ಯಡಿಯೂರಪ್ಪ ಪುತ್ರ ವಿಜಯೇಂದ್ರಗೆ ಟ್ವೀಟ್‌ನಲ್ಲೂ ಶುಭಾಶಯ ಕೋರದ ಬಸನಗೌಡ ಪಾಟೀಲ್ ಯತ್ನಾಳ್: ಮುಂದುವರಿಯುತ್ತಾ ಆಂತರಿಕ ಸಂಘರ್ಷ?
ಯಡಿಯೂರಪ್ಪ ಅವರು ಮತ್ತೊಮ್ಮೆ ಕರ್ನಾಟಕದ ಬಿಜೆಪಿಯಲ್ಲಿ ತಮ್ಮ ಹಿಡಿತ ಏನೆಂದು ಸಾಬೀತು ಮಾಡಿದ್ದಾರೆ. ಬಿಜೆಪಿ ಕೇಂದ್ರ ನಾಯಕರು ಮಾಜಿ ಸಿಎಂ ಬಿಎಸ್‌ವೈಗೆ ಮತ್ತಷ್ಟು ಬಲ ತುಂಬಿದ್ದಾರೆ. ಇದೇ ಕಾರಣಕ್ಕೆ ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರಗೆ ಕರ್ನಾಟಕ ಬಿಜೆಪಿಯ ಸಾರಥಿ ಪಟ್ಟ ನೀಡಲಾಗಿದೆ ಅನ್ನೋ ಮಾತು ಕೇಳಿಬರುತ್ತಿದೆ. ಹೀಗೆ ಕರ್ನಾಟಕ ಬಿಜೆಪಿಯಲ್ಲಿ ಸಂತಸ ಮೂಡಿದಾಗಲೇ, ಯತ್ನಾಳ್ ಕೋಪ ಮುಂದುವರಿದಂತೆ ಕಾಣುತ್ತಿದೆ.
ಮಾಜಿ ಸಿಎಂ ಯಡಿಯೂರಪ್ಪರ ವಿರೋಧಿ ತಂಡದಲ್ಲಿ ನೇರವಾಗಿಯೇ ಗುರುತಿಸಿಕೊಂಡಿದ್ದ ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್, ಪದೇ ಪದೆ ಸುದ್ದಿಯಾಗುತ್ತಿದ್ದರು. ಆದ್ರೆ ಈ ಮುನಿಸು ಈಗ ತಣ್ಣಗಾಗಿದೆ ಎನ್ನುವಷ್ಟರಲ್ಲೇ ಬಿ.ವೈ.ವಿಜಯೇಂದ್ರ ಆಯ್ಕೆ ಕುರಿತಾಗಿ, ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಅಸಮಾಧಾನ ಮೂಡಿದಂತೆ ಕಾಣುತ್ತಿದೆ ಎನ್ನುವ ಆರೋಪ ಕೇಳಿಬಂದಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆ ಶುರುವಾದಾಗ, ಮಹತ್ವದ ಘಟನೆಯೊಂದು ಕೂಡ ನಡೆದಿದೆ. ಅರೆ ಏನದು ಘಟನೆ ಅಂದ್ರ? ಮುಂದೆ ಓದಿ.

ಯಡಿಯೂರಪ್ಪ ಪುತ್ರನ ಮೇಲೂ ವಿಜಯೇಂದ್ರ ಕೋಪ?
