Karnataka BJP: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಕೈ ತಪ್ಪುವ ಬಗ್ಗೆ ವಿಜಯೇಂದ್ರ ಸುಳಿವು?
ಕರ್ನಾಟಕ ಬಿಜೆಪಿ ಮನೆಗೆ ಸದ್ಯ ರಾಜ್ಯಾಧ್ಯಕ್ಷರ ಬದಲಾವಣೆಯ ಕಿಡಿ ಹೊತ್ತುಕೊಂಡಿದೆ. ರಾಜ್ಯಾಧ್ಯಕ್ಷ ಸ್ಥಾನದಿಂದಲೇ ಬಣ ರಾಜಕೀಯಕ್ಕೆ ತಿರುಗಿರುವ ಕೇಸರಿ ನಾಯಕರ ಕಿತ್ತಾಟ ಕೊನೆಗೆ ರಾಜ್ಯಾಧ್ಯಕ್ಷರ ಚುನಾವಣೆ ನಡೆಯುವ ಹಂತ ತಲುಪಿದೆ. ಹಾಲಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ನಾನೇ ಮುಂದೆಯೂ ರಾಜ್ಯಾಧ್ಯಕ್ಷ ಎನ್ನುತ್ತಿದ್ದರು. ಇದೀಗ ಅವರ ಮಾತಿನ ವರಸೆ ದಿಢೀರ್ ಬದಲಾಗಿದೆ. ರಾಜ್ಯಾಧ್ಯಕ್ಷ ಸ್ಥಾನ ಕೈತಪ್ಪುವ ಬಗ್ಗೆ ವಿಜಯೇಂದ್ರ ಅವರಿಗೆ ಈಗಾಗಲೇ ಸೂಚನೆ ಸಿಕ್ಕಿದೆಯಾ? ಎಂಬ ಚರ್ಚೆಗಳು ಕೂಡ ನಡೆಯುತ್ತಿವೆ.
ಹೌದು ರಾಜ್ಯದಲ್ಲಿ ಬಿಜೆಪಿ ಅಧ್ಯಕ್ಷ ಸ್ಥಾನದ ಬದಲಾವಣೆ ವಿಚಾರ ಮುನ್ನೆಲೆಗೆ ಬಂದ ಕೂಡಲೇ ವಿಜಯೇಂದ್ರ ಅವರು ಕೂಡಲೇ ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರ ಜೊತೆ ಮಾತನಾಡಿ ಬಂದಿದ್ದರು. ಬಳಿಕ ರಾಜ್ಯಾಧ್ಯಕ್ಷ ಸ್ಥಾನ ಗಟ್ಟಿಯಾಗಿದೆ ಎಂದೇ ಅವರು ಸಂದೇಶ ರವಾನಿಸಿದ್ದರು. ಇದರ ನಡುವೆ ರಾಜ್ಯಕ್ಕೆ ಬಂದಿದ್ದ ಉಸ್ತುವಾರಿಗಳು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸುವುದಾಗಿ ಶಾಕ್ ಕೊಟ್ಟರು.

ಈ ಬೆಳವಣಿಗೆಗಳು ಒಂದೆಡೆಯಾದರೆ ಮತ್ತೊಂದೆಡೆ ಬಣ ಬಡಿದಾಟದಲ್ಲಿ ಮುಂಚೂಣಿಯಲ್ಲಿದ್ದ ಬಸನಗೌಡ ಪಾಟೀಲ್ ಯತ್ನಾಳ್ ಅವರು ಕೂಡ ತಮ್ಮ ಬಣದಿಂದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದಾಗಿ ಹೇಳಿಕೊಂಡಿದ್ದಾರೆ. ಅಲ್ಲದೆ ತಮ್ಮ ಗೆಲುವು ನಿಶ್ಚಿತ ಎಂದೂ ಅವರು ವಿಶ್ವಾಸದಲ್ಲಿದ್ದಾರೆ. ಇಂದು ಇದೇ ವಿಚಾರದ ಬಗ್ಗೆ ಮಾತನಾಡಿರುವ ಹಾಲಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ತಾನು ಎಲ್ಲದಕ್ಕೂ ಸಿದ್ಧ ಎಂದು ಹೇಳಿದ್ದಾರೆ.
ವಿಜಯೇಂದ್ರ ಹೇಳಿಕೆ ಬೆನ್ನಲ್ಲೇ ಬಿಜೆಪಿಯಲ್ಲೇ ಹಲವು ಚರ್ಚೆಗಳಿಗೆ ಕಾರಣವಾಗಿದೆ. ಇಲ್ಲಿವರೆಗೆ ತಮ್ಮ ಸ್ಥಾನ ಭದ್ರವಾಗಿದೆ ಎನ್ನುತ್ತಿದ್ದ ವಿಜಯೇಂದ್ರ ಅವರು ಇದೀಗ ಎಲ್ಲದಕ್ಕೂ ಸಿದ್ಧ ಎಂದು ಹೇಳುತ್ತಿದ್ದು, ತಮಗೆ ರಾಜ್ಯಾಧ್ಯಕ್ಷ ಸ್ಥಾನ ಕೈತಪ್ಪುವ ಸೂಚನೆ ಮೊದಲೇ ಸಿಕ್ಕಂತಿದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

