ಅಗತ್ಯ ವಸ್ತುಗಳ ಬೆಲೆ ಏರಿಸಿದ ಸಿಎಂ ಸಿದ್ದರಾಮಯ್ಯಗೆ ಕಪಾಳಮೋಕ್ಷ ಬಯಸುವ ಜನತೆ: ವಿಜಯೇಂದ್ರ

ಮಂಡ್ಯ, ಏಪ್ರಿಲ್‌ 08: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದು 20 ತಿಂಗಳಾಗಿದೆ. 50 ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಮಾಡಿರುವ ಸಿದ್ದರಾಮಯ್ಯನವರಿಗೆ ಕಪಾಳಮೋಕ್ಷ ಮಾಡಬೇಕೆಂದು ರಾಜ್ಯದ ಜನತೆ ಚರ್ಚೆ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ತಿಳಿಸಿದ್ದಾರೆ. ನಮ್ಮ ನೀರು ನಮ್ಮ ಹಕ್ಕು ಎಂದು ಮೊಸಳೆಕಣ್ಣೀರು ಸುರಿಸಿ ಪಾದಯಾತ್ರೆ ಮಾಡಿ ನಿಮ್ಮ ಮತ ಪಡೆದು ಅಧಿಕಾರಕ್ಕೆ ಬಂದ ಪಕ್ಷ ಕಾಂಗ್ರೆಸ್ ಪಕ್ಷವು ಆ ಮಾತನ್ನೇ ಮರೆತಿದೆ ಎಂದು ಟೀಕಿಸಿದರು. ಅಧಿಕಾರ ಕೊಡಿ, ಜನಪರ ಆಡಳಿತ ನೀಡುವುದಾಗಿ ತಿಳಿಸಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ. ಆದರೆ, ಅದೆಲ್ಲವನ್ನೂ ಕಾಂಗ್ರೆಸ್ಸಿಗರು ಮರೆತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಜನಾಕ್ರೋಶ ಯಾತ್ರೆಯ ಎರಡನೇ ದಿನವಾದ ಇಂದು ಇಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಪೆಟ್ರೋಲ್, ಡೀಸೆಲ್ ಬೆಲೆ ಏರಿಸಿದ ಕೇಂದ್ರ ಸರಕಾರಕ್ಕೆ ಕಪಾಳಮೋಕ್ಷ ಮಾಡಬೇಕೆಂದು ದುರಹಂಕಾರಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿಕೆ ಕೊಟ್ಟಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಜನವಿರೋಧಿ ಕಾಂಗ್ರೆಸ್ಸಿಗರು, ಸಿದ್ದರಾಮಯ್ಯನವರಿಗೆ ಕಪಾಳಮೋಕ್ಷ ಮಾಡಬೇಕೇ? ಕೇಂದ್ರದಲ್ಲಿ ಮೂರನೇ ಬಾರಿಗೆ ಸರಕಾರ ಬಂದು, ಬಡವರಿಗೆ ಉಜ್ವಲ ಸೇರಿ ಅನೇಕ ಜನಪರ ಯೋಜನೆಗಳನ್ನು ಕೊಟ್ಟಿರುವ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಜೀ ಅವರ ಸರಕಾರಕ್ಕೆ ಕಪಾಳಮೋಕ್ಷ ಮಾಡಬೇಕೇ ಎಂದು ಅವರು ಪ್ರಶ್ನೆಯನ್ನು ಮುಂದಿಟ್ಟರು.

BY Vijayendra attacks Siddaramaiah for increasing Prices Of Essential Commodities

ಕಾಂಗ್ರೆಸ್ಸಿಗರು ರಾಜ್ಯದಲ್ಲಿ ರಾಮರಾಜ್ಯ ನಿರ್ಮಿಸಲಿದ್ದಾರೆ ಎಂದು ಅಂದುಕೊಂಡಿದ್ದೆವು. ಅಭಿವೃದ್ಧಿ ಕೆಲಸ ಮಾಡುತ್ತಾರೆ. ರೈತರ ಕಣ್ಣೀರು ಒರೆಸುತ್ತಾರೆ. ದೀನದಲಿತರ, ಪರಿಶಿಷ್ಟ ಪಂಗಡದವರು, ಹಿಂದುಳಿದ ವರ್ಗಗಳಿಗೆ ನ್ಯಾಯ ಕೊಡಲಿದ್ದಾರೆ ಎಂದು ಭಾವಿಸಿದ್ದೆವು. ಆದರೆ, ಅದ್ಯಾವ ಕೆಲಸವನ್ನೂ ಮಾಡಿಲ್ಲ ಎಂದು ಟೀಕಿಸಿದರು. ಅಹಿಂದ ಹೆಸರು ಹೇಳಿಕೊಂಡು ಮತ ಪಡೆದು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಎಲ್ಲ ಹಿಂದುಳಿದ ಸಮುದಾಯಗಳನ್ನು ಮರೆತಿದ್ದಾರೆ. ಇವರು ಅಲ್ಪಸಂಖ್ಯಾತರು, ಮುಸಲ್ಮಾನರ ಜಪ ಮಾಡುತ್ತಿದ್ದು, ರಾಜ್ಯದ ಎಲ್ಲ ಹಿಂದುಳಿದ ಸಮಾಜಗಳನ್ನು ಸಂಪೂರ್ಣವಾಗಿ ಮರೆತಿದ್ದಾರೆ ಎಂದು ಆರೋಪಿಸಿದರು. ಜನಹಿತವನ್ನೇ ಮರೆತ ಪಕ್ಷ ಕಾಂಗ್ರೆಸ್ ಎಂದು ಹೇಳಿದರು.

