಗ್ಗೆ ಪ್ರಮುಖ ಲಿಂಗಾಯತ ನಾಯಕರು ಹಾಗೂ ಸಚಿವರಾದ ಎಂ ಬಿ ಪಾಟೀಲ್ ಟ್ವೀಟ್ ಮಾಡಿದ್ದ, ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿದ್ದಕ್ಕೆ ಶುಭ ಹಾರೈಸಿದ್ದು, ಪ್ರಾಮಾಣಿಕತೆಗಾಗಿ ಬಿಜೆಪಿ ಹೈಕಮಾಂಡ್‌ಗೆ ಅಭಿನಂದನೆ ಸಲ್ಲಿಸುತ್ತೇನೆ. ಆದರೆ, ಸಂಸತ್ತಿನ ಚುನಾವಣೆಗೆ ಅವರು ಬಿ ವೈ ವಿಜಯೇಂದ್ರ ಅವರನ್ನ ರಾಜ್ಯಾಧ್ಯಕ್ಷರಾಗಿ ಬಳಸಿಕೊಳ್ಳುತ್ತಾರೆ ಹಾಗೂ ಲೋಕಸಭಾ ಚುನಾವಣೆ ಮುಗಿದ ಬಳಿಕ ತಿರಸ್ಕರಿಸುತ್ತಾರೆ ಎಂದು ಹೇಳಿದ್ದಾರೆ.

ಇನ್ನೂ ಈ ಕುರಿತು ರಾಜ್ಯ ಕಾಂಗ್ರೆಸ್ ಟ್ವೀಟ್ ಮಾಡಿದ್ದು, ಯಡಿಯೂರಪ್ಪನವರ ಮಗನ ರಾಜ್ಯಾಧ್ಯಕ್ಷ ಹುದ್ದೆ ಕೇವಲ ಲೋಕಸಭೆ ಚುನಾವಣೆವರೆಗೆ ಮಾತ್ರ ಎಂಬ ಗುಸುಗುಸು ಪಿಸುಪಿಸು ಜಗನ್ನಾಥ ಭವನದಲ್ಲಿ ಕೇಳಿ ಬರುತ್ತಿದೆಯಂತೆ! ಇದು ಸಿ ಟಿ ರವಿ, ಬಸವನಗೌಡ ಪಾಟೀಲ್ ಯತ್ನಾಳ್, ಹಾಗೂ ಬಿ ಎಲ್ ಸಂತೋಷ್ ಅವರುಗಳು ಸಮಾಧಾನ ಮಾಡಿಕೊಳ್ಳುತ್ತಿರುವುದೋ ಅಥವಾ ನೈಜತೆ ಇದೆಯೋ ರಾಜ್ಯ ಬಿಜೆಪಿ ಸ್ಪಷ್ಟಪಡಿಸಬೇಕು ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಬಿಜೆಪಿಯಲ್ಲಿ ಹಿರಿಯ ನಾಯಕರನ್ನ ಕಡೆಗಣಿಸಿ ಬಿ ವೈ ವಿಜಯೇಂದ್ರ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿರುವ ಕುರಿತು ಬಿಜೆಪಿ ಪಾಳಯದಲ್ಲಿ ಹಲವು ನಾಯಕರು ಅಸಮಾಧಾನಗೊಂಡಿದ್ದಾರೆ. ಈ ಬಗ್ಗೆ ಸಿ ಟಿ ರವಿ ಅವರು ಮಾತನಾಡಿ, ಬದಲಾಗದೆ ಇರೋದು ಕಾರ್ಯಕರ್ತ ಅನ್ನೋದು, ನಾನೊಬ್ಬ ಈಗ ಸಾಮಾನ್ಯ ಕಾರ್ಯಕರ್ತ ಅಷ್ಟೆ. 35 ವರ್ಷಗಳ ರಾಜಕೀಯದಲ್ಲಿ ಈಗಾಗಲೆ ಬಹಳ ವಿಷಯ ಮಾತನಾಡಿ ಬಿಟ್ಟಿದ್ದೇನೆ. ಈಗ ಏನಾದ್ರು ಮಾತನಾಡಿದ್ರೆ ನಮ್ಮ ಮಾತೆ ನಮಗೆ ತಿರುಗುಬಾಣವಾಗುತ್ತೆ ಎಂದು ಹೇಳಿದರು.
ಪಕ್ಷ ನೇಮಕ ಮಾಡಿದೆ ವೈಚಾರಿಕ ಭದ್ರತೆ ಜೊತೆಗೆ ಪಕ್ಷ ಕಟ್ಟುವ ಬೆಳೆಸುವ ಕೆಲಸ ಮಾಡಬೇಕಿದೆ. ಜೊತೆಗೆ ಲೋಕಸಭಾ ಚುನಾವಣೆಯಲ್ಲಿ 28ಕ್ಕೆ 28 ಸ್ಥಾನ ಗೆಲ್ಲಿಸುವ ಹೊಣೆಗಾರಿಕೆ ಇದೆ. ಅಸಮಾಧಾನದ ಬಗ್ಗೆ ಈಗ ನಾನು ಏನು ಮಾತನಾಡಲ್ಲ. ಈಗಾಗಲೆ ಬಹಳಷ್ಟು ಮಾತನಾಡಿದ್ದೇನೆ. 35 ವರ್ಷಗಳಿಂದ ರಾಜಕೀಯ ಕ್ಷೇತ್ರದಲ್ಲಿದ್ದೀನಿ. ಬೂತ್ ಅಧ್ಯಕ್ಷನಿಂದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿವರೆಗೆ ಜವಾಬ್ದಾರಿ ನಿರ್ವಹಿಸಿದ್ದೀನಿ. ನನಗಂತೂ ಅಸಮಾಧಾನವಿಲ್ಲ ನಾನು ಪಕ್ಷದ ಜವಬ್ದಾರಿ ಕೇಳಿ ಪಡೆದವನಲ್ಲ ಎಂದು ಹೇಳಿಕೆ ನೀಡುವ ಮೂಲಕ ಬಿಜೆಪಿ ನಾಯಕ ಸಿಟಿ ರವಿ ಅವರು ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಮನಿಗೆ ಮತ್ತು ಪಾಂಡವರಿಗೂ ವನವಾಸ ತಪ್ಪಿಲ್ಲ ಇನ್ನೂ ಸಿ ಟಿ ರವಿ ಅವರಿಗಿಂತ ನಾನು ದೊಡ್ಡವನಾ? ಸ್ವರ್ಧೆಯೇ ಇಲ್ಲದಿದ್ದಾಗ ರೇಸಿನ ಪ್ರಶ್ನೆಯೇ ಇಲ್ಲ. ಇದೀಗಾ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಬೇಸರ ವ್ಯಕ್ತಪಡಿಸಿದರು.












Click it and Unblock the Notifications