ಹೌದು, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅಜಾತಶತ್ರು ಎಂಬ ಬಿರುದು ಪಡೆದವರು. ಅದರಲ್ಲೂ ವಿರೋಧ ಪಕ್ಷದ ನಾಯಕರು ಕೂಡ, ಯಡಿಯೂರಪ್ಪ ಅವರ ಜೊತೆ ಉತ್ತಮ ಸ್ನೇಹ ಉಳಿಸಿಕೊಂಡಿದ್ದರು. ಆದ್ರೆ ಬಿಜೆಪಿ ಒಳಗೇ ಯಡಿಯೂರಪ್ಪ ಅವರ ವಿರುದ್ಧ ಹಗೆ ಸಾಧಿಸುವವರು ಹೆಚ್ಚಾಗಿದ್ದಾರೆ ಎಂಬ ಆರೋಪ ಕೇಳಿಬರುತ್ತಿತ್ತು. ಈ ಆರೋಪಗಳ ನಡುವೆಯೇ ಮಹತ್ವದ ಬೆಳವಣಿಗೆ ನಡೆದಿದೆ. ಅದು ಏನಂದ್ರೆ ವಿಜಯೇಂದ್ರ ಅವರು ಕರ್ನಾಟಕ ಬಿಜೆಪಿ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ರಾಜ್ಯದ ನಾಯಕರು ವಿಶ್ ಮಾಡಿದ್ದಾರೆ. ಕೇಂದ್ರದಿಂದ್ಲೂ ಶುಭಾಶಯ ಹರಿದು ಬಂದಿದೆ. ಆದ್ರೆ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮಾತ್ರ ತುಟಿ ಬಿಚ್ಚಿಲ್ಲ ಎಂಬ ಪ್ರಶ್ನೆ ಹರಿದಾಡ್ತಿದೆ.
ಸಣ್ಣಪುಟ್ಟ ವಿಚಾರಕ್ಕೂ ಟ್ವೀಟ್ ಮಾಡುವ ಯತ್ನಾಳ್
ಅಂದಹಾಗೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಜನ ಏನು ಹೇಳ್ತಿದ್ದಾರೆ ಅಂದ್ರೆ, ಇಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಅವ್ರು ಸಣ್ಣಪುಟ್ಟ ವಿಚಾರಕ್ಕೂ ಟ್ವಿಟ್ ಮಾಡ್ತಾ ಇರ್ತಾರೆ. ಆದರೆ ಇದೀಗ ಬಿ.ವೈ.ವಿಜಯೇಂದ್ರ ಅವರು ಕರ್ನಾಟಕ ಬಿಜೆಪಿ ಅಧ್ಯಕ್ಷರಾಗಿ ಆಯ್ಕೆಯಾದ ನಂತರವೂ ಟ್ವೀಟ್ ಮಾಡಿಲ್ಲ, ಶುಭಕೋರಿಲ್ಲ. ಇದು ಯಾಕೆ? ಅನ್ನೋ ಪ್ರಶ್ನೆ ಕೇಳ್ತಿದ್ದಾರೆ ಸೋಷಿಯಲ್ ಮೀಡಿಯಾ ಮಂದಿ. ಇದರ ಜೊತೆಗೆ ಬಿ.ವೈ.ವಿಜಯೇಂದ್ರ ಆಯ್ಕೆ ವಿರುದ್ಧ ಈಗ ಬಸನಗೌಡ ಪಾಟೀಲ್ ಯತ್ನಾಳ್ ಅಸಮಾಧಾನಗೊಂಡಿದ್ದಾರೆ ಅನ್ನೋ ಆರೋಪಗಳೂ ಕೇಳಿಬರುತ್ತಿವೆ. ಮತ್ತೊಂದ್ಕಡೆ ಸಿ.ಟಿ.ರವಿ ಅವರು ಈ ಬಗ್ಗೆ ಇಂದು ನೀಡಿರುವ ಪ್ರತಿಕ್ರಿಯೆ ಉಲ್ಲೇಖಿಸಿ ಚರ್ಚೆ ಮಾಡ್ತಿದ್ದಾರೆ ಸೋಷಿಯಲ್ ಮೀಡಿಯಾ ಬಳಕೆದಾರರು.

ಅಪ್ಪನಂತೆ ಪುತ್ರನ ಮೇಲೂ ಮುನಿಸು?