ದಿನಬೆಳಗಾದರೆ ಯತ್ನಾಳ್ ಅವರ ಬಗ್ಗೆ ಮಾತನಾಡುವ ಪರಿಸ್ಥಿತಿಯಲ್ಲಿ ನಾನಿಲ್ಲ. ಸಮಸ್ಯೆಗಳು ಹಾಗೂ ಕೆಲಸಗಳು ಸಾಕಷ್ಟಿವೆ. ಅದರ ಕಡೆಗೆ ಗಮನ ಕೊಡಬೇಕಿದೆ ಎಂದಿದ್ದಾರೆ. ನಮ್ಮ ಪಕ್ಷದಲ್ಲಿ ಆಂತರಿಕ ಚುನಾವಣೆ ನಡೆಯುತ್ತೆ, ನಾವು ಪ್ರಜಾಪ್ರಭುತ್ವವನ್ನು ಕಾಪಾಡಿಕೊಂಡು ಬಂದಿದ್ದೇವೆ. ಮುಂದಿನ ದಿನಗಳಲ್ಲಿ ರಾಜ್ಯಾಧ್ಯಕ್ಷರ ಆಯ್ಕೆ ಹೇಗೆ ನಡೆಯಬೇಕು? ಪ್ರಕ್ರಿಯೆ ಹೇಗೆ ನಡೆಯಬೇಕು ಎಂಬುದನ್ನು ಹೈಕಮಾಂಡ್ ನಿರ್ಧರಿಸುತ್ತೆ. ಪರಿಸ್ಥಿತಿ ಏನೇ ಇರಲಿ, ನಾನಂತೂ ಎಲ್ಲದಕ್ಕೂ ಸಿದ್ಧನಿದ್ದೇನೆ. ಒಳ್ಳೆಯದಾಗುತ್ತೆ ಅನ್ನೋ ಸಂಪೂರ್ಣ ವಿಶ್ವಾಸ ನನಗಿದೆ ಎಂದು ವಿಜಯೇಂದ್ರ ಹೇಳಿದ್ದಾರೆ.
ರಾಜ್ಯಾಧ್ಯಕ್ಷ ಸ್ಥಾನಕ್ಕೆ ಯತ್ನಾಳ್ ಅವರ ಬಣದಿಂದಲೂ ಪ್ರಬಲ ಸ್ಪರ್ಧಿ ಕಣಕ್ಕಿಳಿಯುತ್ತಾರೆ ಎನ್ನುವ ಮಾತಿತ್ತು. ಆದರೆ, ಈ ಬಗ್ಗೆ ಸ್ಪಷ್ಟಪಡಿಸಿರುವ ಯತ್ನಾಳ್, ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ನಾನು ಸಿದ್ಧವಾಗಿದ್ದೇನೆ ಎಂದಿದ್ದಾರೆ. ರಾಜ್ಯಾಧ್ಯಕ್ಷ ಸ್ಥಾನಕ್ಕೆ ನನ್ನ ಸ್ಪರ್ಧೆ ಖಚಿತ, ಗೆಲುವು ನಿಶ್ಚಿತ ಎನ್ನುವ ಮೂಲಕ ಯತ್ನಾಳ್ ಸಂಚಲನ ಸೃಷ್ಟಿಸಿದ್ದಾರೆ. ಹೈಕಮಾಂಡ್ ಕೂಡ ಯತ್ನಾಳ್ ಅವರ ಮೇಲೆ ನಿಗಾ ಇಟ್ಟಿದೆ ಎಂದು ಹೇಳಲಾಗುತ್ತಿದೆ. ಸದ್ಯ ಬೆಳವಣಿಗೆಗಳು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಯತ್ನಾಳ್ ಅವರತ್ತ ಬೊಟ್ಟು ಮಾಡುವಂತಿದೆ.












Click it and Unblock the Notifications