ಈ ವೇಳೆ ಮಾಜಿ ಸಚಿವ ಮತ್ತು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಅವರು ಮಾತನಾಡಿ, ಕಾಂಗ್ರೆಸ್ ಸರಕಾರವು ರಾಜ್ಯದಲ್ಲಿ ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಹಾಕುವ ಕೋಮುವಾದಿ ರಾಜಕಾರಣವನ್ನು ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಕಾಂಗ್ರೆಸ್ಸಿನ ಜನವಿರೋಧಿ, ಬೆಲೆ ಏರಿಕೆ, ಭ್ರಷ್ಟಾಚಾರದ ನೀತಿ ವಿರುದ್ಧ ಈ ಹೋರಾಟ ನಡೆಯುತ್ತಿದೆ ಎಂದರು. ಕೇಂದ್ರ ಸರಕಾರವು ಗ್ಯಾಸ್ ಸಿಲಿಂಡರ್‍ಗೆ 50 ರೂ. ಹೆಚ್ಚಿಸಿದೆ.

ಬಿಜೆಪಿಯವರು ಕೇಂದ್ರದ ವಿರುದ್ಧ ಹೋರಾಟ ಮಾಡಲಿ ಎಂದು ಮುಖ್ಯಮಂತ್ರಿಗಳು ಹೇಳಿದ್ದನ್ನು ಪ್ರಸ್ತಾಪಿಸಿದ ಅವರು, ಮುಖ್ಯಮಂತ್ರಿಗಳೇ ಒಂದೂವರೆ ವರ್ಷದ ಹಿಂದೆ ಒಂದು ಸಿಲಿಂಡರ್ ಬೆಲೆ 1,113 ರೂ. ಇತ್ತು. ಪುಣ್ಯಾತ್ಮ ನರೇಂದ್ರ ಮೋದಿ ಒಂದು ಸಾರಿ 200 ರೂ. ಕಡಿಮೆ ಮಾಡಿದ್ದರು. ಮತ್ತೊಮ್ಮೆ 100 ರೂ. ಕಡಿಮೆ ಮಾಡಿದ್ದರು. ನಿನ್ನೆ 50 ರೂ. ಜಾಸ್ತಿ ಮಾಡಿದರೂ ಇನ್ನೂ 250 ರೂ. ಕಡಿಮೆ ಆಗಿದೆ ಎಂದು ಗಮನ ಸೆಳೆದರು.

ಪೆಟ್ರೋಲ್, ಡೀಸೆಲ್ ಬೆಲೆ 3 ರೂ. 93 ಪೈಸೆ ಒಮ್ಮೆ ಏರಿಸಿದ್ದ ರಾಜ್ಯವು ಇದೀಗ ಮತ್ತೆ 2 ರೂ. ಹೆಚ್ಚಿಸಿದೆ. ಆ ಪುಣ್ಯಾತ್ಮ ಕಡಿಮೆ ಮಾಡಿದ್ದರೆ, ಈ ಮನೆಹಾಳರು ರೇಟ್ ಜಾಸ್ತಿ ಮಾಡುತ್ತಿದ್ದಾರೆ ಎಂದು ಟೀಕಿಸಿದರು. 9 ರೂ. ಹಾಲಿನ ದರ ಏರಿಸಿ ಸಬ್ಸಿಡಿ ಕೊಡುತ್ತಾರೆ ಅಂದುಕೊಂಡಿದ್ದೆವು. ಆದರೆ, ಹಾಲಿನ 700 ಕೋಟಿ ಸಬ್ಸಿಡಿ ಬಾಕಿ ಉಳಿಸಿಕೊಂಡಿದ್ದಾರೆ ಎಂದು ಟೀಕಿಸಿದರು.

ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ವಿರೋಧ ಪಕ್ಷದ ನಾಯಕ ಆರ್. ಅಶೋಕ್, ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ , ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಾಜಿ ಉಪಮುಖ್ಯಮಂತ್ರಿ ಡಾ. ಸಿ.ಎನ್ ಅಶ್ವತ್ಥನಾರಾಯಣ್, ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್, ಮಾಜಿ ಸಂಸದೆ ಸುಮಲತಾ ಅಂಬರೀಷ್, ಮಾಜಿ ಸಚಿವ ನಾರಾಯಣಗೌಡ, ವಿಧಾನ ಪರಿಷತ್ತಿನ ಸದಸ್ಯ ಸಿ.ಟಿ ರವಿ , ಮಾಜಿ ಸಚಿವ ಬಿ. ಶ್ರೀರಾಮುಲು, ಮಂಡ್ಯ ಜಿಲ್ಲಾಧ್ಯಕ್ಷÀ ಡಾ. ಇಂದ್ರೇಶ್, ಮುಖಂಡರಾದ ಅಶೋಕ್ ಜಯರಾಮ್, ಸಾದೊಳಲು ಸ್ವಾಮಿ, ಇಂಡವಾಳು ಸಚ್ಚಿದಾನಂದ, ಡಾ. ಸಿದ್ದರಾಮಯ್ಯ ಮುಂತಾದ ಅನೇಕ ಹಿರಿಯ ನಾಯಕರು ಹಾಗೂ ಪಕ್ಷದ ಮುಖಂಡರು ಭಾಗವಹಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+