ಒಟ್ನಲ್ಲಿ ಇದೀಗ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸೈಲೆಂಟ್ ಆಗಿರುವುದು, ಹಲವು ರೀತಿಯ ಚರ್ಚೆಗೆ ಗ್ರಾಸವಾಗಿದೆ. ಹಾಗೇ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಯತ್ನಾಳ್ ಹೆಸರೂ ಮುಂಚೂಣಿಯಲ್ಲಿ ಇತ್ತು, ಜೊತೆಗೆ ಸಿ.ಟಿ.ರವಿ ಸೇರಿದಂತೆ ಹಲವರು ಯತ್ನಿಸಿದ್ದರು ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ಇವರನ್ನು ಲೆಕ್ಕಕ್ಕೆ ತೆಗೆದುಕೊಳ್ಳದ ಕೇಂದ್ರದ ಬಿಜೆಪಿ ನಾಯಕರು, ಬೇರೆಯದ್ದೇ ರಣತಂತ್ರ ಹೂಡಿರುವಂತೆ ಕಾಣುತ್ತಿದೆ. ಮತ್ತೊಂದು ಕಡೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿಯನ್ನು ತಳಮಟ್ಟದಿಂದ ಕಟ್ಟಿದ್ದ ಯಡಿಯೂರಪ್ಪ ಅವರ ಮಾತಿಗೆ ಬೆಲೆ ಕೊಟ್ಟಿದ್ದಾರೆ ವರಿಷ್ಠರು. ಆದ್ರೆ ಹಿಂದೆ ಅಪ್ಪನ ಮೇಲೆ ಅಂದ್ರೆ ಯಡಿಯೂರಪ್ಪ ಅವ್ರ ವಿರುದ್ಧ ಪಿತೂರಿ ಮಾಡುತ್ತಿದ್ದ ನಾಯಕರು ಇದೀಗ ಪುತ್ರನ ಅಂದರೆ ಬಿ.ವೈ.ವಿಜಯೇಂದ್ರ ವಿರದ್ಧವೂ ಪಿತೂರಿ ಮುಂದುವರಿಸುತ್ತಾರಾ? ಅನ್ನೋ ಚರ್ಚೆ ಜೋರಾಗಿದೆ.
ಒಟ್ಟಾರೆ ಇದೆಲ್ಲಾ ಏನೇ ಇರಲಿ ಯಡಿಯೂರಪ್ಪ ಅವರಿಗೆ ಇದೆಲ್ಲವೂ ಹೊಸದಲ್ಲ ಅಂತಾ ಹೇಳ್ತಿದ್ದಾರೆ ಅವರ ಅಭಿಮಾನಿಗಳು. ಹೀಗಾಗಿ ರಾಜ್ಯ ಬಿಜೆಪಿ ಒಳಗೆ ಮತ್ತೊಂದು ಸುತ್ತಿನಲ್ಲಿ ಅಸಮಾಧಾನ ಸ್ಫೋಟವಾಗುತ್ತಾ? ಎಂಬ ಬಗ್ಗೆ ವಿರೋಧಿಗಳ ಚರ್ಚೆ ಕೂಡ ಶುರುವಾಗಿದೆ. ಇದೆಲ್ಲದಕ್ಕೂ ಉತ್ತರ ಮುಂದಿನ ದಿನಗಳಲ್ಲಿ ಸಿಗಲಿದ್ದು, ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನ ಸಿಕ್ಕ ತಕ್ಷಣವೇ ವಿಜಯೇಂದ್ರ ಅವರು ಅಲರ್ಟ್ ಆಗಿರುವಂತೆ ಕಾಣ್ತಿದೆ. ಈ ಕಾರಣಕ್ಕೆ ನಾಯಕರ ವಿಶ್ವಾಸಕ್ಕೆ ತೆಗೆದುಕೊಳ್ಳುವ ಮಹತ್ವದ ಕಾರ್ಯ ಕೂಡ ಆರಂಭಿಸಿದ್ದಾರೆ.












Click it and Unblock the Notifications